ಮಂಗಳವಾರ, ಮೇ 24, 2022
30 °C

ದೆಹಲಿ ಕನ್ನಡಿಗರ ಮನಗೆದ್ದ ರಂಗ ವಿಜಯ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸ್ವಾತಂತ್ರ್ಯ ಹೋರಾಟಗಾರರು ತ್ಯಾಗ ಬಲಿದಾನದ ಮೂಲಕ ಸಮರ ಗೆದ್ದರೆ ಜಿಲ್ಲೆಯ ಮಾಲೂರಿನ ರಂಗ ವಿಜಯ ತಂಡದ ಕಲಾವಿದರು ಅವರ ನೆನಪು ಮರುಕಳಿಸುವಂತಹ ನಾಟಕ ಪ್ರದರ್ಶಿಸಿ ದೆಹಲಿ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮೆಚ್ಚುಗೆ ವ್ಯಕ್ತಪಡಿಸಿದರು.

ದೆಹಲಿ ಕರ್ನಾಟಕ ಸಂಘದ 75ನೇ ಅಮೃತ ಮಹೋತ್ಸವದ ಅಂಗವಾಗಿ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ‘ಮೊಬೈಲ್ ಯುಗವು ವಿಕಸಿತ ಮನಸ್ಸುಗಳನ್ನು ಕುಬ್ಜಗೊಳಿಸಿ ಏಕಾಂತಕ್ಕೆ ದೂಡುತ್ತದೆ. ಸಾಂಸ್ಕೃತಿಕ ಹಾಗೂ ಜನಪದ ಕಲೆಗಳು ಮನುಷ್ಯನನ್ನು ಬಹುಮುಖಿಯಾಗುವಂತೆ ಮಾಡುತ್ತವೆ’ ಎಂದು ಅಭಿಪ್ರಾಯಪಟ್ಟರು.

‘ಕಲೆಯು ಮನಸ್ಸುಗಳನ್ನು ಅರಳಿಸುತ್ತದೆ. ಜತೆಗೆ ಬದುಕನ್ನು ಜೀವನ್ಮುಖಿಯಾಗಿಸಿ ಜಗತ್ತು ವಿಸ್ಮಯಗಳ ಸಾಗರ ಮತ್ತು ಆನಂದವೇ ಜೀವನ ಎನ್ನುವಂತೆ ಮಾಡುತ್ತದೆ. ದೆಹಲಿಯ ಕನ್ನಡ ಮನಸ್ಸುಗಳಿಗೆ ಸ್ಫೂರ್ತಿ ತುಂಬುವುದರ ಜತೆಗೆ ದೇಶ ಪ್ರೇಮವನ್ನು ಮತ್ತಷ್ಟು ಹೆಚ್ಚು ಮಾಡುವ ನಿಟ್ಟಿನಲ್ಲಿ ರಂಗ ವಿಜಯ ತಂಡದ ಸ್ವಾತಂತ್ರ ಸಮರ ಕರುನಾಡು ಅಮರ ನಾಟಕವು ಪ್ರತಿಯೊಬ್ಬರ ಮನಸ್ಸಿನಲ್ಲಿ ಅಮರವಾಗಿ ನಿಲ್ಲುತ್ತದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದರು.

‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯು ಸಾಂಸ್ಕೃತಿಕ ಕಲೆಗಳ ತವರಾಗಿವೆ. ದೆಹಲಿ ಅಮೃತ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಉದ್ಘಾಟನೆ ಮಾಡಿಸಿದೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಜಿಲ್ಲಾ ಉತ್ಸವಗಳನ್ನು ಮಾಡಿಸಿ ಪ್ರಧಾನ ಮಂತ್ರಿಗಳ ಸಮ್ಮುಖದಲ್ಲಿ ಸಮಾರೋಪ ಸಮಾರಂಭ ರೂಪಿಸುವ ಉದ್ದೇಶವಿದೆ’ ಎಂದು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಂ.ನಾಗರಾಜ್ ವಿವರಿಸಿದರು.

ರಾಜ್ಯದೆಲ್ಲೆಡೆ ಪ್ರದರ್ಶನ: ‘‌ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಯೋಧರನ್ನು ನಾವು ಮರೆತು ಹೋಗುತ್ತಿರುವ ಸಮಯದಲ್ಲಿ ರಂಗ ವಿಜಯ ತಂಡವು ಸ್ವಾತಂತ್ರ್ಯ ಸಮರ ಕರುನಾಡು ಅಂತಹ ಹುತಾತ್ಮರನ್ನು ನೆನಪಿಸುವ ಕಾರ್ಯ ಮಾಡುತ್ತಿದೆ. ಈ ನಾಟಕವನ್ನು ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರದರ್ಶನ ಮಾಡಿಸುವ ಪ್ರಯತ್ನದಲ್ಲಿ ಸಂಘವು ರಂಗ ವಿಜಯ ತಂಡದ ಜತೆಗೆ ದುಡಿಯಲು ಸದಾ ಸಿದ್ಧ’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ್‌ಬಾಬು ಭರವಸೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಗೋಪಾಲಗೌಡ, ರಂಗ ವಿಜಯ ತಂಡದ ಗೌರವಾಧ್ಯಕ್ಷ ಪಲ್ಲವಿಮಣಿ, ಜಿಲ್ಲಾ ಕಂದಾಯ ಗ್ರಾಮ ಲೆಕ್ಕಿಗರ ಸಂಘದ ಅಧ್ಯಕ್ಷ ಅಜಯ್‌ಕುಮಾರ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.