ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರು ಭವಿಷ್ಯ ರೂಪಿಸುವ ಶಿಲ್ಪಿಗಳು: ಶಾಶಕ ಕೆ.ಶ್ರೀನಿವಾಸಗೌಡ

Last Updated 5 ಅಕ್ಟೋಬರ್ 2021, 15:25 IST
ಅಕ್ಷರ ಗಾತ್ರ

ಕೋಲಾರ: ‘ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವ ಜ್ಞಾನದ ಶಿಲ್ಪಿಗಳಂತೆ. ಶಿಕ್ಷಕ ವೃತ್ತಿಯು ಪವಿತ್ರವಾದದ್ದು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.

ತಾಲ್ಲೂಕು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘವು ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿ, ‘ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ಜತೆಗೆ ಶಿಸ್ತು ಕಲಿಸಬೇಕು. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಯುವಕ ಯುವತಿಯರಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತಬೇಕು’ ಎಂದರು.

‘ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಯುನೆಸ್ಕೋ ಮತ್ತು ಐಎಲ್‍ಒಗಳ ಪ್ರಸ್ತಾವದಂತೆ ಸೆ.5ರಂದು ಶಿಕ್ಷಕರ ದಿನ ಆಚರಿಸಲಾಗುತ್ತದೆ. ಜೀವಜಾಲದ ಉನ್ನತ ಸ್ಥಾನದಲ್ಲಿರುವ ಮನುಷ್ಯ ತನ್ನ ಅರಿವಿನ ಕಣ್ಣು ತೆರೆಸುವ ಶಿಕ್ಷಕರಿಗೆ ಸದಾ ಋಣಿಯಾಗಿರಬೇಕು. ಶಿಕ್ಷಕರಿಗೆ ಕೃತಜ್ಞತೆಯಿಂದ ಇರುವುದೇ ದ್ಯೋತಕ. ಇದರ ಅಗತ್ಯವೇ ಶಿಕ್ಷಕರ ದಿನಾಚರಣೆಯ ಅರ್ಥಪೂರ್ಣ ಸಂದೇಶ’ ಎಂದು ಹೇಳಿದರು.

‘ವಿದ್ಯಾರ್ಥಿಗಳು ಶಿಕ್ಷಕರು ತೋರಿದ ಹಾದಿಯಲ್ಲಿ ಮುನ್ನಡೆಯಬೇಕು. ಎರಡಕ್ಷರ ಕಲಿಸಿದಾತನೇ ಗುರು ಎಂಬಂತೆ ಬಾಲ್ಯದ ದಿನಗಳಿಂದ ನಮಗೆ ಸದಾ ಒಳ್ಳೆಯ ಆಚಾರ ವಿಚಾರ ನಡೆ ನುಡಿ ಕಲಿಸುವುದೇ ನಿಜವಾದ ಶಿಕ್ಷಣ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ತಿಳಿಸಿದರು.

‘ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ ಕನಸುಗಳನ್ನು ತುಂಬಬೇಕು. ಗುರುಗಳು ಮಾನವನ ಅರಿವು ಜ್ಞಾನ ಮತ್ತು ವಿವೇಕಕ್ಕೆ ಕಾರಣವಾಗಿ ತ್ರಿಮೂರ್ತಿಗಳ ಸ್ವರೂಪವೇ ಆಗಿದ್ದಾರೆ. ಶಿಕ್ಷಕರು ಸದಾ ಉತ್ತಮ ನಡೆ, ನುಡಿ, ಕ್ರೀಡೆಗಳಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು’ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್ ಹೇಳಿದರು.

ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಬಿ.ಶ್ರೀನಿವಾಸ್ ಉಪಾಧ್ಯಕ್ಷ ಕೆ.ಶ್ರೀನಿವಾಸ್ ಸಂಘ ಸದಸ್ಯ ಆರ್.ಶ್ರೀನಿವಾಸನ್, ಸದಸ್ಯರಾದ ಎಚ್.ಆರ್.ನಾರಾಯಣಸ್ವಾಮಿ, ಚಾಮುಂಡೇಶ್ವರಿದೇವಿ, ಭಾಗ್ಯಲಕ್ಷ್ಮಮ್ಮ ರಾಮಚಂದ್ರಪ್ಪ, ಜೆ.ಜಗನ್ನಾಥ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT