ಬುಧವಾರ, ಜೂಲೈ 8, 2020
28 °C
ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಡಿಡಿಪಿಐ ರತ್ನಯ್ಯ ಹೇಳಿಕೆ

ನಿಗದಿತ ವೇಳಾಪಟ್ಟಿಯಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ನಿಗದಿತ ವೇಳಾಪಟ್ಟಿಯಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಆತಂಕಪಡಬೇಡಿ. ಆತ್ಮವಿಶ್ವಾಸದಿಂದ ಪರೀಕ್ಷೆಗೆ ಸಿದ್ಧತೆ ಮುಂದುವರಿಸಿ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶಿಕ್ಷಣ ಇಲಾಖೆಯು ಇಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಫೋನ್‌–ಇನ್ ಕಾರ್ಯಕ್ರಮದಲ್ಲಿ ಮಾತನಾಡಿ, ‘ಕೊರೊನಾ ಸೋಂಕಿತರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತದೆಯೇ ಎಂಬ ಗೊಂದಲವಿದೆ. ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಪರೀಕ್ಷೆ ನಡೆಸಲು ಇಲಾಖೆ ಸಿದ್ಧತೆ ನಡೆಸಿದೆ’ ಎಂದು ತಿಳಿಸಿದರು.

‘ವೇಳಾಪಟ್ಟಿಯಂತೆಯೇ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸ್ಯಾನಿಟೈಸ್, ಮಕ್ಕಳು ಮತ್ತು ಸಿಬ್ಬಂದಿಗೆ ಥರ್ಮಲ್ ಟೆಸ್ಟ್ ಮಾಡಲಾಗುತ್ತದೆ. ಹೀಗಾಗಿ ಹಿಂದಿನ ವರ್ಷಗಳಂತೆ ಬೆಳಿಗ್ಗೆ 9.30ರ ಬದಲಿಗೆ 10.30ಕ್ಕೆ ಪರೀಕ್ಷೆ ಆರಂಭಿಲಾಗುತ್ತದೆ. ಮಕ್ಕಳು 9 ಗಂಟೆಗೆ ಕೇಂದ್ರದಲ್ಲಿ ಹಾಜರಿದ್ದು, ಥರ್ಮಲ್ ಟೆಸ್ಟ್‌ಗೆ ಒಳಗಾಗಬೇಕು’ ಎಂದು ಸ್ಪಷ್ಟಪಡಿಸಿದರು.

ಕಾರ್ಯಕ್ರಮಕ್ಕೆ ಕರೆ ಮಾಡಿದ ವಿದ್ಯಾರ್ಥಿಗಳು ಕೆಲವರು, ‘ಪರೀಕ್ಷಾ ಕೇಂದ್ರಕ್ಕೆ ನಾವೇ ತರಬೇಕಾ ಅಥವಾ ಇಲಾಖೆಯಿಂದ ಮಾಸ್ಕ್‌ ಮತ್ತು ಸ್ಯಾನಿಟೈಸರ್ ಕೊಡುತ್ತೀರಾ. ಅಂತರ ಕಾಯ್ದುಕೊಳ್ಳಲು ಎಷ್ಟು ದೂರ ಕುಳಿತುಕೊಳ್ಳಬೇಕು’ ಎಂದು ಪ್ರಶ್ನೆ ಮಾಡಿದರು.

ಇದಕ್ಕೆ ಉತ್ತರಿಸಿದ ರತ್ನಯ್ಯ, ‘ಸರ್ಕಾರ ಕೊರೊನಾ ಸೋಂಕು ಹರಡುವಿಕೆ ತಡೆಗೆ ಎಲ್ಲಾ ಮುನ್ನಚ್ಚರಿಕೆ ಕ್ರಮ ಕೈಗೊಂಡು ಪರೀಕ್ಷೆ ನಡೆಸುತ್ತದೆ. ಇಲಾಖೆಯಿಂದಲೇ ಮಾಸ್ಕ್‌ ಮತ್ತು ಸ್ಯಾನಿಟೈಸರ್‌ ಕೊಡುತ್ತೇವೆ. ಪರೀಕ್ಷೆಗೂ ಮುನ್ನ ಪುನರ್ಮನನ ತರಗತಿ ನಡೆಸುತ್ತೇವೆ’ ಎಂದು ಮಾಹಿತಿ ನೀಡಿದರು.

ಶಿಕ್ಷಕರನ್ನು ಸಂಪರ್ಕಿಸಿ: ‘ಪರೀಕ್ಷೆ ಬಗ್ಗೆ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಫೋನ್‌–ಇನ್ ಕಾರ್ಯಕ್ರಮ ನಡೆಸಲಾಗುತ್ತಿದೆ. ಜೂನ್‌ 4ರಂದು ಮತ್ತೊಮ್ಮೆ ಫೋನ್‌–ಇನ್ ಕಾರ್ಯಕ್ರಮ ನಡೆಯಲಿದೆ. ಮಕ್ಕಳು ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬರಬಾರದು. ಶಿಕ್ಷಕರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಉತ್ತರ ಪಡೆದುಕೊಳ್ಳಿ’ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಜಿಲ್ಲಾ ನೋಡಲ್‌ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಸಲಹೆ ನೀಡಿದರು.

ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಡಿವೈಪಿಸಿ ಮೋಹನ್‌ಬಾಬು, ಎವೈಪಿಸಿ ಸಿದ್ದೇಶ್, ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವಧನ, ಕೃಷ್ಣಪ್ಪ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು