ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಜಿಲ್ಲಾಸ್ಪತ್ರೆ ಅವ್ಯವಸ್ಥೆ; ಅಧಿಕಾರಿಗಳಿಗೆ ತರಾಟೆ

ಕಾಮಗಾರಿ ತ್ವರಿತಗೊಳಿಸಲು ಎಂಎಲ್‌ಸಿ ಇಂಚರ ಗೋವಿಂದರಾಜು ತಾಕೀತು
Last Updated 7 ಮಾರ್ಚ್ 2023, 10:26 IST
ಅಕ್ಷರ ಗಾತ್ರ

ಕೋಲಾರ: ‘ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಮಾನವೀಯತೆ ಇರಬೇಕು. ಗ್ರಾಮಾಂತರ ಪ್ರದೇಶಗಳಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸದಿದ್ದರೆ ಹೇಗೆ ?’ ಎಂದು ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು ತರಾಟೆಗೆ ತೆಗೆದುಕೊಂಡರು.

ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯಕುಮಾರ್‌, ವೈದ್ಯರು ಹಾಗೂ ಗುತ್ತಿಗೆದಾರರ ಜತೆ ಚರ್ಚಿಸಿದರು. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳು ಅನುಭವಿಸುತ್ತಿರುವ ತೊಂದರೆ ನಿವಾರಣೆಯಾಗಬೇಕು. ಇದಕ್ಕೆ ಆಸ್ಪತ್ರೆ ಆವರಣದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣ ಗೊಳಿಸಬೇಕು. ನರ್ಸ್‌ಗಳು ಪ್ರತಿಭಟನೆಯಲ್ಲಿ ತೊಡಗಿಸಿ ಕೊಂಡಿರುವುದರಿಂದ ಪರ್ಯಾಯ ವ್ಯವಸ್ಥೆಗೆ ಸರ್ಕಾರ ಮತ್ತು ಜಿಲ್ಲಾಡಳಿತ ಮುಂದಾಗಬೇಕು’ ಎಂದರು.

‘ಜಿಲ್ಲಾಸ್ಪತ್ರೆಯಲ್ಲಿ 280 ಹಾಸಿಗೆಗಳಿಗೆ ಅನುಮತಿಸಿದ್ದು, 500 ಹಾಸಿಗೆ ಹಾಕಲಾಗಿದೆ. ರೋಗಿಗಳ ಹಿತದೃಷ್ಟಿಯಿಂದ ಇದು ಒಳ್ಳೆಯ ಕೆಲಸವಾದರೂ, ಅಗತ್ಯದಷ್ಟು ಸಿಬ್ಬಂದಿ ಇಲ್ಲದಿರುವುದರಿಂದ ರೋಗಿಗಳು, ವೈದ್ಯರು, ಸಿಬ್ಬಂದಿ ತೊಂದರೆ ಅನುಭವಿಸುವಂತಾಗಿದೆ. ಇದರ ನಡುವೆ 72 ನರ್ಸ್‌ಗಳು ಕಾಯಂಗಾಗಿ ಪ್ರತಿಭಟನೆಯಲ್ಲಿ ತೊಡಗಿದ್ದು, ಕೇವಲ 22 ನರ್ಸ್‌ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪರ್ಯಾಯ ವ್ಯವಸ್ಥೆ ಮಾಡದೆ ಸರ್ಕಾರ, ಜಿಲ್ಲಾಡಳಿತ, ಆರೋಗ್ಯ ಇಲಾಖೆ ನಿರ್ಲಕ್ಷ್ಯವಹಿಸಿವೆ’ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ₹ 13.71 ಕೋಟಿ ವೆಚ್ಚದಲ್ಲಿ ಕ್ರಿಟಿಕಲ್‌ ಕೇರ್‌ ಯುನಿಟ್‌ ಸ್ಥಾಪನೆಗೆ ಕಳೆದ ಡಿಸೆಂಬರ್‌ ನಲ್ಲಿ ಟೆಂಡರ್‌ ಕರೆಯಲಾಗಿದೆ. 2 ತಿಂಗಳ ಹಿಂದೆ ಕಾರ್ಯಾದೇಶ ಸಹ ನೀಡಲಾಗಿದ್ದು, ಪಾಯ, ಪಿಲ್ಲರ್‌ ಗಳನ್ನು ಹಾಕುವ ಕಾಮಗಾರಿ ಪ್ರಾರಂಭವಾಗಿದೆ. ಆದರೆ, ಭೂಮಿಪೂಜೆ ನೆಪದಲ್ಲಿ ಸ್ಥಗಿತಗೊಳಿಸಲಾಗಿದೆ. ಮಳೆಗಾಲ ಪ್ರಾರಂಭವಾಗುವುದಕ್ಕೆ ಮುನ್ನ ಕಾಮಗಾರಿ ಪ್ರಾರಂಭಿಸಬೇಕೆಂಬ ಕಾಳಜಿ ಜನಪ್ರತಿನಿಧಿಗಳಿಗೆ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಂಸದ ಎಸ್.ಮುನಿಸ್ವಾಮಿ ಅವರ ಅನುದಾನ ₹ 20 ಲಕ್ಷ, ನನ್ನ ಎಂಎಲ್‌ ಸಿ ನಿಧಿ ₹ 20ಲಕ್ಷ, ವಿಧಾನ ಪರಿಷತ್‌ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಮನೋಹರ್, ನಜೀರ್‌ ಅಹ್ಮದ್‌ ಅವರ ಶಾಸಕರ ನಿಧಿ ತಲಾ ₹ 10 ಲಕ್ಷ ಅನುದಾನದಲ್ಲಿ 12 ವಿಶೇಷ ವಾರ್ಡ್‌ಗಳ ನಿರ್ಮಾಣ ಒಂದೂವರೆ ವರ್ಷದಿಂದ ಕುಂಟುತ್ತ ಸಾಗಿದೆ. ಗುತ್ತಿಗೆದಾರರು ಬಾಕಿ ಕೆಲಸಗಳನ್ನು ಕೂಡಲೇ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು.

‘ಆಸ್ಪತ್ರೆಯಲ್ಲಿ 20 ಡಯಾಲಿಸಿಸ್‌ ರೋಗಿಗಳಿಗೆ ಏಕಕಾಲದಲ್ಲಿ ಚಿಕಿತ್ಸೆ ನೀಡುವ ಘಟಕ ಶೀಘ್ರ ರೋಗಿಗಳಿಗೆ ದೊರಕುವಂತೆ ಮಾಡಬೇಕು. ಆಸ್ಪತ್ರೆ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT