ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರಪೇಟೆ: ಕಾರ್ಖಾನೆ ಸ್ಥಾಪನೆಗೆ ವಿದ್ಯಾರ್ಥಿಗಳ ಒತ್ತಾಯ

ಕೆ.ಸಿ. ರೆಡ್ಡಿ ಸರ್ಕಾರಿ ಕಾಲೇಜಿನಲ್ಲಿ ಸಂವಾದ
Last Updated 25 ಫೆಬ್ರುವರಿ 2023, 5:20 IST
ಅಕ್ಷರ ಗಾತ್ರ

ಬಂಗಾರಪೇಟೆ: ‘ಕ್ಷೇತ್ರದಲ್ಲಿ ಕಾರ್ಖಾನೆ, ಕಂಪನಿಗಳನ್ನು ಸ್ಥಾಪಿಸಿ ಯುವಕರಿಗೆ ಉದ್ಯೋಗ ಒದಗಿಸಬೇಕು’ ಎಂದು ಕೆ.ಸಿ. ರೆಡ್ಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರನ್ನು ಒತ್ತಾಯಿಸಿದರು.

ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ವಿದ್ಯಾರ್ಥಿಗಳು, ‘ಕಾಲೇಜಿನಲ್ಲಿ ಪದವಿ ಮುಗಿಸಿರುವ ಸಾವಿರಾರು ವಿದ್ಯಾರ್ಥಿಗಳು ಕೆಲಸಕ್ಕಾಗಿ ನಿತ್ಯ ಬೆಂಗಳೂರಿಗೆ ಹೋಗಿ ಬರುತ್ತಿದ್ದಾರೆ. ಇಲ್ಲೇ ಕಾರ್ಖಾನೆ, ಕಂಪನಿ ಸ್ಥಾಪಿಸಿದರೆ ಇಲ್ಲೇ ಕೆಲಸ ಸಿಗಲಿದೆ. ಕ್ಷೇತ್ರ ಕೂಡ ಮತ್ತಷ್ಟು ಅಭಿವೃದ್ಧಿಯಾಗಲಿದೆ’ ಎಂದರು.

ವಿದ್ಯಾವಂತ ಯುವಕ, ಯುವತಿಯರಿಗೆ ತರಬೇತಿ ಕೇಂದ್ರ ಸ್ಥಾಪಿಸಬೇಕು. ಕಾಲೇಜಿಗೆ ನಿತ್ಯ ಹೋಗಿ ಬರಲು ಸಮರ್ಪಕ ಬಸ್ ವ್ಯವಸ್ಥೆ ಮಾಡಬೇಕು. ಉಚಿತ ಲ್ಯಾಪ್‌ಟಾಪ್ ಕೆಲವರಿಗೆ ಮಾತ್ರ ಕೊಟ್ಟಿದ್ದು, ಎಲ್ಲರಿಗೂ ಈ ಸೌಕರ್ಯ ವಿಸ್ತರಿಸಬೇಕು ಎಂದರು.

ಕೆಲ ಗ್ರಾಮಗಳಿಗೆ ಈವರೆಗೆ ಬಸ್ ಸೌಲಭ್ಯ ಒದಗಿಸಿಲ್ಲ. ವಿದ್ಯಾರ್ಥಿಗಳ ಓಡಾಟಕ್ಕೆ ತುಂಬಾ ಅನಾನುಕೂಲವಾಗಿದೆ. ಅಂಥ ಗ್ರಾಮಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಕಾಲೇಜಿನಲ್ಲಿ ಕ್ಯಾಂಪಸ್ ಸೆಲೆಕ್ಷನ್‌ಗೆ ವ್ಯವಸ್ಥೆ ಮಾಡಿದರೆ ತುಂಬಾ ಅನುಕೂಲ ಆಗಲಿದೆ ಎಂದರು.

ಕೆಲ ವಿದ್ಯಾರ್ಥಿಗಳು, ತಮ್ಮ ಗ್ರಾಮಗಳಲ್ಲಿನ ರಸ್ತೆ ಸಮಸ್ಯೆ, ಶುದ್ಧ ನೀರಿನ ಘಟಕ ದುರಸ್ತಿ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಶಾಸಕರ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ‘ಅಭಿವೃದ್ಧಿಯೇ ನನ್ನ ಗುರಿ. ಮೂಲ ಸೌಕರ್ಯಕ್ಕೆ ಆದ್ಯತೆ ನೀಡಲಾಗಿದೆ. ಎಲ್ಲಾ ಗ್ರಾಮಗಳಿಗೂ ಕುಡಿಯುವ ನೀರಿನ ವ್ಯವಸ್ಥೆ, ಸಿಸಿ ರಸ್ತೆಗಳು ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿ ಮಾಡಿದ್ದೇನೆ’ ಎಂದು ಹೇಳಿದರು.

ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ, ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ, ಕಾಲೇಜು ವಿದ್ಯಾರ್ಥಿ ನಿಲಯ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಸೇರಿದಂತೆ ಹಲ ಶಾಲಾ ಕಟ್ಟಡ ನಿರ್ಮಿಸಲಾಗಿದೆ. ಹೆಚ್ಚಿನ ಗ್ರಾಮೀಣ ಮಕ್ಕಳು ಇದರ ಅನುಕೂಲ ಪಡೆಯುತ್ತಿದ್ದು, ನನಗೆ ತೃಪ್ತಿ ತಂದಿದೆ ಎಂದರು. ಪ್ರಾಂಶುಪಾಲ ಮುನಿಶಾಮಪ್ಪ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT