ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಬಂದರೆ ಕೋಲಾರ ಸಮೃದ್ಧ

ಲ್ಯಾಪ್‌ಟಾಪ್ ವಿತರಣೆ ಕಾರ್ಯಕ್ರಮದಲ್ಲಿ ಸಂಸದ ಮುನಿಸ್ವಾಮಿ ಅಭಿಪ್ರಾಯ
Last Updated 7 ಮಾರ್ಚ್ 2020, 14:11 IST
ಅಕ್ಷರ ಗಾತ್ರ

ಕೋಲಾರ: ‘ಕೆ.ಸಿ ವ್ಯಾಲಿ, ಯರಗೋಳ್ ಹಾಗೂ ಎತ್ತಿನಹೊಳೆ ಯೋಜನೆಯಿಂದ ಜಿಲ್ಲೆಗೆ ಪೂರ್ಣ ಪ್ರಮಾಣದಲ್ಲಿ ನೀರು ಹರಿದು ಬಂದರೆ ಕೋಲಾರ ಸಮೃದ್ಧ ಮತ್ತು ಶ್ರೀಮಂತ ಜಿಲ್ಲೆಯಾಗುತ್ತದೆ’ ಎಂದು ಸಂಸದ ಎಸ್‌.ಮುನಿಸ್ವಾಮಿ ಅಭಿಪ್ರಾಯಪಟ್ಟರು.

ಕಾಲೇಜು ಶಿಕ್ಷಣ ಇಲಾಖೆಯು ಇಲ್ಲಿನ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ಲ್ಯಾಪ್‌ಟಾಪ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಬರಪೀಡಿತ ಕೋಲಾರ ಜಿಲ್ಲೆಯಲ್ಲಿ ನೀರಿಗೆ ತುಂಬಾ ಸಮಸ್ಯೆಯಿದೆ. ನೀರಾವರಿ ಯೋಜನೆಗಳು ಪೂರ್ಣಗೊಂಡು ನೀರು ಬರುವವರೆಗೂ ಜಿಲ್ಲೆಯ ಜನ ತಾಳ್ಮೆಯಿಂದ ಕಾಯಬೇಕು’ ಎಂದು ತಿಳಿಸಿದರು.

‘ಬರದ ಜಿಲ್ಲೆಯ ಮಕ್ಕಳಿಗೆ ಪೋಷಕರು ಶಿಕ್ಷಣಕ್ಕಿಂತ ದೊಡ್ಡ ಆಸ್ತಿ ನೀಡಲು ಸಾಧ್ಯವಿಲ್ಲ. ಪೋಷಕರ ಕನಸು ನನಸಾಗಿರುವ ಜವಾಬ್ದಾರಿ ಮಕ್ಕಳ ಮೇಲಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ ಸಾಧಿಸುವ ಮೂಲಕ ಪೋಷಕರ ಆಸೆ ಈಡೇರಿಸಬೇಕು’ ಎಂದು ಸಲಹೆ ನೀಡಿದರು.

‘ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳನ್ನು ನೀಡಿರುವ ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾವಂತರಿದ್ದು, ಛಲದಿಂದ ಶಿಕ್ಷಣ ಮುಂದುವರಿಸಿದರೆ ಗುರಿ ಮುಟ್ಟಬಹುದು. ಪೋಷಕರು ಹಾಗೂ ಗುರುಗಳಿಗೆ ವಿದ್ಯಾರ್ಥಿಗಳು ಕೀರ್ತಿ ತರಬೇಕು. ವಿದ್ಯಾರ್ಥಿಗಳು ಲ್ಯಾಪ್‌ಟಾಪ್‌ಗಳನ್ನು ಸದುದ್ದೇಶಕ್ಕೆ ಬಳಕೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಉಜ್ವಲ ಭವಿಷ್ಯ: ‘ಸರ್ಕಾರ ಜ್ಞಾನ ಸಂಪಾದನೆಗಾಗಿ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್‌ ನೀಡುತ್ತಿದೆ. ವಿದ್ಯಾರ್ಥಿಗಳು ಲ್ಯಾಪ್‌ಟಾಪ್‌ ಸದುಪಯೋಗಪಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಆರ್.ಚೌಡರೆಡ್ಡಿ ಹೇಳಿದರು.

‘ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್‌ಟಾಪ್‌ ನೀಡಲಾಗಿತ್ತು. ಬಳಿಕ ಬಂದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಸರ್ಕಾರವು  ₹ 2.50 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಕುಟುಂಬದ ಎಲ್ಲಾ ವರ್ಗದ ವಿದ್ಯಾರ್ಥಿನಿಯರಿಗೆ ಲ್ಯಾಪ್‌ಟಾಪ್‌ ನೀಡುವ ತೀರ್ಮಾನ ಕೈಗೊಂಡಿತು. ಬಿಜೆಪಿ ಸರ್ಕಾರ ಆ ನಿರ್ಧಾರವನ್ನೇ ಮುಂದುವರಿಸಿದೆ’ ಎಂದು ವಿವರಿಸಿದರು.

‘ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಪಡೆದುಕೊಂಡು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ಮಾಡಿ ಜಿಲ್ಲೆಯ ಕೆ.ಆರ್.ನಂದಿನಿ ಅವರು ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ವಿದ್ಯಾರ್ಥಿಗಳು ಅವರಂತೆ ವಿದ್ಯಾಭ್ಯಾಸ ಮಾಡಿ ಸಾಧಕರಾಗಬೇಕು’ ಎಂದು ಆಶಿಸಿದರು.

ದೊಡ್ಡ ಕಾಲೇಜು: ‘3,500 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿರುವ ನಮ್ಮ ಕಾಲೇಜು ರಾಜ್ಯದಲ್ಲೇ 3ನೇ ಅತಿ ದೊಡ್ಡ ಮಹಿಳಾ ಕಾಲೇಜು ಎಂಬ ಹೆಗ್ಗಳಿಕೆ ಪಡೆದಿದೆ. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಎಲ್ಲಾ ಕ್ಷೇತ್ರಗಳಲ್ಲೂ ಗಣನೀಯ ಸಾಧನೆ ಮಾಡಿದ್ದಾರೆ. ಕಾಲೇಜಿಗೆ ಶೌಚಾಲಯ, ಗ್ರಂಥಾಲಯ ಮತ್ತು ಕ್ಯಾಂಟೀನ್ ಸೌಲಭ್ಯ ಕಲ್ಪಿಸಬೇಕು’ ಎಂದು ಸರ್ಕಾರಿ ಮಹಿಳಾ ಕಾಲೇಜು ಪ್ರಾಂಶುಪಾಲ ಪ್ರೊ.ರಾಜೇಂದ್ರ ಮನವಿ ಮಾಡಿದರು.

ಕಾಲೇಜಿನ ಕ್ರೀಡಾಪಟುಗಳಿಗೆ ಟ್ರ್ಯಾಕ್‌ಸೂಟ್‌ ಖರೀದಿಸಲು ₹ 50 ಸಾವಿರ ವಿತರಿಸಿದ ಸಂಸದರು, ‘2 ತಿಂಗಳೊಳಗೆ ಶೌಚಾಲಯ ಮತ್ತು ವಿಶ್ರಾಂತಿ ಕೊಠಡಿ ನಿರ್ಮಿಸಿ ಕೊಡುತ್ತೇವೆ’ ಎಂದು ಭರವಸೆ ನೀಡಿದರು.

ಕಾಲೇಜಿಗೆ ವಿವಿಧ ಕೊಡುಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಂಡಿತ್‌ ಮುನಿವೆಂಕಟಪ್ಪ, ಸದಸ್ಯರಾದ ವೆಂಕಟೇಶ್, ಪಿ.ಮುನಿಯಪ್ಪ, ರಾಮಸ್ವಾಮಿ, ಸಿಎಂಆರ್ ಶ್ರೀನಾಥ್, ಓಂಪ್ರಕಾಶ್, ಚಂದ್ರಕಲಾ, ವಿಜಯಲಕ್ಷ್ಮೀ, ಆಶಾ, ಎಲ್.ಇ.ಕೃಷ್ಣೇಗೌಡ, ಪ್ರಾಧ್ಯಾಪಕರಾದ ಪ್ರೊ.ಅಶ್ವತ್ಥ್, ಪ್ರೊ.ವಿಜಯ್‌ಕುಮಾರ್‌, ಗೌರಿನಾಯ್ಡು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT