ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ ಅಧಿಕಾರಿಗಳಿಗೆ ಶಾಸಕ ಶ್ರೀನಿವಾಸಗೌಡ ಕಿವಿಮಾತು

Last Updated 29 ಜುಲೈ 2021, 15:09 IST
ಅಕ್ಷರ ಗಾತ್ರ

ಕೋಲಾರ: ‘ಗ್ರಾಮ ವಿಕಾಸ ಯೋಜನೆಯಡಿ ಸರ್ಕಾರದಿಂದ ಬರುವ ಅನುದಾನವನ್ನು ಸಮರ್ಪಕವಾಗಿ ಬಳಸಿ ಗ್ರಾಮಗಳನ್ನು ಅಭಿವೃದ್ಧಿಪಡಿಸಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಗ್ರಾ.ಪಂ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮ ವಿಕಾಸ ಹಾಗೂ ಇತರೆ ಯೋಜನೆಗಳ ಸಂಬಂಧ ಇಲ್ಲಿ ಗುರುವಾರ ಗ್ರಾ.ಪಂ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ‘ನರೇಗಾ ಯೋಜನೆಯು ಮಹತ್ವದ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಗ್ರಾಮೀಣ ಭಾಗಕ್ಕೆ ಸಾಕಷ್ಟು ಅನುದಾನ ಬರುತ್ತಿದೆ’ ಎಂದು ಹೇಳಿದರು.

‘ನರೇಗಾ ಅನುದಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ರಸ್ತೆ ಸೇರಿದಂತೆ ಗ್ರಾಮಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು. ಗ್ರಾ.ಪಂಗಳು ಅಸ್ತಿತ್ವಕ್ಕೆ ಬಂದ ನಂತರ ಗ್ರಾಮೀಣ ಭಾಗದಲ್ಲಿ ಸಮಸ್ಯೆಗಳು ಬೇಗನೆ ಬಗೆಹರಿಯುತ್ತಿವೆ. ಗ್ರಾಮದ ಮಂದಿಯೇ ಜನಪ್ರತಿನಿಧಿಗಳಾಗಿ ಆಯ್ಕೆ ಆಗುವುದರಿಂದ ಸ್ಥಳೀಯ ಸಮಸ್ಯೆಗಳನ್ನು ಬೇಗನೆ ತಿಳಿದು ಪರಿಹರಿಸಲು ಸಾಧ್ಯವಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.

‘ಗ್ರಾಮಗಳಲ್ಲಿನ ಸಮಸ್ಯೆಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ಸಿದ್ಧಪಡಿಸಿಕೊಂಡು ಗ್ರಾಮ ವಿಕಾಸ ಯೋಜನೆ ಸೇರಿದಂತೆ ಸರ್ಕಾರದ ಅನುದಾನ ಮತ್ತು ತೆರಿಗೆ ಹಣದ ಮೂಲಕ ಗ್ರಾಮಗಳನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬೇಕು’ ಎಂದು ಕಿವಿಮಾತು ಹೇಳಿದರು.

‘ನಾನು ಮೊದಲ ಬಾರಿಗೆ ಶಾಸಕನಾಗಿದ್ದ ಸಂದರ್ಭದಲ್ಲಿ ಬಡವರಿಗೆ ಆಶ್ರಯ ಯೋಜನೆಯಡಿ ಹಕ್ಕುಪತ್ರ ಕೊಟ್ಟಿದ್ದೆವು. ಆದರೆ, ಈಗ ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಆಶ್ರಯ ಯೋಜನೆಯಡಿ ನಿವೇಶನ ಮತ್ತು ಮನೆ ಕೊಡಲು ಆಗುತ್ತಿಲ್ಲ. ಸರ್ಕಾರದಲ್ಲಿ ಹಣಕಾಸಿನ ಸಮಸ್ಯೆಯಿದೆ’ ಎಂದು ತಿಳಿಸಿದರು.

ಜಮೀನು ಗುರುತಿಸಿ: ‘ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಈ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಜಮೀನು ಗುರುತಿಸಬೇಕು. ಇದಕ್ಕೆ ಪೂರಕವಾಗಿ ಸಿಬ್ಬಂದಿ ಸಭೆ ನಡೆಸಬೇಕು. ಹಳ್ಳಿಗಳಲ್ಲಿ ತಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಪ್ರಕ್ರಿಯೆ ಸರಿಯಾಗಿ ನಡೆಯಬೇಕು’ ಎಂದು ಸೂಚನೆ ನೀಡಿದರು.

‘ತಾಲ್ಲೂಕಿನಲ್ಲಿ ಮುಖ್ಯವಾಗಿ ಕುಡಿಯುವ ನೀರು ಮತ್ತು ರಸ್ತೆ ಸಮಸ್ಯೆ ಗುರುತಿಸಿ. ಲಭ್ಯ ಆರ್ಥಿಕ ಸಂಪನ್ಮೂಲ ಬಳಸಿಕೊಂಡು ತ್ವರಿತವಾಗಿ ನೀರು ಹಾಗೂ ರಸ್ತೆ ಸಮಸ್ಯೆ ಪರಿಹರಿಸಬೇಕು. ಈ ಸಮಸ್ಯೆಗಳ ಬಗ್ಗೆ ಜನರಿಂದ ದೂರು ಬರಬಾರದು. ಕ್ಯಾಲನೂರು ಗ್ರಾಮದ ಮಾರುಕಟ್ಟೆ ರಸ್ತೆ ಹಾಗೂ ಆ ರಸ್ತೆ ಪಕ್ಕದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಮಾರ್ಗವನ್ನು ದುರಸ್ತಿ ಮಾಡಬೇಕು’ ಎಂದು ತಾಕೀತು ಮಾಡಿದರು.

ಶಿಸ್ತುಕ್ರಮದ ಎಚ್ಚರಿಕೆ: ‘ಕುರಿ ಮತ್ತು ದನದ ಕೊಟ್ಟಿಗೆ, ರೈತರ ಕಣ, ನಮ್ಮೂರ ಕೆರೆ, ಆಟದ ಮೈದಾನ ಮತ್ತು ಸ್ಮಶಾನ ಅಭಿವೃದ್ಧಿ, ನಮ್ಮ ಹಳ್ಳಿ ನಮ್ಮ ನೀರು, ಶುದ್ಧ ಕುಡಿಯುವ ನೀರಿನ ಘಟಕ, ಕೊಳವೆ ಬಾವಿ ಮರುಪೂರಣ ಕಾರ್ಯ ಕಾಲಮಿತಿಯೊಳಗೆ ನಡೆಯಬೇಕು. ವಿಳಂಬವಾದರೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ತಾಲ್ಲೂಕಿನಲ್ಲಿ ಹೊಸದಾಗಿ 35 ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರ ಅನುಮತಿ ನೀಡಿದರೆ ಪ್ರತಿ ಗ್ರಾಮದಲ್ಲಿ ನೀರಿನ ಘಟಕ ಸ್ಥಾಪಿಸಲು ಸಾಧ್ಯವಾಗುತ್ತದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಶ್ರೀನಿವಾಸ್ ವಿವರಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ, ವಿವಿಧ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT