ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಸಂವಿಧಾನ ಜಗತ್ತಿನಲ್ಲೇ ಶ್ರೇಷ್ಠ: ಸಿ.ಎಚ್.ಗಂಗಾಧರ್‌

Last Updated 1 ಡಿಸೆಂಬರ್ 2021, 16:16 IST
ಅಕ್ಷರ ಗಾತ್ರ

ಕೋಲಾರ: ‘ಭಾರತದ ಸಂವಿಧಾನವು ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದ್ದು, ಇಲ್ಲಿ ಪ್ರತಿಯೊಬ್ಬರಿಗೂ ಸಮಾನವಾಗಿ ಬದುಕುವ ಹಕ್ಕಿದೆ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್‌ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಸರ್ಕಾರಿ ಕಾನೂನು ಕಾಲೇಜು ಸಹಯೋಗದಲ್ಲಿ ಇಲ್ಲಿ ಬುಧವಾರ ಸಂವಿಧಾನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಾಗಾರದಲ್ಲಿ ಮಾತನಾಡಿದರು.

‘ಗಾಂಧೀಜಿ, ಅಂಬೇಡ್ಕರ್ ಅವರಂತಹವರನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವ ಜತೆಗೆ ತಲೆಯಲ್ಲೂ ಇಟ್ಟುಕೊಳ್ಳಬೇಕು. ಗಾಂಧೀಜಿಯ ಹೆಸರು ಹೇಳುತ್ತೇವೆ. ಆದರೆ, ಅವರ ತತ್ವ ಪಾಲಿಸುವುದಿಲ್ಲ ಎಂದರೆ ಅರ್ಥವಿಲ್ಲ. ಶ್ರೀಮಂತ ರಾಷ್ಟ್ರ ಭಾರತದಲ್ಲಿ ಜನಸಾಮಾನ್ಯರಿಗೆ ಸಿಗಬೇಕಾದ ಕನಿಷ್ಠ ಹಕ್ಕುಗಳನ್ನು ಕಲ್ಪಿಸುವ ಸಲುವಾಗಿ ಸಂವಿಧಾನ ಶಕ್ತಿ ಹೊಂದಿದೆ, ಆದರೂ ಹಲವರು ಕಾನೂನಿನ ಅರಿವಿಲ್ಲದೆ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ’ ಎಂದು ವಿಷಾದಿಸಿದರು.

‘ಸಂವಿಧಾನದ ಆಶಯಗಳಿಗೆ ವಿರುದ್ದವಾಗಿ ನಡೆದುಕೊಳ್ಳುವುದು ದೇಶದ್ರೋಹ, ಅಂತಹ ಕೆಲಸಗಳಿಗೆ ಕಾನೂನಿನಲ್ಲಿ ಅವಕಾಶವಿಲ್ಲ. ಸಂವಿಧಾನ ಓದಿದರೆ ಅರ್ಥ ಆಗುತ್ತದೆ. ಜತೆಗೆ ಅದನ್ನು ಪಾಲಿಸುವ, ಗೌರವಿಸುವ ಪ್ರವೃತ್ತಿ ಬಲಗೊಳ್ಳಬೇಕು’ ಎಂದು ಆಶಿಸಿದರು.

‘ಸ್ವಾತಂತ್ರ್ಯ ಬಂದ ನಂತರ ಭಾರತ 70 ವರ್ಷಗಳಲ್ಲಿ ಸಾಕಷ್ಟು ಸಾಧಿಸಿದೆ. ಶೇ 20ರಷ್ಟಿದ್ದ ಸಾಕ್ಷರತೆ ಪ್ರಮಾಣ ಶೇ 80ಕ್ಕೆ ಬಂದಿದೆ. ಬಡತನ ನಿವಾರಣೆ ಮಾಡಲಾಗುತ್ತಿದೆ. ಆದರೆ, ರೈತರ ಆತ್ಮಹತ್ಯೆ, ನಿರುದ್ಯೋಗ ಸಮಸ್ಯೆ, ಕೋಮುವಾದ, ಮೂಲಭೂತವಾದ, ಭ್ರಷ್ಟಾಚಾರ, ಸಾಂಸ್ಕೃತಿಕ ದಿವಾಳಿತನ ದೇಶವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಗಳಾಗಿವೆ. ಇವುಗಳನ್ನು ನಿರ್ಮೂಲನೆ ಮಾಡುವ ಶಕ್ತಿ ಸಂವಿಧಾನಕ್ಕಿದೆ’ ಎಂದು ಅಭಿಪ್ರಾಯಪಟ್ಟರು.

‘ಜನರ ಜೀವನ ಮಟ್ಟ ಇನ್ನಷ್ಟು ಉತ್ತಮಪಡಿಸುವುದು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜವಾಬ್ದಾರಿ. ಒಂದಕ್ಕೂಂದು ಪೂರಕವಾಗಿ ಕೆಲಸ ಮಾಡುವುದೇ ಸಂವಿಧಾನ ಪಾಲಿಸುವುದು ಎಂದರ್ಥ’ ಎಂದು ಹೇಳಿದರು.

ಜವಾಬ್ದಾರಿ ನಿರ್ವಹಿಸುತ್ತಿಲ್ಲ: ‘ಅನೇಕ ಮಹನೀಯರ ತ್ಯಾಗ ಬಲಿದಾನದ ಫಲವಾಗಿ ಭಾರತವು ಬ್ರಿಟೀಷರ ದಾಸ್ಯದಿಂದ ಮುಕ್ತವಾಯಿತು. ದೇಶಕ್ಕೆ ಸ್ವಾತಂತ್ರ್ಯ ಪಡೆದು 70 ವರ್ಷಗಳಾಗಿದೆ. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಸಂವಿಧಾನವನ್ನು ಅಂಬೇಡ್ಕರ್ ನೀಡಿದ್ದಾರೆ. ಹಕ್ಕುಗಳನ್ನು ಕೇಳುವ ನಾವು ಜವಾಬ್ದಾರಿಗಳನ್ನು ನಿರ್ವಹಿಸುತ್ತಿಲ್ಲ’ ಎಂದು ಸರ್ಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲೆ ಎಂ.ಅನಿತಾ ಕಳವಳ ವ್ಯಕ್ತಪಡಿಸಿದರು.

‘ಹಕ್ಕು ಮತ್ತು ಕರ್ತವ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎಲ್ಲರಿಗೂ ನ್ಯಾಯ ಸಿಗಬೇಕು, ಬಡವರು, ದಲಿತರು, ತುಳಿತಕ್ಕೆ ಒಳಗಾದವರ ಕಷ್ಟಕ್ಕೆ ಸ್ಪಂದಿಸಬೇಕು’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಶ್ರೀಧರ್ ಸಲಹೆ ನೀಡಿದರು.

ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ರಘುಪತಿಗೌಡ, ವಕೀಲ ಕೆ.ಆರ್.ಧನರಾಜ್, ಕಾನೂನು ಸೇವಾ ಸಮಿತಿ ಸಂಚಾಲಕ ಮಂಜುನಾಯ್ಕ, ಸಂಪನ್ಮೂಲ ವ್ಯಕ್ತಿಗಳಾದ ನಾಗಶೇಷಮ್ಮ, ಪ್ರಸನ್ನಕುಮಾರಿ, ಧನಲಕ್ಷ್ಮಿ, ಕಾವ್ಯಶ್ರೀ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT