ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಾಮಗಾರಿಗೆ ಸಹಕರಿಸಿ- ನಾಗರಿಕರಿಗೆ ಶಾಸಕ ಕೆ.ಆರ್. ರಮೇಶ್ ಕುಮಾರ್

Last Updated 25 ಮಾರ್ಚ್ 2022, 2:48 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ನಾಗರಿಕರು ಸಹಕರಿಸಬೇಕು. ವೈಯಕ್ತಿಕ ಹಿತದೃಷ್ಟಿಯಿಂದ ಯಾವುದೇ ಕಾಮಗಾರಿಗೆ ವಿರೋಧ ವ್ಯಕ್ತಪಡಿಸುವುದನ್ನು ಬಿಡಬೇಕು ಎಂದು ಶಾಸಕ ಕೆ.ಆರ್. ರಮೇಶ್ ಕುಮಾರ್ ಹೇಳಿದರು.

ಪಟ್ಟಣದ ರಾಜಧಾನಿ ಮಾವಿನಕಾಯಿ ಮಂಡಿ ಸಮೀಪ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಪಟ್ಟಣದ ನಾಗರಿಕರ ಸಭೆಯಲ್ಲಿ ಅವರು ಮಾತನಾಡಿದರು.

ಪಟ್ಟಣದ ಶ್ರೀನಿವಾಸಪುರ– ಚಿಂತಾಮಣಿ ರಸ್ತೆಯಲ್ಲಿ ನಿರ್ಮಿಸಲಾಗಿರುವ ರೈಲ್ವೆ ಕೆಳಸೇತುವೆಯಲ್ಲಿ ಮಳೆಗಾಲದಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದರೆ, ನೀರು ಹೊರಹೋಗಲು ಕಾಲುವೆ ನಿರ್ಮಿಸಲು ಸಮೀಪದ ನಾಗರಿಕರು ಅವಕಾಶ ನೀಡುತ್ತಿಲ್ಲ ಎಂದು ಹೇಳಿದರು.

ಪಟ್ಟಣದ ನಾಗರಿಕರ ಹಿತ ಮುಖ್ಯ. ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅಡ್ಡಗಾಲು ಹಾಕುವುದು ಸರಿಯಲ್ಲ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಾಲುವೆ ಹಾಗೂ ರಸ್ತೆ ನಿರ್ಮಿಸಲು ಸಿದ್ಧರಿದ್ದಾರೆ. ಅವರಿಗೆ ಬೇಕಾದ ಸಹಕಾರ ನೀಡುವ ಬದಲು ಕಾಮಗಾರಿ ಕೈಗೊಳ್ಳಲು ಅಡ್ಡಿಪಡಿಸಿದರೆ ಸಮಸ್ಯೆಗೆ ಪರಿಹಾರ ದೊರೆಯುವುದಿಲ್ಲ. ಹಾಗೆ ಮಾಡುವುದರಿಂದ ಎಲ್ಲರಿಗೂ ತೊಂದರೆಯಾಗುತ್ತದೆ ಎಂದು ಹೇಳಿದರು.

ಹಾಗೆಯೇ, ಚಿಂತಾಮಣಿ ಸರ್ಕಲ್‌ವರೆಗೆ ರಸ್ತೆಯ ಎರಡೂ ಕಡೆ ಚರಂಡಿ ನಿರ್ಮಿಸಲೂ ಸಾಧ್ಯವಾಗಿಲ್ಲ. ಮಳೆಗಾಲದಲ್ಲಿ ನೀರು ಮನೆಗಳಿಗೆ ನುಗ್ಗಿದರೆ ಹೆಚ್ಚಿನ ನಷ್ಟ ಉಂಟಾಗುತ್ತದೆ. ಆದ್ದರಿಂದ ಚರಂಡಿ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕು. ಪಟ್ಟಣದ ಯಾವುದೇ ಭಾಗದಲ್ಲಿ ಸುಗಮ ಸಂಚಾರ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಮಳೆ ನೀರು ಮನೆಗಳಿಗೆ ನುಗ್ಗದಂತೆ ಇರಲು ಅಗತ್ಯವಾದ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಸ್. ಆನಂದ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಂ.ಕೆ. ಹುಸೇನ್ ಸಾಬ್, ಸಹಾಯಕ ಎಂಜಿನಿಯರ್ ನಾಗರಾಜ್, ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್ ಮಲ್ಲಿಕಾರ್ಜುನ್, ಗುತ್ತಿಗೆದಾರ ಭಕ್ತವತ್ಸಲಂ, ಪುರಸಭೆ ಮುಖ್ಯಾಧಿಕಾರಿ ವೈ.ಎನ್. ಸತ್ಯನಾರಾಯಣ, ಪರಿಸರ ಎಂಜಿನಿಯರ್ ಡಿ. ಶೇಖರರೆಡ್ಡಿ, ಸದಸ್ಯರಾದ ಭಾಸ್ಕರ್, ಸಂಜಯ್ ಸಿಂಗ್, ಶ್ರೀನಾಥ್, ಕೆ. ಅನ್ನೀಸ್ ಅಹ್ಮದ್, ಮುಖಂಡರಾದ ದಿಂಬಾಲ ಅಶೋಕ್, ಕೆ.ಕೆ. ಮಂಜುನಾಥರೆಡ್ಡಿ
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT