ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನ ವೃದ್ಧಿಗೆ ಸ್ಕೌಟ್ಸ್– ಗೈಡ್ಸ್ ಪೂರಕ

ಶಿಬಿರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಗೌಡ ಅಭಿಪ್ರಾಯ
Last Updated 3 ಆಗಸ್ಟ್ 2019, 13:23 IST
ಅಕ್ಷರ ಗಾತ್ರ

ಕೋಲಾರ: ‘ಮಕ್ಕಳ ಜ್ಞಾನ ವೃದ್ಧಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಚಟುವಟಿಕೆಗಳು ಪೂರಕ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಅಭಿಪ್ರಾಯಪಟ್ಟರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯ ಪುರಸ್ಕಾರ ಪೂರ್ವ ಸಿದ್ಧತಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ‘ಮಕ್ಕಳ ಮಾನಸಿಕ, ದೈಹಿಕ ಮತ್ತು ಸಾಮಾಜಿಕ ಸದೃಢತೆಗೆ ಸ್ಕೌಟ್ಸ್‌ ಗೈಡ್ಸ್‌ ಚಟುವಟಿಕೆಗಳು ಸಹಕಾರಿ’ ಎಂದು ಕಿವಿಮಾತು ಹೇಳಿದರು.

‘ಸ್ಕೌಟ್ಸ್ ತರಬೇತಿ ಪಡೆದ ವಿದ್ಯಾರ್ಥಿಗಳು ಇತರೆ ವಿದ್ಯಾರ್ಥಿಗಳಿಗಿಂತ ಭಿನ್ನವಾಗಿ ಕಾಣುತ್ತಾರೆ. ಅವರಲ್ಲಿ ಪರಿಸರ ಪ್ರಜ್ಞೆ, ಶಿಸ್ತು, ಸಂಯಮ, ಮಾನವೀಯ ಮೌಲ್ಯ, ಸಮಸ್ಯೆ ಎದುರಿಸುವ ಛಲ ಹಾಗೂ ನಾಯಕತ್ವ ಗುಣ ಕಾಣಬಹುದು. ಪೋಷಕರು ಮಕ್ಕಳನ್ನು ಸ್ಕೌಟ್ಸ್ ಮತ್ತು ಗೈಡ್ಸ್‌ ಸಂಸ್ಥೆಗೆ ಸೇರಿಸಬೇಕು. ಸಂಸ್ಥೆಯಿಂದ ದೊರೆಯುವ ಅನುಕೂಲತೆ ಬಗ್ಗೆ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

‘ವಿದ್ಯಾರ್ಥಿಗಳು ಜೀವನದಲ್ಲಿ ಮುಖ್ಯವಾಗಿ ಶಿಸ್ತು, ಸಂಯಮ, ದೇಶಪ್ರೇಮ ಬೆಳೆಸಿಕೊಳ್ಳಬೇಕು. ಶಿಸ್ತುಬದ್ಧ ಜೀವನದಿಂದ ಯಶಸ್ಸು ಸಾಧಿಸಬಹುದು. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಂಡರೆ ಗುರಿ ಸಾಧನೆಗೆ ಸಹಕಾರಿಯಾಗುತ್ತದೆ. ಸಮಯಪಾಲನೆ ಮಾಡದವರು ಗುರಿ ಸಾಧಿಸಲು ಸಾಧ್ಯವಾಗುವುದಿಲ್ಲ’ ಎಂದರು.

ಶಿಕ್ಷಕರ ಜವಾಬ್ದಾರಿ: ‘ಪ್ರತಿ ಸರ್ಕಾರಿ ಶಾಲೆಯಲ್ಲೂ ಸ್ಕೌಟ್ಸ್ ಗೈಡ್ಸ್ ಹಾಗೂ ಭಾರತ ಸೇವಾದಳ ಶಾಖೆ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಶಿಕ್ಷಕರಿಗೂ ತರಬೇತಿ ಕೊಡಿಸಲಾಗಿದೆ. ಮಕ್ಕಳನ್ನು ಉತ್ತಮ ಪ್ರಜೆಗಳಾಗಿ ಮಾಡುವುದು ಶಿಕ್ಷಕರ ಜವಾಬ್ದಾರಿ’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳು ಕೇವಲ ಪಠ್ಯವಿಷಯಕ್ಕೆ ಸೀಮಿತವಾಗಬಾರದು. ಕ್ರೀಡೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಪರಿಸರ ರಕ್ಷಣೆಗೆ ಪೋಷಕರಲ್ಲಿ ಜಾಗೃತಿ ಮೂಡಿಸಬೇಕು. ಮುಂದಿನ ಪೀಳಿಗೆಯ ಉಳಿವಿಗಾಗಿ ಗಿಡ ಮರ ಬೆಳೆಸಬೇಕು’ ಎಂದು ಮನವಿ ಮಾಡಿದರು.

ತರಬೇತಿ ಶಿಬಿರ: ‘ಶಿಕ್ಷಕರ ಸಹಕಾರದಿಂದ ಸಂಸ್ಥೆಯು ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಸಂಸ್ಥೆಯ ರಾಜ್ಯ ಪುರಸ್ಕಾರ ಪರೀಕ್ಷೆಗೆ ಸಿದ್ಧತೆ ಮಾಡಲು ವಿವಿಧ ಹಂತಗಳಲ್ಲಿ ತರಬೇತಿ ಶಿಬಿರ ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು’ ಎಂದು ಸ್ಕೌಟ್ಸ್‌ ಗೈಡ್ಸ್‌ ಸಂಸ್ಥೆಯ ಜಿಲ್ಲಾ ಸಂಘಟನಾ ಆಯುಕ್ತ ವಿ.ಬಾಬು ಹೇಳಿದರು.

‘ಪ್ರಸಕ್ತ ಸಾಲಿನ ಸ್ಕೌಟ್ಸ್‌ ಗೈಡ್ಸ್‌ ವಿದ್ಯಾರ್ಥಿಗಳಿಗೆ ನಾಯಕತ್ವ ತರಬೇತಿ ಶಿಬಿರ, ಬ್ಯಾಡ್ಜ್ ಶಿಬಿರ, ದ್ವಿತೀಯ ಸೋಪಾನ ಪರೀಕ್ಷಾ ಶಿಬಿರ, ತೃತೀಯ ಸೋಪಾನ, ರಾಜ್ಯ ಪುರಸ್ಕಾರ ತರಬೇತಿ ಶಿಬಿರ ಮತ್ತು ಮೇಳ ಹಮ್ಮಿಕೊಳ್ಳಲಾಗಿತ್ತು’ ಎಂದು ವಿವರಿಸಿದರು.

ಸಂಸ್ಥೆಯ ಜಿಲ್ಲಾ ಆಯುಕ್ತ ಕೆ.ಆರ್.ಸುರೇಶ್, ಸ್ಥಾನಿಕ ಆಯುಕ್ತ ಕೆ.ಎನ್.ತ್ಯಾಗರಾಜು, ಸಂಘಟಕ ವಿಶ್ವನಾಥ್, ಜಂಟಿ ಕಾರ್ಯದರ್ಶಿ ಉಮಾದೇವಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT