ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಧಿಕಾರಿ ಆತ್ಮಹತ್ಯೆ; ಸಿದ್ದರಾಮಯ್ಯ ರಾಜೀನಾಮೆಗೆ ಅಶೋಕ ಆಗ್ರಹ

Published 27 ಮೇ 2024, 13:03 IST
Last Updated 27 ಮೇ 2024, 13:03 IST
ಅಕ್ಷರ ಗಾತ್ರ

ಕೋಲಾರ: ‘ಅಧಿಕಾರಿಯೊಬ್ಬರು ಹಣದ ದುರುಪಯೋಗ ಸಂಬಂಧ ಸಚಿವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು ಮುಖ್ಯಮಂತ್ರಿಗೆ ನೈತಿಕತೆ ಇದ್ದರೆ, ಮಾನ ಮರ್ಯಾದೆ ಇದ್ದರೆ ಕೂಡಲೇ ರಾಜೀನಾಮೆ ನೀಡಿ ಮನೆಗೆ ಹೋಗಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಈ ಸರ್ಕಾರ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದೆ. ಈಗ ದಾಖಲೆ ಸಮೇತ ಸಿಕ್ಕಿಬಿದ್ದಿದೆ. ಈ ಸರ್ಕಾರವು ಕರ್ನಾಟಕ ರಾಜ್ಯವನ್ನು ಲೂಟಿ ಮಾಡಿ ಬೇರೆ ಬೇರೆ ರಾಜ್ಯಗಳ ಚುನಾವಣೆಗೆ ಹಣ ಕಳುಹಿಸಿಕೊಡುತ್ತಿದೆ ಎಂಬುದಾಗಿ ಈಚೆಗೆ ಪ್ರಧಾನಿ ಮೋದಿ ಹೇಳಿದ್ದರು. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ’ ಎಂದು ಪ್ರಶ್ನಿಸಿದರು.

‘ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಲೂಟಿ ಸರ್ಕಾರ ಎಂದು ಟೀಕಿಸುತ್ತಿದ್ದವರಿಗೆ ಸಿದ್ದರಾಮಯ್ಯ ದಾಖಲೆ ಕೇಳುತ್ತಿದ್ದರು. ಶಿವಮೊಗ್ಗದಲ್ಲಿ ಅಕೌಂಟೆಂಟ್‌ ಚಂದ್ರಶೇಖರ್ ‌ಎಂಬುವರು ₹ 187 ಕೋಟಿ ಅವ್ಯವಹಾರ ಸಂಬಂಧ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‌ ನೋಟ್‌ನಲ್ಲಿ ಮಂತ್ರಿ ಹಾಗೂ ಅಧಿಕಾರಿಗಳ ಹೆಸರು ನಮೂದಿಸಿದ್ದಾರೆ. ಲೂಟಿ ಸರ್ಕಾರ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಇನ್ನೇನು ಬೇಕು ಸಿದ್ದರಾಮಯ್ಯ’ ಎಂದು ಕೇಳಿದರು.

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ. ನಿತ್ಯ ಕೊಲೆ, ಸುಲಿಗೆ ನಡೆಯುತ್ತಿವೆ. ಕಾಲೇಜಿಗೆ, ಕೆಲಸಕ್ಕೆ ಹೋದ ಹೆಣ್ಣು ಮಕ್ಕಳು ಮನೆಗೆ ವಾಪಸ್‌ ಬರುತ್ತಿಲ್ಲ. ಮಹಿಳೆಯರ ಬದುಕುವ ಗ್ಯಾರಂಟಿ ಕಿತ್ತುಕೊಂಡಿದೆ. ಯಾವುದೇ ಅಭಿವೃದ್ಧಿ ಕೆಲಸವೂ ನಡೆಯುತ್ತಿಲ್ಲ’ ಎಂದು ಟೀಕಾ ಪ್ರಹಾರ ನಡೆಸಿದರು.

‘ಕೈಗಾರಿಕೆಗಳು ಚೆನ್ನೈ, ಹೈದರಾಬಾದ್‌ ಕಡೆ ಹೋಗುತ್ತಿವೆ. ನಮ್ಮ ಸರ್ಕಾರವಿದ್ದಾಗ ಹೂಡಿಕೆಯಾಗಿದ್ದ ಬಂಡವಾಳ ವಾಪಸ್‌ ಹೋಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಬಿಬಿಎಂಪಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿಯನ್ನು ಸೆಕ್ಯೂರಿಟಿ ಏಜೆನ್ಸಿಗೆ ನೀಡಿದೆ. ಇದಕ್ಕಿಂತ ಮಾನಗೇಡಿ ಸರ್ಕಾರ ಇರಲು ಸಾಧ್ಯವೇ? ಶಾಲೆಯ ಕಾವಲು ಕಾಯಲು ಕೊಡುತ್ತಿದ್ದಾರೆಯೇ, ಪಾಠ ಮಾಡಲು ಕೊಡುತ್ತಿದ್ದಾರೆಯೇ’ ಎಂದು ಪ್ರಶ್ನಿಸಿದರು.

‘ರಾಜ್ಯದ ಹೈನುಗಾರರಿಗೆ ಕಳೆದ ಏಳು ತಿಂಗಳಿಂದ ಹಾಲಿನ ಸುಮಾರು₹ 900 ಕೋಟಿ ಪ್ರೋತ್ಸಾಹಧನ ನೀಡಿಲ್ಲ. ಆ್ಯಂಬುಲೆನ್ಸ್‌ ಚಾಲಕರಿಗೆ, ಸಾರಿಗೆ ಇಲಾಖೆ ನೌಕರರಿಗೆ ವೇತನ ನೀಡಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT