ಶುಕ್ರವಾರ, ಮಾರ್ಚ್ 31, 2023
32 °C
ಲಾಕ್‌ಡೌನ್‌ ಸಡಿಲಿಕೆ: ಮಸೀದಿಯಲ್ಲಿ ಪ್ರಾರ್ಥನೆ

ದೇವಸ್ಥಾನ–ಚರ್ಚ್‌ ತೆರೆಯಲು ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಲಾಕ್‌ಡೌನ್‌ ಸಡಿಲಿಕೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸೋಮವಾರ (ಜುಲೈ 5) ದೇವಸ್ಥಾನ, ಮಸೀದಿ ಹಾಗೂ ಚರ್ಚ್‌ಗಳನ್ನು ತೆರೆಯಲು ಸಿದ್ಧತೆ ನಡೆದಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ಏ.22ರಂದು ಲಾಕ್‌ಡೌನ್‌ ಜಾರಿಯಾದ ಕಾರಣ ಜಿಲ್ಲೆಯಲ್ಲಿ ದೇವಸ್ಥಾನ, ಮಸೀದಿ ಹಾಗೂ ಚರ್ಚ್‌ಗಳನ್ನು ಬಂದ್‌ ಮಾಡಲಾಗಿತ್ತು. ಇದೀಗ ಇವುಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ್ದು, ಅರ್ಚಕರು, ಮೌಲ್ವಿಗಳು ಹಾಗೂ ಪಾದ್ರಿಗಳು ಪ್ರತಿನಿತ್ಯದಂತೆ ಧಾರ್ಮಿಕ ವಿಧಿವಿಧಾನ ನಡೆಸಲು ಉತ್ಸುಕರಾಗಿದ್ದಾರೆ.

ಜಿಲ್ಲಾ ಕೇಂದ್ರದ ಕೋಲಾರಮ್ಮ ದೇವಸ್ಥಾನ, ಸೋಮೇಶ್ವರ ದೇವಸ್ಥಾನ, ಅಂತರಗಂಗೆ ಬೆಟ್ಟದಲ್ಲಿನ ಕಾಶಿ ವಿಶ್ವೇಶ್ವರಸ್ವಾಮಿ ದೇವಸ್ಥಾನ, ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನ, ಕೆಜಿಎಫ್‌ ತಾಲ್ಲೂಕಿನ ಕಮ್ಮಸಂದ್ರದ ಕೋಟಿಲಿಂಗೇಶ್ವರ ದೇವಸ್ಥಾನ, ಮುಳಬಾಗಿಲು ತಾಲ್ಲೂಕಿನ ಆಂಜನೇಯಸ್ವಾಮಿ ದೇವಸ್ಥಾನ ಹಾಗೂ ಕುರುಡಮಲೆ ದೇವಸ್ಥಾನದಲ್ಲಿ ಪೂಜೆಗೆ ಸಿದ್ಧತೆ ನಡೆದಿದೆ.

ದೇವಸ್ಥಾನಗಳಲ್ಲಿ ಭಕ್ತರಿಗೆ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಜತೆಗೆ ಭಕ್ತರಿಗೆ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಲು ಸ್ಯಾನಿಟೈಸರ್ ನೀಡಲಾಗುತ್ತದೆ. ಅಲ್ಲದೇ, ಕಡ್ಡಾಯವಾಗಿ ಮಾಸ್ಕ್‌ ಹಾಕಿಕೊಳ್ಳುವಂತೆ ದೇವಸ್ಥಾನಗಳ ಪ್ರವೇಶ ದ್ವಾರದಲ್ಲೇ ಸೂಚನಾ ಫಲಕ ಹಾಕಲಾಗಿದೆ.

ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಪುರಾಣ ಪ್ರಸಿದ್ಧ ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ದೇವರ ದರ್ಶನಕ್ಕೆ ಸಿದ್ಧತೆ ಮಾಡಲಾಗಿದೆ. ದೇವಾಲಯದ ಆವರಣದಲ್ಲಿ ಚೌಕಾಕಾರದ ಪಟ್ಟಿಗಳನ್ನು ಬರೆದು ಭಕ್ತರಿಗೆ ಅಂತರ ಕಾಯ್ದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ದೇವಾಲಯದ ವಾಹನ ನಿಲುಗಡೆ ಜಾಗಕ್ಕೆ (ಪಾರ್ಕಿಂಗ್‌) ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಭಕ್ತರ ದೇಹದ ಉಷ್ಣತೆಯ ಪರೀಕ್ಷೆಗಾಗಿ ಥರ್ಮಲ್‌ ಸ್ಕ್ರೀನಿಂಗ್‌ ವ್ಯವಸ್ಥೆ ಮಾಡಲಾಗಿದೆ.

ತೀರ್ಥ–ಪ್ರಸಾದವಿಲ್ಲ: ದೇವಸ್ಥಾನಗಳಲ್ಲಿ ಯಾವುದೇ ಸೇವೆಗಳಿರುವುದಿಲ್ಲ. ಭಕ್ತರು ದೇವಾಲಯಕ್ಕೆ ಪೂಜಾ ಸಾಮಗ್ರಿ ತರುವಂತಿಲ್ಲ ಮತ್ತು ಮುಡಿ ಸೇವೆಗೆ ಅವಕಾಶವಿಲ್ಲ. 10 ವರ್ಷದೊಳಗಿನ ಮಕ್ಕಳಿಗೆ ಮತ್ತು 60 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ, ಗರ್ಭಿಣಿಯರಿಗೆ ದೇವಸ್ಥಾನಗಳಲ್ಲಿ ಪ್ರವೇಶವಿಲ್ಲ. ತೀರ್ಥ ಮತ್ತು ಪ್ರಸಾದ ವಿನಿಯೋಗ ಇರುವುದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು