ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರಕ್ಕೆ ಕೊರೊನಾ ಲಸಿಕೆ ಬರುತ್ತಿರುವುದು ಸ್ವಾಗತಾರ್ಹ: ಸಚಿವ ನಾಗೇಶ್‌

ಅಣಕು ಕಾರ್ಯಾಚರಣೆಯಲ್ಲಿ ಉಸ್ತುವಾರಿ ಸಚಿವ ನಾಗೇಶ್‌ ಹೇಳಿಕೆ
Last Updated 8 ಜನವರಿ 2021, 12:04 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಗೂ ಕೊರೊನಾ ಲಸಿಕೆ ಬರುತ್ತಿರುವುದು ಸ್ವಾಗತಾರ್ಹ. ಲಸಿಕೆ ನೀಡಿಕೆಗೆ ಕೆಲ ನಿಯಮ ಅನುಸರಿಸಬೇಕಿದ್ದು, ಆ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ಆರೋಗ್ಯ ಇಲಾಖೆಯು ಲಸಿಕೆ ನೀಡಲು ಸಕಲ ಸಿದ್ಧತೆ ಮಾಡಿಕೊಂಡಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಇಲ್ಲಿನ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯಲ್ಲಿ ಶುಕ್ರವಾರ ಕೋವಿಡ್‌ ಲಸಿಕೆ ನೀಡಿಕೆ ಅಣಕು ಕಾರ್ಯಾಚರಣೆಗೆ ಚಾಲನೆ ನೀಡಿ ಮಾತನಾಡಿ, ‘ಕೇಂದ್ರ ಸರ್ಕಾರದ ಕೋ–ವಿನ್‌ ಪೋರ್ಟಲ್‌ನಲ್ಲಿ ಜನರ ಆಧಾರ್‌ ಸಂಖ್ಯೆ ಜೋಡಣೆ ಮಾಡಿದರೆ ಮೊಬೈಲ್‌ಗೆ ಒಟಿಪಿ ಬರುತ್ತದೆ. ನಂತರ ಅವರಿಗೆ ಲಸಿಕೆ ನೀಡಲಾಗುವುದು. ಲಸಿಕೆಯ ಮೊದಲ ಡೋಸ್‌ ಪಡೆದ ನಂತರ 28 ದಿನ ಬಿಟ್ಟು ಮತ್ತೆ ಎರಡನೇಯ ಡೋಸ್‌ ನೀಡಲಾಗುತ್ತದೆ’ ಎಂದರು.

‘ಲಸಿಕೆಯ ಪರಿಣಾಮ 1 ವರ್ಷ ಇರುತ್ತದೆ. ಮೊದಲನೇ ಬಾರಿಗೆ ಲಸಿಕೆ ಪಡೆದವರಿಗೆ ಏನಾದರೂ ಅಡ್ಡ ಪರಿಣಾಮ ಉಂಟಾದರೆ ಅದರ ಪರಿಹಾರಕ್ಕೆ ಔಷಧ ಸಿದ್ಧವಾಗಿ ಇಟ್ಟುಕೊಳ್ಳಲಾಗಿದೆ. ಜತೆಗೆ ಅಂತಹವರ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ 56 ಬೆಡ್‌ ಕಾಯ್ದಿರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಗೆ ಸದ್ಯದಲ್ಲೇ ಪೂರ್ಣ ಪ್ರಮಾಣದಲ್ಲಿ ಲಸಿಕೆ ಪೂರೈಕೆಯಾಗಲಿದೆ. ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು. ನನಗೆ ಈವರೆಗೆ ಕೊರೊನಾ ಸೋಂಕು ಬಂದಿಲ್ಲ. ಮುಂದೆ ಬಂದರೂ ಬರಬಹುದು ಎಂಬ ಆತಂಕವಿದೆ. ಆದ್ದರಿಂದ ನಾನು ಸಹ ಲಸಿಕೆ ಪಡೆದುಕೊಳ್ಳುತ್ತೇನೆ’ ಎಂದು ಹೇಳಿದರು.

12 ಬೂತ್‌: ‘ಜಿಲ್ಲೆಯಲ್ಲಿ ಜನರಿಗೆ ಜನವರಿ ಅಂತ್ಯಕ್ಕೆ ಕೋವಿಡ್‌ ನೀಡಲು ಸಿದ್ಧತೆ ಮಾಡಲಾಗಿದೆ. ಜಿಲ್ಲೆಯ 12 ಬೂತ್‌ನಲ್ಲಿ ಸಾರ್ವಜನಿಕರ ನೋಂದಣಿ, ತಪಾಸಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಸಂಸದ ಎಸ್.ಮುನಿಸ್ವಾಮಿ ವಿವರಿಸಿದರು.

‘ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಆರೋಗ್ಯ ಇಲಾಖೆಯ 12,669 ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ. ನಂತರ ಎಲ್ಲಾ ವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡಿ ಸಾರ್ವಜನಿಕರಿಗೆ ಲಸಿಕೆ ಹಾಕಲಾಗುತ್ತದೆ. ರಾಜ್ಯ, ದೇಶದ ಸುರಕ್ಷತೆ ದೃಷ್ಟಿಯಿಂದ ಸರ್ಕಾರಗಳು ದೇಸಿ ಲಸಿಕೆ ತಯಾರಿಸಿ, ವಿತರಣೆ ಮಾಡುತ್ತಿವೆ’ ಎಂದು ತಿಳಿಸಿದರು.

ಶಾಸಕ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ತಹಶೀಲ್ದಾರ್‌ ಆರ್.ಶೋಭಿತಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್.ವಿಜಯ್‌ಕುಮಾರ್‌, ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ ಡಾ.ವಿಜಯಕುಮಾರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT