ಮಂಗಳವಾರ, ಫೆಬ್ರವರಿ 18, 2020
29 °C
ಜೆಎಂಎಸ್‌ ಜಿಲ್ಲಾ ಕಾರ್ಯಾಗಾರ

ಸಂವಿಧಾನದ ಮೂಲತತ್ವಕ್ಕೆ ಸಿಎಎ ಕೊಡಲಿ ಪೆಟ್ಟು: ಚಿಂತಕಿ ಸತ್ಯಾ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಕರಾಳ ಮುಖವನ್ನು ಜನಸಾಮಾನ್ಯರಿಗೆ ಪರಿಚಯಿಸಿ ಅರಿವು ಮೂಡಿಸಬೇಕು’ ಎಂದು ಚಿಂತಕಿ ಎಸ್.ಸತ್ಯಾ ಹೇಳಿದರು.

ಇಲ್ಲಿ ಶುಕ್ರವಾರ ನಡೆದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿ, ‘ಸಿಎಎ ಮೂಲಕ ದೇಶವನ್ನು ಜಾತಿ ಧರ್ಮದ ಆಧಾರದಲ್ಲಿ ಛಿದ್ರಗೊಳಿಸಲು ಬಿಡುವುದಿಲ್ಲವೆಂಬ ಸಂದೇಶ ಸಾರಬೇಕು’ ಎಂದು ಸಲಹೆ ನೀಡಿದರು.

‘ದೇಶದಲ್ಲಿ ನಿರುದ್ಯೋಗ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಆರ್ಥಿಕ ಹಿಂಜರಿತ, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದಂತಹ ಸಮಸ್ಯೆಗಳು ಗಂಭೀರವಾಗಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರವು ಪೌರತ್ವ ಕಾಯ್ದೆಯ ವಿವಾದ ಸೃಷ್ಟಿಸಿ ಜನರ ಗಮನ ಬೇರೆಡೆ ತಿರುಗಿಸುವ ಸಂಚು ಮಾಡಿದೆ’ ಎಂದು ಕಿಡಿಕಾರಿದರು.

‘ಧರ್ಮದ ಆಧಾರದ ಮೇಲೆ ಪೌರತ್ವ ನೀಡುವುದು ದೇಶದ ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾದದ್ದು. ಸಿಎಎ ಸಂವಿಧಾನದ ಜಾತ್ಯತೀತ ಮತ್ತು ಧರ್ಮನಿರಪೇಕ್ಷತೆಯ ಮೂಲತತ್ವಕ್ಕೆ ಕೊಡಲಿ ಪೆಟ್ಟು ನೀಡಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ದೇಶದ ಜನ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾಗುವುದನ್ನು ಸಹಿಸದೆ ಎಲ್ಲೆಡೆ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಜನರಿಗೆ ದೇಶದ ಸಂವಿಧಾನದ ಮೇಲಿರುವ ನಂಬಿಕೆ ಮತ್ತು ವಿಶ್ವಾಸ ಇಮ್ಮಡಿಯಾಗಿದೆ. ಬಿಜೆಪಿಗೆ ಮತ ಹಾಕದ ಅಥವಾ ಬಿಜೆಪಿಗೆ ವಿರುದ್ಧವಾಗಿರುವ ಮತದಾರರಿಂದ ಮತದಾನದ ಹಕ್ಕು ಕಸಿಯುವ ಹುನ್ನಾರ ಸಿಎಎ ಹಿಂದಿದೆ’ ಎಂದು ಆರೋಪಿಸಿದರು.

‘ದೇಶದ ಸಂವಿಧಾನ ಹಾಗೂ ಪರಂಪರೆಯಲ್ಲಿ ಇನ್ನೊಬ್ಬರನ್ನು ಇಲ್ಲವಾಗಿಸುವ ಗುಣವೇ ಇಲ್ಲ. ವಿಶ್ವದ ಎಲ್ಲಾ ರಾಷ್ಟ್ರಗಳ ವಿವಿಧ ಧರ್ಮದವರಿಗೆ ಭಾರತವು ಆಶ್ರಯ ನೀಡಿದ ಹಿರಿಮೆ ಹೊಂದಿದೆ. ದೇಶದಲ್ಲಿ ಪ್ರತಿಯೊಬ್ಬರೂ ಸಮಾನತೆಯಿಂದ ಜೀವನ ನಡೆಸಬೇಕು ಎಂಬುದು ಸಂವಿಧಾನ ಮೂಲ ಉದ್ದೇಶ. ಸಂವಿಧಾನ ಮತ್ತು ಅದರ ಆಶಯಗಳನ್ನು ಉಳಿಸಲು ಎಲ್ಲರೂ ಒಗ್ಗೂಡಬೇಕು’ ಎಂದು ಕಿವಿಮಾತು ಹೇಳಿದರು.

‘ದೇಶದಲ್ಲಿ ಪೌರತ್ವ ಕಾಯ್ದೆ ಜಾರಿಗೆ ತರಲು ಹೊರಟಿರುವವರ ಹಿನ್ನಲೆ ಮತ್ತು ಮನಸ್ಥಿತಿಯು ಹಿಟ್ಲರ್‌ನ ಮನಸ್ಥಿತಿಯನ್ನು ಹೋಲುತ್ತದೆ’ ಎಂದು ಸಾಹಿತಿ ಲಕ್ಷ್ಮೀಪತಿ ಕೋಲಾರ ಗುಡುಗಿದರು.

ಜಾತಿಯ ವಿಷ ಬೀಜ: ‘ಸಂವಿಧಾನದಡಿ ಜಾರಿಯಾಗಿರುವ ಕಾನೂನುಗಳನ್ನು ದುರ್ಬಲಗೊಳಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಬಿಜೆಪಿ ನಾಯಕರು ಅಂಬೇಡ್ಕರ್‌ ಆಶಯಗಳನ್ನು ಮಣ್ಣುಪಾಲು ಮಾಡಲು ಹೊರಟಿದ್ದಾರೆ. ಜಾತಿ, ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸಿ ಜಾತಿಯ ವಿಷ ಬೀಜ ಬಿತ್ತುತ್ತಿದ್ದಾರೆ’ ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷೆ ವಿ.ಗೀತಾ ಆಕ್ರೋಶ ವ್ಯಕ್ತಪಡಿಸಿದರು.

‘ಮುಸ್ಲಿಮರು ಎಂದಿಗೂ ಸಮಾಜದಲ್ಲಿ ಶಾಂತಿ ಕದಡಿಲ್ಲ. ಕಾಲಕ್ಕೆ ತಕ್ಕಂತೆ ಪ್ರತಿ ಧರ್ಮದವರು ಬದಲಾಗುತ್ತಿದ್ದಾರೆ. ಜನ ವಿರೋಧಿ ಚಟುವಟಿಕೆ ವಿರುದ್ಧ ಹೋರಾಟ ನಡೆಸಿದರೆ ಬಿಜೆಪಿಯವರು ದೇಶದ್ರೋಹದ ಪಟ್ಟ ಕಟ್ಟುತ್ತಾರೆ. ಹೋರಾಟದ ಮೂಲಕ ಕೇಂದ್ರಕ್ಕೆ ಬಿಸಿ ಮುಟ್ಟಿಸಬೇಕು’ ಎಂದು ತಿಳಿಸಿದರು.

‘ಭಾರತವು ವೈವಿಧ್ಯತೆಯಿಂದ ಕೂಡಿದ ರಾಷ್ಟ್ರ. ಜಾತ್ಯಾತೀತ ರಾಷ್ಟ್ರದಲ್ಲಿ ಎಲ್ಲರಿಗೂ ಸಮಾನ ಅವಕಾಶವಿದೆ. ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದಾಗ ಸಾಕಷ್ಟು ಹೋರಾಟ ನಡೆದು ಹಲವರು ಪ್ರಾಣ ಕಳೆದುಕೊಂಡರು. ಸಿಎಎ, ಎನ್‍ಆರ್‌ಸಿ ದುಷ್ಪರಿಣಾಮದ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ಕಾಯ್ದೆ ಹಿಂಪಡೆಯುವವರೆಗೂ ಹೋರಾಟ ನಡೆಸಬೇಕು’ ಎಂದು ಹೇಳಿದರು.

ರಾಜ್ಯ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಪಿಚ್ಚಳ್ಳಿ, ಶ್ರೀನಿವಾಸ್‌, ಜನವಾದಿ ಮಹಿಳಾ ಸಂಘಟನೆ ಸದಸ್ಯರಾದ ವಿಜಯಕುಮಾರಿ, ಮಂಜುಳಾ, ಸಾಹಿತಿ ಶರಣಪ್ಪ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು