ಭಾನುವಾರ, ಜನವರಿ 26, 2020
31 °C

ಅಂಗನವಾಡಿಯಲ್ಲಿ ಎಲ್‌ಕೆಜಿ– ಯುಕೆಜಿ ಆರಂಭಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಸರ್ಕಾರವು ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು’ ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ಧಿ ಸಮಿತಿ ಸಂಸ್ಥಾಪಕ ಅಧ್ಯಕ್ಷ ಸಿ.ಶಿವಣ್ಣ ಒತ್ತಾಯಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದಲ್ಲಿರುವ ಅಂಗನವಾಡಿ ನೌಕರರ ಸಂಘಟನೆಯೊಂದು 1995ರಿಂದ ಕಾರ್ಯಕರ್ತೆಯರಾಗಿ ಸೇವೆ ಸಲ್ಲಿಸುತ್ತಿರುವ ಕೇಂದ್ರಗಳಲ್ಲಿ ಮಾತ್ರ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕೆಂದು ಒತ್ತಾಯಿಸುತ್ತಿದೆ. ಇದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘1975ರಿಂದಲೂ ಅಂಗನವಾಡಿ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. 1995ರಿಂದ ಈಚೆಗೆ ನೇಮಕಗೊಂಡ ಕಾರ್ಯಕರ್ತೆಯರು ಇರುವ ಅಂಗನವಾಡಿಗಳಲ್ಲಿ ಮಾತ್ರ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕೆಂದು ತೀರ್ಮಾನಿಸಿದರೆ ಹಿರಿಯ ನೌಕರರಿಗೆ ಅನ್ಯಾಯವಾಗುತ್ತದೆ. ಸರ್ಕಾರ ಇದಕ್ಕೆ ಆಸ್ಪದ ಕೊಡಬಾರದು’ ಎಂದು ಮನವಿ ಮಾಡಿದರು.

‘ಅಂಗನವಾಡಿ ಕೇಂದ್ರಗಳ ವೇಳಾಪಟ್ಟಿಯನ್ನು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30ಕ್ಕೆ ನಿಗದಿಪಡಿಸಬೇಕು. ಸಂಜೆ 4 ಗಂಟೆವರೆಗೆ ಕಾರ್ಯ ನಿರ್ವಹಿಸಲು ಕಾರ್ಯಕರ್ತೆಯರಿಗೆ ತಿಂಗಳಿಗೆ ₹ 21,500 ಹಾಗೂ ಸಹಾಯಕಿಯರಿಗೆ ₹ 15 ಸಾವಿರ ಗೌರವಧನ ನಿಗದಿಪಡಿಸಬೇಕು. ಎಲ್ಲಾ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನೀಡಿ ಮೂಲಸೌಕರ್ಯ ಕಲ್ಪಿಸಬೇಕು’ ಎಂದು ಸಮಿತಿಯ ಬಂಗಾರಪೇಟೆ ತಾಲ್ಲೂಕು ಘಟಕದ ಅಧ್ಯಕ್ಷೆ ಕೆ.ಆರ್.ಶೋಭಾರಾಣಿ ಕೋರಿದರು.

ತರಬೇತಿ ನೀಡಿ: ‘ಎಸ್ಸೆಸ್ಸೆಲ್ಸಿ ಉತ್ತೀರ್ಣ ಮತ್ತು ಅನುತ್ತೀರ್ಣ ಎಂಬ ಭೇದಭಾವವಿಲ್ಲದೆ ಪ್ರತಿ ಕಾರ್ಯಕರ್ತೆಯರಿಗೂ ತರಬೇತಿ ನೀಡಿ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು. ಕಾರ್ಯಕರ್ತೆಯರನ್ನು ಎಲ್ಲಾ ಕೆಲಸಕ್ಕೆ ನಿಯೋಜಿಸುವುದನ್ನು ನಿಲ್ಲಿಸಿ ಐಸಿಡಿಎಸ್ ಯೋಜನೆ ಕಾರ್ಯ ಚಟುವಟಿಕೆಗೆ ಮಾತ್ರ ಸೀಮಿತಗೊಳಿಸಬೇಕು. ನಿವೃತ್ತ ನೌಕರರಿಗೆ ಪಿಂಚಣಿ ಮತ್ತು ಎನ್‌ಪಿಎಸ್ ಹಣ ನೀಡಬೇಕು. ಪ್ರತಿ ತಿಂಗಳು ೫ನೇ ತಾರೀಖಿನೊಳಗೆ ಗೌರವಧನ ನೀಡಬೇಕು’ ಎಂದರು.

ಸಮಿತಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವಿ.ನಿರ್ಮಲಾಬಾಯಿ, ಸಂಚಾಲಕಿ ನಾಗವೇಣಮ್ಮ, ಜಿಲ್ಲಾ ಘಟಕದ ಅಧ್ಯಕ್ಷೆ ಎಚ್.ಎನ್.ಸೀತಾಲಕ್ಷ್ಮೀ, ಮುಳಬಾಗಿಲು ತಾಲ್ಲೂಕು ಘಟಕದ ಅಧ್ಯಕ್ಷೆ ಶಶಿಕಲಾ, ಸದಸ್ಯೆ ಜಯಮ್ಮ ಹಾಜರಿದ್ದರು.

ಪ್ರತಿಕ್ರಿಯಿಸಿ (+)