ಕೋಮುವಾದಿ ಬಿಜೆಪಿಗೆ ಪಾಠ ಕಲಿಸಿ

ಶುಕ್ರವಾರ, ಏಪ್ರಿಲ್ 26, 2019
36 °C
ಪತ್ರಿಕಾಗೋಷ್ಠಿಯಲ್ಲಿ ದಸಂಸ ರಾಜ್ಯ ಸಂಘಟನಾ ಸಂಚಾಲಕ ವೆಂಕಟೇಶ್ ಮನವಿ

ಕೋಮುವಾದಿ ಬಿಜೆಪಿಗೆ ಪಾಠ ಕಲಿಸಿ

Published:
Updated:

ಕೋಲಾರ: ‘ದೇಶದ ಉತ್ತಮ ಭವಿಷ್ಯಕ್ಕೆ ಮತ್ತು ಸಮಿತಿಯ ನಂಬಿರುವ ಸಿದ್ಧಾಂತ ಉಳಿಸಿಕೊಳ್ಳಲು ಜಾತ್ಯತೀತ ತತ್ವದಲ್ಲಿ ನಂಬಿಕೆ ಇರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕು’ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎನ್.ವೆಂಕಟೇಶ್ ಅಭಿಪ್ರಾಯಪಟ್ಟರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಶೋಷಿತ ಸಮುದಾಯದ ಅಭಿವೃದ್ಧಿಯೇ ಸಂವಿಧಾನದ ಆಶಯ. ಆದರೆ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಕ್ಕೆ ಸಾಮಾಜಿಕ, ಆರ್ಥಿಕ ಸಮಾನತೆ ಕಲ್ಪಿಸದೆ 5 ವರ್ಷಗಳಿಂದ ಬರೀ ಸುಳ್ಳಿನ ಕಂತೆ ಹೆಣೆಯುತ್ತಿರುವ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಾಷ್ಟ್ರೀಯ ಭಾವನೆ ಮುಂದಿಟ್ಟುಕೊಂಡು ಚುನಾವಣೆಗೆ ಹೊರಟಿದೆ’ ಎಂದು ಟೀಕಿಸಿದರು.

‘ಬಿಜೆಪಿಯ ಆಡಳಿತ ನೀತಿ ಪ್ರಶ್ನಿಸುವವರಿಗೆ ದೇಶದ್ರೋಹದ ಪಟ್ಟ ಕಟ್ಟುತ್ತಾರೆ. ಎಡಪಂಥಿಯ ಸಾಹಿತಿ, ಬರಹಗಾರರನ್ನು ಕೊಂದಿರುವ ಸಂಸ್ಕೃತಿ ಕೋಮುವಾದಿಗಳದ್ದು. ಬಹುತ್ವ ಮತ್ತು ಕೋಮುಸೌಹಾರ್ದತೆ ನಾಶ ಮಾಡುತ್ತಿರುವ ಬಿಜೆಪಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ಸಂಘಟನೆಯು ಕಾಂಗ್ರೆಸ್‌ಗೆ ಬೇಷರತ್ ಬೆಂಬಲ ನೀಡುವುದರ ಜತೆಗೆ ಕ್ಷೇತ್ರದಲ್ಲಿ ಕೆ.ಎಚ್.ಮುನಿಯಪ್ಪ ಅವರನ್ನು ಬೆಂಬಲಿಸುತ್ತದೆ’ ಎಂದರು.

‘ದೇಶದ ಬಹುತ್ವ ಮತ್ತು ಕೋಮುಸೌಹಾರ್ದತೆ ಕಾಪಾಡುವಲ್ಲಿ, ಶೋಷನೆಗೆ ಒಳಗಾದ ದಲಿತ ಸಮುದಾಯಕ್ಕೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಚಳವಳಿ ರೂಪಿಸುವಲ್ಲಿ ಸಂಘಟನೆಯು ಮಹತ್ವದ ಪಾತ್ರ ವಹಿಸಿದೆ. ದಲಿತ ಚಳವಳಿಯ ಮುಂಚೂಣಿ ಮುಖಂಡರೇ ಇಂದು ವೈಯಕ್ತಿಕ ಕಾರಣಕ್ಕೆ ಕೋಲಾರ ಕ್ಷೇತ್ರದಲ್ಲಿ ಬಿಜೆಪಿಗೆ ಸಹಕಾರ ನೀಡುತ್ತಿರುವುದು ವಿಷಾದನೀಯ’ ಎಂದು ಕಳವಳ ವ್ಯಕ್ತಪಡಿಸಿದರು.

ಆತ್ಮಾವಲೋಕನ ಮಾಡಿಕೊಳ್ಳಿ: ‘ದೇಶದ ಸಂವಿಧಾನಕ್ಕೆ ಆತಂಕ ಎದುರಾಗಿರುವ ಸಂದರ್ಭದಲ್ಲಿ ಕ್ರಾಂತಿಕಾರಿ ಕವಿ ಗದ್ದರ್ ಸೇರಿದಂತೆ ಪ್ರಗತಿಪರ ಚಿಂತಕರು ಏಳೆಂಟು ತಿಂಗಳಿಂದ ಜನಜಾಗೃತಿ ಮೂಡಿಸುತ್ತಿದ್ದಾರೆ. ಇಷ್ಟಾದರೂ ಕೆಲ ದಲಿತ ಸಂಘಟನೆಗಳು ಕೋಮುವಾದಿಗಳನ್ನು ಬೆಂಬಲಿಸುತ್ತಿವೆ. ಈ ಸಂಘಟನೆಗಳ ಸದಸ್ಯರು ಆತ್ಮಾವಲೋಕನ ಮಾಡಿಕೊಂಡು ಸೂಕ್ತ ತೀರ್ಮಾನಕ್ಕೆ ಬರಬೇಕು’ ಎಂದು ಮನವಿ ಮಾಡಿದರು.

ಗೆಲುವು ಸಾಧಿಸುತ್ತಾರೆ: ‘ದೇಶದ ಅಭಿವೃದ್ಧಿ ದೃಷ್ಟಿಯಿಂದ ಜಾತ್ಯತೀತ ಪಕ್ಷಗಳು ಅಧಿಕಾರಕ್ಕೇರಬೇಕು. ಈ ದಿಸೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಮುನಿಯಪ್ಪ ಅವರನ್ನು ಬೆಂಬಲಿಸುತ್ತಿದ್ದೇವೆ. ಅವರು 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ’ ಎಂದು ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ವಿಶ್ವಾಸ ವ್ಯಕ್ತಪಡಿಸಿದರು.

ಸಮಿತಿಯ ಜಿಲ್ಲಾ ಘಟಕದ ಸಂಚಾಲಕ ರವಿ, ಸದಸ್ಯ ವೆಂಕಟೇಶ್, ಮಹಿಳಾ ಜಾಗೃತಿ ವೇದಿಕೆ ಅಧ್ಯಕ್ಷೆ ಮಮತಾರೆಡ್ಡಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !