ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಬೀದಿ ದೀಪ ನಿರ್ವಹಣೆ: ಏಜೆನ್ಸಿ ಕಪ್ಪುಪಟ್ಟಿಗೆ

ಕತ್ತಲೆಯಲ್ಲಿ ಮುಳುಗಿದ ನಗರ: ನಗರಸಭೆ ಸದಸ್ಯರ ಆಕ್ರೋಶ
Last Updated 21 ಫೆಬ್ರುವರಿ 2022, 14:46 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾ ಕೇಂದ್ರದಲ್ಲಿ ಬೀದಿ ದೀಪ ಅಳವಡಿಕೆ ಮತ್ತು ನಿರ್ವಹಣೆಯಲ್ಲಿ ವಿಫಲವಾಗಿರುವ ಕಾಂಚನಾ ಎಲೆಕ್ಟ್ರಿಕಲ್‌ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಲು ನಗರಸಭೆ ಸಾಮಾನ್ಯ ಸಭೆಯಲ್ಲಿ ಸರ್ವಾನುಮತ ನಿರ್ಣಯ ಕೈಗೊಳ್ಳಲಾಯಿತು.

ಇಲ್ಲಿ ಸೋಮವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಬೀದಿ ದೀಪ ಸಮಸ್ಯೆಯ ವಿಷಯ ಪ್ರಸ್ತಾಪಿಸಿದ ಸದಸ್ಯ ಸೂರಿ, ‘ನಗರದಲ್ಲಿ ಬೀದಿ ದೀಪ ಅಳವಡಿಕೆ ಮತ್ತು ನಿರ್ವಹಣೆ ಪ್ರಕ್ರಿಯೆ ಸಂಪೂರ್ಣ ಹಳಿ ತಪ್ಪಿದೆ. ಇದಕ್ಕೆ ಗುತ್ತಿಗೆದಾರರ ನಿರ್ಲಕ್ಷ್ಯವೇ ಕಾರಣ. ಗುತ್ತಿಗೆದಾರರ ವೈಫಲ್ಯದಿಂದ ನಗರ ಕತ್ತಲೆಯಲ್ಲಿ ಮುಳುಗುವಂತಾಗಿದೆ’ ಎಂದು ಆರೋಪಿಸಿದರು.

‘ಹೊರಗಿನ ವ್ಯಕ್ತಿಯಾದ ಗುತ್ತಿಗೆದಾರರು ಸದಸ್ಯರ ಕರೆ ಸ್ವೀಕರಿಸುವುದಿಲ್ಲ ಮತ್ತು ಸದಸ್ಯರಿಗೆ ಗೌರವ ಕೊಡುವುದಿಲ್ಲ. ಬೀದಿ ದೀಪಗಳ ಸಮಸ್ಯೆಯಲ್ಲಿ ನಗರಸಭೆ ಎಂಜಿನಿಯರ್‌ಗಳ ವೈಫಲ್ಯತೆ ಎದ್ದು ಕಾಣುತ್ತಿದೆ’ ಎಂದು ಸದಸ್ಯರಾದ ಬಿ.ಎಂ.ಮುಬಾರಕ್‌ ಮತ್ತು ಪ್ರಸಾದ್‌ಬಾಬು ಆಕ್ರೋಶ ವ್ಯಕ್ತಪಡಿಸಿದರು.

ಆಗ ಮಧ್ಯ ಪ್ರವೇಶಿಸಿದ ಸದಸ್ಯ ಎಸ್‌.ಆರ್‌.ಮುರಳಿಗೌಡ, ‘ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಅವಕಾಶವಿಲ್ಲ. ಕಾನೂನು ರೀತಿ ಅವರ ಬಿಲ್ ತಡೆ ಹಿಡಿದು ಬಾಕಿ ಕೆಲಸ ಮಾಡಿಸುವುದು ಉತ್ತಮ’ ಎಂದು ಸಲಹೆ ನೀಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಪ್ರಸಾದ್‌ಬಾಬು, ‘ಎಂಜಿನಿಯರ್‌ಗಳು ಗುತ್ತಿಗೆದಾರನಿಗೆ ನೋಟಿಸ್ ಕೊಡಿ, ಅವರು ಅದಕ್ಕೆ ಉತ್ತರ ನೀಡದಿದ್ದರೆ ಕಪ್ಪುಪಟ್ಟಿಗೆ ಸೇರಿಸಬಹುದು. ಈ ಕೆಲಸ ತಕ್ಷಣವೇ ಆಗಬೇಕು’ ಎಂದು ಆಗ್ರಹಿಸಿದರು. ಇದಕ್ಕೆ ಸಮ್ಮತಿಸಿದ ಅಧ್ಯಕ್ಷೆ ಶ್ವೇತಾ ಅವರು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಆದೇಶ ಕಳುಹಿಸುವಂತೆ ಆಯುಕ್ತರಿಗೆ ಆದೇಶಿಸಿದರು.

ಮನೆಗಳಿಗೆ ಹಾನಿ: ‘ನಗರದಲ್ಲಿ ಕೆಲ ತಿಂಗಳುಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದ ಸಾಕಷ್ಟು ಬಡಾವಣೆಗಳಲ್ಲಿ ವಾಸದ ಮನೆಗಳಿಗೆ ಹಾನಿಯಾಗಿದೆ. ಆ ಮನೆಗಳ ಮಾಲೀಕರಿಗೆ ಈವರೆಗೂ ಪರಿಹಾರ ಕಲ್ಪಿಸಲು ಸಾಧ್ಯವಾಗಿಲ್ಲ. ತುರ್ತು ಸಂದರ್ಭದಲ್ಲಿ ಸಭೆಯ ಅನುಮೋದನೆ ಇಲ್ಲದೆ ಪರಿಹಾರ ಕಲ್ಪಿಸಲು ಅವಕಾಶವಿದೆ’ ಎಂದು ಸದಸ್ಯ ಅಂಬರೀಶ್ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಪ್ರಸಾದ್, ‘ಹಾನಿಗೊಳಗಾಗಿರುವ ಮನೆಗಳಿಗೆ ಪರಿಹಾರ ಕೋರಿ 55 ಅರ್ಜಿ ಸಲ್ಲಿಕೆಯಾಗಿದ್ದು, ಅವುಗಳನ್ನು ತಹಶೀಲ್ದಾರ್‌ಗೆ ಕಳುಹಿಸಲಾಗಿದೆ. ಆದರೆ, ಅವರು ಅರ್ಜಿ ಸ್ವೀಕರಿಸುತ್ತಿಲ್ಲ’ ಎಂದು ಮಾಹಿತಿ ನೀಡಿದರು.

ಆಗ ಸದಸ್ಯರಾದ ಮುರಳಿಗೌಡ ಮತ್ತು ಅಂಬರೀಶ್‌, ‘ಮನೆಗಳಿಗೆ ಹಾನಿಯಾಗಿರುವುದು ಗ್ರಾಮೀಣ ಭಾಗದಲ್ಲಲ್ಲ, ನಗರ ಭಾಗದಲ್ಲಿ. ಇದಕ್ಕೆ ತಹಶೀಲ್ದಾರ್‌ರ ಪ್ರಮಾಣಪತ್ರ ಪಡೆಯುವ ಅಗತ್ಯವಿಲ್ಲ. ಸರ್ಕಾರವನ್ನು ನಂಬಿ ಕೂತರೆ ನಿರ್ಗತಿಕರು ಹಾಗೆಯೇ ಉಳಿಯುತ್ತಾರೆ. ಪ್ರಾಕೃತಿಕ ವಿಕೋಪದಡಿ ತುರ್ತು ಪರಿಹಾರ ಕಲ್ಪಿಸಲು ಅವಕಾಶವಿದೆ’ ಎಂದು ತಿಳಿಸಿದರು.

ಕೊಳವೆ ಬಾವಿ ಕೊರೆಸಿ: ‘ಖಾಸಗಿ ಕೊಳವೆ ಬಾವಿ ಮಾಲೀಕರಿಗೆ ಹಣ ಕೊಟ್ಟು ನಗರಕ್ಕೆ ನೀರು ಪೂರೈಸುವ ಬದಲು ನಗರಸಭೆಯಿಂದಲೇ ಕೊಳವೆ ಬಾವಿ ಕೊರೆಸಿ ನೀರು ಕೊಡಲು ವ್ಯವಸ್ಥೆ ಮಾಡಬೇಕು’ ಎಂದು ಸದಸ್ಯರಾದ ಮಂಜುನಾಥ್, ಮುಬಾರಕ್ ಸೂಚಿಸಿದರು.

‘ಕೆರೆಗೆ ಹತ್ತಿರದಲ್ಲಿರುವ ಕೋಟೆ ಬಡಾವಣೆಗೆ ಸಮರ್ಪಕವಾಗಿ ನೀರು ಪೂರೈಸಲು ಆಗುತ್ತಿಲ್ಲ. ಬಡಾವಣೆಯಲ್ಲಿ ಶೀಘ್ರವೇ ಕೊಳವೆ ಬಾವಿ ಕೊರೆಸಿ ನೀರಿನ ಸಮಸ್ಯೆ ಪರಿಹರಿಸಬೇಕು. ಅದೇ ರೀತಿ ನೀರಿನ ಸಮಸ್ಯಾತ್ಮಕ ವಾರ್ಡ್‌ಗಳಲ್ಲಿ ಪೈಪ್‌ಲೈನ್‌ ಅಳವಡಿಸಿ ನೀರು ಕೊಡಬೇಕು’ ಎಂದು ಸದಸ್ಯೆ ನಾರಾಯಣಮ್ಮಹೇಳಿದರು.

ವಿದ್ಯಾರ್ಥಿವೇತನ: ‘ರಾಜ್ಯ ಹಣಕಾಸು ನಿಧಿ (ಎಸ್‍ಎಫ್‍ಸಿ) ಹಾಗೂ ನಗರಸಭೆ ನಿಧಿ ಬಗ್ಗೆ, ಯೋಜನೆಗಳ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರೆ ವಾರ್ಡ್‌ಗಳಲ್ಲಿ ಪರಿಶಿಷ್ಟ ಮತ್ತು ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲು ಅನುಕೂಲವಾಗುತ್ತದೆ’ ಎಂದು ಮುಬಾರಕ್‌ ಮನವಿ ಮಾಡಿದರು.

ನಗರಸಭೆ ಆದಾಯದಲ್ಲಿ ಶೇ 7.25ರಷ್ಟು ಹಣವನ್ನು ವಿದ್ಯಾರ್ಥಿವೇತನಕ್ಕೆ ಮೀಸಲಿಡಲು, ಬೀದಿ ದೀಪಗಳ ನಿರ್ವಹಣೆಗೆ ಹೊಸದಾಗಿ ಟೆಂಡರ್‌ ಕರೆಯಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು. ನಗರಸಭೆ ಉಪಾಧ್ಯಕ್ಷ ಪ್ರವೀಣ್‌ಗೌಡ ಹಾಗೂ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT