ಶುಕ್ರವಾರ, ಜುಲೈ 30, 2021
28 °C
ಜಿಲ್ಲೆಯಲ್ಲಿ ಆಕ್ರೋಶದ ಕಿಡಿ ಹೊತ್ತಿಸಿದ ತಹಶೀಲ್ದಾರ್‌ ಕೊಲೆ ಪ್ರಕರಣ

ಬೀದಿಗಿಳಿದ ಸರ್ಕಾರಿ ಅಧಿಕಾರಿಗಳು– ನೌಕರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಬಂಗಾರಪೇಟೆ ತಹಶೀಲ್ದಾರ್‌ ಬಿ.ಕೆ.ಚಂದ್ರಮೌಳೇಶ್ವರ ಕೊಲೆ ಪ್ರಕರಣವು ಜಿಲ್ಲೆಯಾದ್ಯಂತ ಆಕ್ರೋಶದ ಕಿಡಿ ಹೊತ್ತಿಸಿದ್ದು, ಸರ್ಕಾರಿ ಅಧಿಕಾರಿಗಳು, ನೌಕರರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಶುಕ್ರವಾರ ಬೀದಿಗಿಳಿದು ಬೃಹತ್‌ ಹೋರಾಟ ನಡೆಸಿದರು.

ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲಾ ತಾಲ್ಲೂಕುಗಳಲ್ಲೂ ಸರ್ಕಾರಿ ನೌಕರರು ಬೈಕ್‌ ರ್‌್ಯಾಲಿ, ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್‌ ಕೊಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿದರು. ನೌಕರರು ದಿನನಿತ್ಯದಂತೆ ಬೆಳಿಗ್ಗೆ ಕಚೇರಿಗಳಿಗೆ ಹಾಜರಾಗಿದ್ದರು. ಬಳಿಕ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕರೆಗೆ ಓಗೂಟ್ಟು ದೈನಂದಿನ ಕೆಲಸ ಬಹಿಷ್ಕರಿಸಿ ಕಚೇರಿಯಿಂದ ಹೊರ ಬಂದು ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ ಭವನ, ತಾಲ್ಲೂಕು ಕಚೇರಿಗಳು, ಪ್ರಮುಖ ವೃತ್ತ ಹಾಗೂ ಜಂಕ್ಷನ್‌ಗಳಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆ ಮಾಡಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಕಂದಾಯ, ಭೂಮಾಪನ, ಆರ್‌ಡಿಪಿಆರ್‌, ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ಪದೇಪದೇ ದೌರ್ಜನ್ಯ ನಡೆಯುತ್ತಿದೆ. ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರಿಗೆ ರಕ್ಷಣೆ ಇಲ್ಲವಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಭಯದ ವಾತಾವರಣದಲ್ಲಿ ಕೆಲಸ ಮಾಡುವ ವಾತಾವರಣ ಸೃಷ್ಟಿಯಾಗಿದೆ’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಬಿ.ಅಶೋಕ್‌ ಕಿಡಿಕಾರಿದರು.

‘ಕಂದಾಯ ಇಲಾಖೆಯು ಎಲ್ಲಾ ಇಲಾಖೆಗಳಿಗೆ ಮಾತೃ ಇಲಾಖೆ ಇದ್ದಂತೆ. ತಾಯಿ ಮೇಲೆ ಕೈ ಮಾಡುವುದು ದೇಶ ದ್ರೋಹದ ಕೆಲಸ. ಹಾಡಹಗಲೇ ಸಾರ್ವಜನಿಕವಾಗಿ ನಡೆದ ತಹಶೀಲ್ದಾರ್‌ ಕೊಲೆಯಿಂದ ಅಧಿಕಾರಿ ವಲಯ ಬೆಚ್ಚಿಬಿದ್ದಿದೆ. ಈ ಪ್ರಕರಣ ನೆನೆದರೆ ನಾವು ಕರ್ನಾಟಕದಲ್ಲಿ ಇದ್ದೇವಾ ಅಥವಾ ಬಿಹಾರದಲ್ಲಿ ಇದ್ದೇವಾ ಎಂಬ ಆತಂಕ ಕಾಡುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಸರ್ಕಾರ ವಿಫಲ: ‘ರಾಜ್ಯದಲ್ಲಿ ಕಠಿಣ ಕಾನೂನು ಜಾರಿಯಲ್ಲಿರದ ಕಾರಣ ಇಂತಹ ಕೃತ್ಯ ಮರುಕಳಿಸುತ್ತಿವೆ. ನೌಕರರಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ಹಾಗೂ ಪೊಲೀಸ್‌ ಇಲಾಖೆ ವಿಫಲವಾಗಿವೆ. ತಹಶೀಲ್ದಾರ್‌ ಕೊಲೆ ಪ್ರಕರಣವು ಅಧಿಕಾರಿಗಳ ಮತ್ತು ಸಿಬ್ಬಂದಿ ವರ್ಗದ ನೈತಿಕ ಸ್ಥೈರ್ಯ ಕುಗ್ಗಿಸಿದೆ’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

‘ಅಧಿಕಾರಿಗಳು, ನೌಕರರ ಮೇಲೆ ಪ್ರತಿ ಬಾರಿ ದೌರ್ಜನ್ಯ ನಡೆದಾಗ ಸರ್ಕಾರ ರಕ್ಷಣೆ ನೀಡುವ ಮಾತನಾಡುತ್ತದೆ. ಆದರೆ, ಸರ್ಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ನೌಕರರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಸರ್ಕಾರಕ್ಕೆ ತಾಲ್ಲೂಕು ದಂಡಾಧಿಕಾರಿಗೆ ರಕ್ಷಣೆ ಕೊಡಲು ಸಾಧ್ಯವಾಗದಿದ್ದರೆ ಜನಸಾಮಾನ್ಯರ ಗತಿಯೇನು?’ ಎಂದು ಪ್ರಶ್ನಿಸಿದರು.

ರಕ್ಷಣೆ ನೀಡಿ: ‘ತಹಶೀಲ್ದಾರ್‌ ಕೊಲೆ ಪ್ರಕರಣದ ತನಿಖೆಗೆ ವಿಶೇಷ ಪೊಲೀಸ್‌ ತಂಡ ರಚಿಸಬೇಕು. ಶೀಘ್ರವಾಗಿ ತನಿಖಾ ಕಾರ್ಯ ಪೂರ್ಣಗೊಳಿಸಿ ಆರೋಪಿಗೆ ಶಿಕ್ಷೆಯಾಗುವಂತೆ ಮಾಡಬೇಕು. ಚಂದ್ರಮೌಳೇಶ್ವರ ಅವರ ಕುಟುಂಬ ಸದಸ್ಯರಿಗೆ ಸರ್ಕಾರಿ ನೌಕರಿ ನೀಡುವುದರ ಜತೆಗೆ ಹೆಚ್ಚಿನ ಪರಿಹಾರ ನೀಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಅಧಿಕಾರಿಗಳು ಮತ್ತು ನೌಕರರಿಗೆ ರಕ್ಷಣೆ ನೀಡಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ನೌಕರರು ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು