ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಿಕರ ಬಲಿದಾನಕ್ಕೆ ಬೆಲೆ ಕಟ್ಟಲಾಗದು

Last Updated 15 ಜನವರಿ 2022, 15:00 IST
ಅಕ್ಷರ ಗಾತ್ರ

ಕೋಲಾರ: ‘ಸೈನಿಕರು ವರ್ಷದ 365 ದಿನವೂ ದೇಶದ ಗಡಿ ಕಾಯುತ್ತಿರುವುದರಿಂದ ಜನ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿದೆ’ ಎಂದು ತಹಶೀಲ್ದಾರ್‌ ಕಚೇರಿಯ ಸಾಂಖ್ಯಿಕ ನಿರೀಕ್ಷಕ ಹಾಗೂ ಮಾಜಿ ಯೋಧ ಎನ್‌.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ಸೇನಾ ದಿನಾಚರಣೆ ಅಂಗವಾಗಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ‘ಸೈನಿಕರ ಶೌರ್ಯ ಸಾಧನೆಗೆ ಹಾಗೂ ಅವರ ಪ್ರಾಣ ತ್ಯಾಗಕ್ಕೆ ಪುರಸ್ಕಾರ ಬೇಕಿಲ್ಲ. ಅವರ ತ್ಯಾಗ ಬಲಿದಾನಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ನಮ್ಮೆಲ್ಲರ ಬದುಕಿಗಾಗಿ ತಮ್ಮ ಭವಿಷ್ಯವನ್ನೇ ಬಲಿಕೊಟ್ಟು ಅಮರರಾಗುವ ಸೈನಿಕರನ್ನು ಪ್ರತಿಯೊಬ್ಬರು ಸ್ಮರಿಸಬೇಕು’ ಎಂದರು.

‘ದೇಶ ಶಾಂತಿಯುತವಾಗಿ ಇರಬೇಕಾದರೆ ಸೈನಿಕರ ಪರಿಶ್ರಮ ಕಾರಣ. ತಂದೆ ತಾಯಿ, ಹೆಂಡತಿ ಮಕ್ಕಳನ್ನು ತೊರೆದು ದೇಶ ರಕ್ಷಣೆ ಮಾಡುವ ಯೋಧರನ್ನು ಗೌರವಿಸಬೇಕು. ಪ್ರಾಕೃತಿಕ ವಿಕೋಪ ಸೇರಿದಂತೆ ಮಾನವೀಯ ಬಿಕ್ಕಟ್ಟಿನ ಸಂದರ್ಭದಲ್ಲೂ ನಾಗರೀಕರಿಗೆ ಸಹಾಯ ಮಾಡುವಲ್ಲಿ ಸೈನಿಕರು ಮುಂಚೂಣಿಯಲ್ಲಿದ್ದಾರೆ’ ಎಂದು ಸ್ಮರಿಸಿದರು.

‘ಶೌರ್ಯ ಮತ್ತು ವೃತ್ತಿಪರತೆಗೆ ಭಾರತೀಯ ಸೇನೆ ಹೆಸರುವಾಸಿಯಾಗಿದೆ. ರಾಷ್ಟ್ರೀಯತೆಗೆ ಸೇನೆಯ ಕೊಡುಗೆ ಮೆಚ್ಚುವಂತದ್ದು. ಸೈನಿಕರ ಸೇವೆ ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ತಿಳಿಸಿದರು.

‘ಗಡಿ ಕಾಯುವ ಸೈನಿಕರು ಹಾಗೂ ಅನ್ನ ಕೊಡುವ ರೈತರು ದೇಶದ ಎರಡು ಕಣ್ಣುಗಳಿದ್ದಂತೆ. ಸೈನಿಕರು ಜಾತಿ, ಧರ್ಮದ ಭೇದವಿಲ್ಲದೆ ದೇಶ ರಕ್ಷಣೆ ಮಾಡುತ್ತಿದ್ದಾರೆ. ದೇಶದ ಪ್ರಜೆಗಳು ನೆಮ್ಮದಿಯಿಂದ ಬದುಕುತ್ತಿರುವುದರ ಹಿಂದೆ ಸೈನಿಕರ ಶ್ರಮವಿದೆ’ ಎಂದು ವಕೀಲ ಸತೀಶ್‌ ಹೇಳಿದರು.

‘ರಾಷ್ಟ್ರದ ಬೆಳವಣಿಗೆಗೆ ಯೋಧರ ಕೊಡುಗೆ ಅಪಾರ. ಕುಟುಂಬ, ಮನೆ ತ್ಯಜಿಸಿ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸೈನಿಕರು ಆದರ್ಶ ಜೀವಿಗಳು’ ಎಂದು ಕನ್ನಡಪರ ಹೋರಾಟಗಾರ ಅ.ಕೃ.ಸೋಮಶೇಖರ್ ಬಣ್ಣಿಸಿದರು.

ಜಿಲ್ಲಾ ಪ್ರಾಥಮಿಕ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಪಿ.ನಾರಾಯಣಪ್ಪ, ಕನ್ನಡ ಸಾಂಸ್ಕೃತಿಕ ಪರಿಷತ್‌ ಅಧ್ಯಕ್ಷ ಎಸ್‌.ಸಿ.ವೆಂಕಟಕೃಷ್ಣಪ್ಪ, ಕನ್ನಡ ಸಿರಿ ಸಾಹಿತ್ಯ ಪರಿಷತ್‌ ಅಧ್ಯಕ್ಷ ಟಿ.ಸುಬ್ಬರಾಮಯ್ಯ, ಪ್ರಕೃತಿ ಕಲಾ ತಂಡ ಅಧ್ಯಕ್ಷ ನಾರಾಯಣಸ್ವಾಮಿ, ಕವಿ ಶರಣಪ್ಪ ಗಬ್ಬೂರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT