ಮಂಗಳವಾರ, ನವೆಂಬರ್ 12, 2019
28 °C

ಮಕ್ಕಳಿಗೆ ಶಿಸ್ತು– ಸಂಸ್ಕಾರ ಕಲಿಸಿ

Published:
Updated:
Prajavani

ಕೋಲಾರ: ‘ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ನಿಟ್ಟಿನಲ್ಲಿ ಶಿಕ್ಷಕರಿಗೆ ಬದ್ಧತೆ ಇರಬೇಕು. ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆ ಗಮನ ಹರಿಸಬೇಕು’ ಎಂದು ಸರ್ವ ಶಿಕ್ಷಣ ಅಭಿಯಾನದ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಕೆ.ವಿ.ಶ್ರೀನಿವಾಸಮೂರ್ತಿ ಸಲಹೆ ನೀಡಿದರು.

ಬೆಂಗಳೂರು ನಗರ ಜಿಲ್ಲೆ ಶಿಕ್ಷಣ ತರಬೇತಿ ಸಂಸ್ಥೆಗೆ (ಡಯಟ್) ವರ್ಗಾವಣೆಗೊಂಡಿರುವ ಅವರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

‘ಶಿಕ್ಷಣ ಇಲಾಖೆಯು ಮಾನವ ಸಂಪನ್ಮೂಲ ಅಭಿವೃದ್ಧಿಯ ಆಧಾರಸ್ತಂಭ. ಇಡೀ ದೇಶದ ಪ್ರಗತಿ ಶಿಕ್ಷಣ ಇಲಾಖೆಯನ್ನು ಅವಲಂಬಿಸಿದೆ. ದೇಶದಲ್ಲಿನ ಶಾಂತಿ, ಸೌಹಾರ್ದತೆ ನೆಲೆಗೊಳ್ಳಲು ಮಕ್ಕಳಿಗೆ ಶಿಕ್ಷಣದ ಜತೆ ಶಿಸ್ತು, ಸಂಸ್ಕಾರ ಕಲಿಸಬೇಕು’ ಎಂದು ತಿಳಿಸಿದರು.

‘ಶಿಕ್ಷಕರು ಹೊಣೆಯರಿತು ಕೆಲಸ ಮಾಡಬೇಕು. ಪವಿತ್ರವಾದ ಶಿಕ್ಷಕ ವೃತ್ತಿಯನ್ನು ಗೌರವಿಸುವುದರ ಜತೆಗೆ ವೃತ್ತಿ ಘನತೆಗೆ ಧಕ್ಕೆಯಾಗದಂತೆ ಕೆಲಸ ಮಾಡಬೇಕು. ಶಿಲೆಯನ್ನು ಶಿಲ್ಪವಾಗಿಸುವ ಶಿಕ್ಷಕರಿಂದ ಮಾತ್ರ ದೇಶದ ಪ್ರಗತಿ ಸಾಧ್ಯ. ಗುರುವಿಗೆ ಗೌರವದ ಸ್ಥಾನವಿದೆ. ವಿದ್ಯೆ ಎಂದರೆ ಕೇವಲ ಅಕ್ಷರ ಕಲಿಕೆ ಮಾತ್ರವಲ್ಲ, ಸಮಾಜಕ್ಕೆ ಅಗತ್ಯವಿರುವ ಉತ್ತಮ ಪ್ರಜೆಗಳನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ’ ಎಂದರು.

‘ಶ್ರೀನಿವಾಸಮೂರ್ತಿ ಅವರು ಅಧಿಕಾರಿಯಾಗಿದ್ದರೂ ಸರಳತೆಯಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಅವರ ಕಾರ್ಯವೈಖರಿ ನಮಗೆ ಆದರ್ಶವಾಗಿದೆ’ ಎಂದು ಎವೈಪಿಸಿ ಮೋಹನ್ ಬಾಬು ಸ್ಮರಿಸಿದರು.

ಸರ್ವ ಶಿಕ್ಷಣ ಅಭಿಯಾನದ ಸಹಾಯಕ ಸಮನ್ವಯಾಧಿಕಾರಿ ಸಿದ್ದೇಶ್, ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ, ಬಿಆರ್‌ಸಿಗಳಾದ ಮಾಲೂರಿನ ವಿಜಯಕುಮಾರ್, ಬಂಗಾರಪೇಟೆಯ ರಾಧಮ್ಮ, ಟಿ.ಎಂ.ನಾಗರಾಜ್, ದೇವರಾಜ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)