ಬುಧವಾರ, ಆಗಸ್ಟ್ 4, 2021
21 °C

ತಹಶೀಲ್ದಾರ್‌ ಚಂದ್ರಮೌಳೇಶ್ವರ ಮಾನವೀಯತೆಯ ಆಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಗಾರಪೇಟೆ: ಇಬ್ಬರ ವ್ಯಕ್ತಿಗಳ ಜಮೀನು ಸರ್ವೆ ವಿಚಾರದಲ್ಲಿ ಚಾಕು ಇರಿತಕ್ಕೆ ಒಳಗಾಗಿ ಹತ್ಯೆಗೀಡಾದ ಇಲ್ಲಿನ ತಹಶೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಅವರು ಮಾನವೀಯತೆ ಖಣಿಯಾಗಿದ್ದರು.

ಎರಡೂವರೆ ವರ್ಷದಿಂದ ಇಲ್ಲಿ ದಂಡಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು ಎಲ್ಲರಿಗೂ ಸ್ಪಂದಿಸುತ್ತಿದ್ದರು.
ಸೌಮ್ಯ ಸ್ವಭಾವದವರಾಗಿದ್ದ ಅವರು ಜನಸಾಮಾನ್ಯರನ್ನು ಗೌರವದಿಂದ ಮಾತನಾಡಿಸಿ, ಅವರ ಕೆಲಸ ಮಾಡಿಕೊಡುತ್ತಿದ್ದರು.

ಲಾಕ್‌ಡೌನ್ ಸಂದರ್ಭ ಹಗಲು ರಾತ್ರಿ ಶ್ರಮಿಸಿ ಕೊರೊನ ಸೋಂಕು ತಡೆಯುವಲ್ಲಿ ಅವಿರತ ಪ್ರಯತ್ನ ಮಾಡಿದ್ದರು.
ಜಿಲ್ಲಾಧಿಕಾರಿ ಆದೇಶದಂತೆ ಈಚೆಗೆ ತಾಲ್ಲೂಕಿನಲ್ಲಿ ಸರ್ಕಾರಿ ಜಾಗ, ಗುಂಡುತೋಪು, ಕೆರೆಯಂಗಳ, ಸ್ಮಶಾನ ಜಾಗ ಒತ್ತುವರಿ ತೆರವು ಕಾರ್ಯಾಚರಣೆ ನೇತೃತ್ವ ವಹಿಸಿದ್ದರು. ಏನೇ ಸಮಸ್ಯೆ ಇದ್ದರೂ ತಾಳ್ಮೆಯಿಂದ ಬಗೆಹರಿಸುವ ನೈಪುಣ್ಯತೆ
ಹೊಂದಿದ್ದರು.

ಒಂದು ಕೋಟಿ ಪರಿಹಾರಕ್ಕೆ ಆಗ್ರಹ: ‘ದಕ್ಷ ಅಧಿಕಾರಿ ಚಂದ್ರಮೌಳೇಶ್ವರ ಅವರಿಗೆ ರಕ್ಷಣೆ ನೀಡುವಲ್ಲಿ ಇಲ್ಲಿ ಪೊಲೀಸ್ ಇಲಾಖೆ ಎಡವಿದೆ. ರಾಜ್ಯ ಸರ್ಕಾರದ ಅಸಮರ್ಥ ಆಡಳಿತದಿಂದಾಗಿ ಪ್ರಾಮಾಣಿಕ ಅಧಿಕಾರಿಯ ಹತ್ಯೆ ನಡೆದಿದೆ. ಇದಕ್ಕೆ ಪೊಲೀಸ್ ಇಲಾಖೆ ಮತ್ತು ಸರ್ಕಾರವೇ ಹೊಣೆ’ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆರೋಪಿಸಿದರು.

ಮೃತ ತಹಶೀಲ್ದಾರ್ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ನೀಡಬೇಕು. ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.

***

ಕೊಲೆ ಆರೋಪಿ ನಿವೃತ್ತ ಶಿಕ್ಷಕ

ಬಂಗಾರಪೇಟೆ: ತಹಶೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಅವರನ್ನು ಹತ್ಯೆ ಮಾಡಿದ ವೆಂಕಟಾಚಲಪತಿ ಅವರು ಬೋಡೇನಹಳ್ಳಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕರಾಗಿ 5 ವರ್ಷದ ಹಿಂದೆ ನಿವೃತ್ತಿಯಾಗಿದ್ದರು. ಪ್ರಸ್ತುತ ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದರು.

ಜಮೀನು ವಿಚಾರದಲ್ಲಿ ಇವರಿಗೂ ಪಕ್ಕದ ಜಮೀನಿನ ಮಾಲೀಕ ರಾಮಮೂರ್ತಿ ಅವರಿಗೆ ಏಳೆಂಟು ವರ್ಷದಿಂದ ಗಲಾಟೆ ನಡೆದಿತ್ತು. ಗುರುವಾರ ಸಂಜೆ ಅದೇ ಜಮೀನಿನ ವಿಚಾರವಾಗಿ ಸರ್ವೆ ಮಾಡಲು ಸ್ಥಳಕ್ಕೆ ತೆರಳಿದ್ದ ತಹಶೀಲ್ದಾರ್ ಅವರನ್ನು ಸಬ್ಇನ್‌ಸ್ಪೆಕ್ಟರ್ ಸಮ್ಮುಖದಲ್ಲೇ ಹತ್ಯೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆರೋಪಿ ಬಂಧನ: ಕಾಮಸಮುದ್ರ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಹತ್ಯೆ ಮಾಡಲು ಬಳಸಿದ ಚಾಕು ಅನ್ನು ವಶಕ್ಕೆ ಪಡೆಯಲಾಗಿದೆ.

ಐಜಿಪಿ ಭೇಟಿ: ಐಜಿಪಿ ಸೀಮಂತಕುಮಾರ್ ಸಿಂಗ್ ಅವರು ಗುರುವಾರ ರಾತ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪೊಲೀಸ್ ವರಿಷ್ಠಾಧಿಕಾರಿ ಮಹ್ಮದ್ ಸುಜೀತಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.