ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಜಿಎಫ್: ಮತ್ತೊಂದು ವಿವಾದದಲ್ಲಿ ಬಿಜಿಎಂಎಲ್‌ ಪ್ರದೇಶ

ಬೆಂಗಳೂರಿನ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಪ್ರಸ್ತಾವನೆ l ಸ್ಥಳೀಯರ ತೀವ್ರ ವಿರೋಧ
ಕೃಷ್ಣಮೂರ್ತಿ
Published : 26 ಆಗಸ್ಟ್ 2024, 6:56 IST
Last Updated : 26 ಆಗಸ್ಟ್ 2024, 6:56 IST
ಫಾಲೋ ಮಾಡಿ
Comments

ಕೆಜಿಎಫ್: ಚಿನ್ನದ ಗಣಿ (ಬಿಜಿಎಂಎಲ್) ಮುಚ್ಚಿ 24 ವರ್ಷ ಗತಿಸಿದರೂ, ಈ ಸಂಸ್ಥೆಯು ಒಂದಲ್ಲಾ ಒಂದು ವಿವಾದದ ಮೂಲಕ ಸದಾ ಸುದ್ದಿಯಲ್ಲಿರುತ್ತದೆ. 

ಗಣಿ ಕಾರ್ಮಿಕರ ಸಮಸ್ಯೆ, ಆಸ್ತಿ ವಿವಾದ, ಒತ್ತುವರಿ, ಕಳ್ಳತನ, ಕೂಡಂಕುಲಂ ಅಣು ತ್ಯಾಜ್ಯ ವಿಲೇವಾರಿ ಸೇರಿದಂತೆ ಇನ್ನಿತರ ಕಾರಣಗಳಿಂದ ಈ ಸ್ಥಳವು ಸುದ್ದಿಯಲ್ಲಿತ್ತು. ಇದೀಗ ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ ಕಸವನ್ನು ವಿಲೇವಾರಿ ಘಟಕ ಸ್ಥಾಪನೆ ಮಾಡುವ ಯೋಜನೆಯು ಮತ್ತೊಂದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. 

ಬೆಂಗಳೂರಿನಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ಕಸವನ್ನು ಕೆಜಿಎಫ್‌ನ ಹೊರವಲಯದ ಬಿಜಿಎಂಎಲ್‌ಗೆ ಸೇರಿದ ಜಾಗದಲ್ಲಿ ವಿಲೇವಾರಿ ಮಾಡಲು ಘಟಕ ಸ್ಥಾಪಿಸುವ ಪ್ರಸ್ತಾವವನ್ನು ಜಿಲ್ಲಾಧಿಕಾರಿ ದೃಢಪಡಿಸುತ್ತಿದ್ದಂತೆಯೇ ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ಅಲ್ಲದೆ, ಈ ಪ್ರಸ್ತಾವನೆಯಿಂದ ಹಿಂದೆ ಸರಿಯಲು ಸರ್ಕಾರ ನಿರಾಕರಿಸಿದಲ್ಲಿ, ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನೂ ವಿವಿಧ ಸಂಘಟನೆಗಳು ನೀಡಿವೆ. 

ಸರ್ಕಾರದ ಈ ನಿರ್ಧಾರ ಹಿಂಪಡೆಯುವಂತೆ ಮಾಡುವ ಭಾಗವಾಗಿ ವಿವಿಧ ಸಂಘಟನೆಗಳು ಮತ್ತು ಸ್ಥಳೀಯರು, ಸಾಮಾಜಿಕ ಮಾಧ್ಯಮಗಳ ಮೂಲಕ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ರಾಜ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಕೆಲವು ಸಂಘಟನೆಗಳು ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿವೆ. 

ಇಂಥ ಪ್ರಸ್ತಾವನೆ ಇದು ಮೊದಲಲ್ಲ: 2012ರಲ್ಲಿ ತಮಿಳುನಾಡಿನ ಕೂಡಂಕುಲಂನಲ್ಲಿರುವ ಅಣುಶಕ್ತಿ ಸ್ಥಾವರದಿಂದ ಬಿಡುಗಡೆಯಾಗುವ ಅಣು ತ್ಯಾಜ್ಯವನ್ನು ಇಲ್ಲಿನ ಗಣಿಯ ಖಾಲಿ ಸುರಂಗಗಳಲ್ಲಿ ಸುರಿಯಲಾಗುವುದು ಎಂಬ ಸುದ್ದಿ ಹೊರಬಿದ್ದಿತ್ತು. ಈ ಪ್ರಸ್ತಾವನೆ ವಿರುದ್ಧ ಆಗಲೂ ಸ್ಥಳೀಯರ ತೀವ್ರ ಪ್ರತಿರೋಧಕ್ಕೆ ಕಾರಣವಾಗಿತ್ತು. ಆಗಿನ ಕೇಂದ್ರ ಸಚಿವ ಹಾಗೂ ಕೋಲಾರ ಸಂಸದರೂ ಆಗಿದ್ದ ಕೆ.ಎಚ್. ಮುನಿಯಪ್ಪ ಅವರು ಈ ಕುರಿತು ಹಿರಿಯ ಅಧಿಕಾರಿಗಳಿಂದ ಸ್ಪಷ್ಟನೆ ರೂಪದ ಹೇಳಿಕೆಯನ್ನು ಕೊಡಿಸಿ ಪ್ರತಿಭಟನೆಯ ಕಾವನ್ನು ತಣಿಸಿದ್ದರು. 

ಬಿಬಿಎಂಪಿ ಕಸವನ್ನು ಬಿಜಿಎಂಎಲ್‌ನ ಖಾಲಿ ಜಾಗದಲ್ಲಿ ಕಸ ವಿಲೇವಾರಿ ಮಾಡುವ ಪ್ರಕ್ರಿಯೆಗೂ ಕೂಡಂಕುಲಂ ರೀತಿಯ ಹೋರಾಟ ನಡೆಸಲು ಸ್ಥಳೀಯರು ಮುಂದಾಗಿದ್ದಾರೆ. ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡುವ ಪ್ರಸ್ತಾವನೆ ವಿರುದ್ಧ ಸೆ.2ರಂದು ಬೇತಮಂಗಲದಿಂದ ಕೆಜಿಎಫ್‌ಗೆ ಪಾದಯಾತ್ರೆ ಮೂಲಕ ಚಳವಳಿ ಪ್ರಾರಂಭಿಸಲು ಮುಂದಾಗಿವೆ. ಆದರೆ, ಶಾಸಕಿ ಎಂ. ರೂಪಕಲಾ ಶಶಿಧರ್ ಅವರು ಈವರೆಗೂ ಸರ್ಕಾರದ ಈ ನಿರ್ಧಾರದ ಬಗ್ಗೆ ಒಂದೇ ಒಂದು ಹೇಳಿಕೆ ನೀಡಿಲ್ಲ. ಇದು ಸ್ಥಳೀಯರು ಮತ್ತು ವಿವಿಧ ಸಂಘಟನೆಗಳವರ ಕುತೂಹಲ ಕೆರಳಿಸಿದೆ.

ಬಿಜಿಎಂಎಲ್‌ಗೆ ಸೇರಿದ ಸುಮಾರು 3 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆ ಕುರಿತು ಮಾತುಗಳು ಪ್ರಗತಿಯಲ್ಲಿದೆ. ಉದ್ದೇಶಿತ ಕಸ ಸಂಗ್ರಹ ಘಟಕದ ಬಳಿಯೇ 600 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರಾಂಗಣ ಅಭಿವೃದ್ಧಿಗೆ ಕೆಐಎಡಿಬಿ ಮುಂದಾಗಿದ್ದು, ಈ ನಿಟ್ಟಿನಲ್ಲಿ ನಾಮಫಲಕವನ್ನು ಹಾಕಲಾಗಿದೆ.

ಬೆಂಗಳೂರಿನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಈ ಪ್ರದೇಶಕ್ಕೆ ವಾಹನಗಳಲ್ಲಿ ಕಸ ತಂದು ಸುರಿಯುವ ಈ ಯೋಜನೆಯು ಆರ್ಥಿಕವಾಗಿ ಕಾರ್ಯಸಾಧುವೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್ ರಸ್ತೆಯಲ್ಲಿ ಕಸದ ಲಾರಿಗಳು ಸಂಚರಿಸುವಾಗ ರಸ್ತೆಗಳಲ್ಲಿ ಕಸ ಬಿದ್ದು ರಸ್ತೆಯ ಸ್ವಚ್ಚತೆಗೆ ಕೂಡ ಧಕ್ಕೆ ಬರಲಿದೆ ಎಂಬ ಅಪಸ್ವರಗಳೂ ಕೇಳಿಬಂದಿವೆ. 

ಬಿಜಿಎಂಎಲ್
ಬಿಜಿಎಂಎಲ್
ಕೆಜಿಎಫ್ ಬಳಿ ಕೈಗಾರಿಕೆಗೆ ಮೀಸಲಾದ ಪ್ರದೇಶ
ಕೆಜಿಎಫ್ ಬಳಿ ಕೈಗಾರಿಕೆಗೆ ಮೀಸಲಾದ ಪ್ರದೇಶ
ಕೃಷ್ಣಮೃಗ ಸಂತತಿಗೆ ಹಾನಿ
ಬೆಂಗಳೂರು ಕಸವನ್ನು ವಿಲೇವಾರಿ ಮಾಡಲು ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳು ವೀಕ್ಷಣೆ ಮಾಡಿರುವ ಸ್ಥಳದ ವ್ಯಾಪ್ತಿಯಲ್ಲಿ ನೂರಾರು ಕೃಷ್ಣಮೃಗಗಳಿವೆ. ಈ ಪ್ರದೇಶದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡುವುದರಿಂದ ಅವುಗಳ ಇಚ್ಛೆಗೆ ಅನುಸಾರವಾಗಿ ಜೀವಿಸುತ್ತಿರುವ ಕೃಷ್ಣಮೃಗಗಳ ಆವಾಸ ಸ್ಥಾನಕ್ಕೆ ಸಮಸ್ಯೆಯಾಗಲಿದ್ದು ಅವುಗಳ ವಾಸಸ್ಥಾನವು ಪಲ್ಲಟವಾಗುವ ಭೀತಿ ಎದುರಾಗಿದೆ. ಅಲ್ಲದೆ ಅವುಗಳು ಬೆಳೆ ಬೆಳೆದ ಜಮೀನುಗಳಿಗೆ ಲಗ್ಗೆ ಇಡುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.  ಮುಖ್ಯ ಕಾರ್ಯದರ್ಶಿ ಸೂಚನೆ ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ ಬಿಬಿಎಂಪಿ ಕಸ ವಿಲೇವಾರಿಗೆ ಸೂಕ್ತ ಜಾಗ ಹುಡುಕಲು ಮುಖ್ಯ ಕಾರ್ಯದರ್ಶಿ ಸೂಚಿಸಿದ್ದರು. ಅದರಂತೆ ಕೆಜಿಎಫ್ ಬಳಿಯ ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್ ಕಾರಿಡಾರ್ ಬಳಿ ಇರುವ 100 ಎಕರೆ ಪ್ರದೇಶ ಗುರುತಿಸಲಾಗಿದೆ. ಈ ನಿಟ್ಟಿನಲ್ಲಿ ಒಂದು ಸುತ್ತಿನ ಮಾತುಕತೆ ನಡೆದಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ಅನುಷ್ಠಾನ ಕಷ್ಟ ಬಿಜಿಎಂಎಲ್‌ಗೆ ಬಹುತೇಕ ಜಾಗವನ್ನು ರಾಜ್ಯ ಸರ್ಕಾರ ಗುತ್ತಿಗೆ ಆಧಾರದ ಮೇಲೆ ನೀಡಿದೆ. ಆದರೆ ಈಗ ಗುರುತಿಸಿದ ಜಾಗವು ಬಿಜಿಎಂಎಲ್ ಖಾಸಗಿ ವ್ಯಕ್ತಿಗಳಿಂದ ಖರೀದಿ ಮಾಡಿದ್ದಾಗಿದೆ. ಕಸ ವಿಲೇವಾರಿ ಘಟಕ ಸ್ಥಾಪನೆ ಯೋಜನೆ ಯೋಜನೆ ಅನುಷ್ಠಾನಗೊಳ್ಳಲು ಗುರುತಿಸಲಾದ ಜಾಗವನ್ನು ಬಿಜಿಎಂಎಲ್‌ನಿಂದ ಬಿಬಿಎಂಪಿ ಖರೀದಿಸಬೇಕಿದೆ. ಈಗಾಗಲೇ ಸಂಸದ ಮಲ್ಲೇಶಬಾಬು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದು ಈ ಯೋಜನೆ ಅನುಷ್ಠ ಕಷ್ಟಸಾಧ್ಯ ಎನ್ನಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT