ಭಾನುವಾರ, ಜೂನ್ 20, 2021
29 °C
ಸ್ಕಾರ್ಫ್‌ ದಿನಾಚರಣೆಯಲ್ಲಿ ಜಿಲ್ಲಾ ಮುಖ್ಯ ಆಯುಕ್ತ ಶಂಕರಪ್ಪ ಹೇಳಿಕೆ

ಸ್ಕೌಟ್ಸ್‌–ಗೈಡ್ಸ್ ಸಂಸ್ಥೆ ಬೇರು ಬಲಿಷ್ಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸಂಸ್ಥೆಯ ಹಾಲಿ ಸದಸ್ಯರು ಹೊಸ ಸದಸ್ಯರನ್ನು ಸಂಸ್ಥೆಗೆ ಆಹ್ವಾನಿಸಲು ಶಾಲಾ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಕ್ರಿಯಾ ಯೋಜನೆ ರೂಪಿಸಬೇಕು’ ಎಂದು ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆ ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ಹೇಳಿದರು.

ಇಲ್ಲಿ ಭಾನುವಾರ ನಡೆದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯ ಸ್ಕಾರ್ಫ್‌ ದಿನಾಚರಣೆ ಕಾರ್ಯಕ್ರಮದಲ್ಲಿ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿ, ‘ಸಂಸ್ಥೆಯು 1907ರ ಆಗಸ್ಟ್‌ನಲ್ಲಿ 20 ಸದಸ್ಯರಿಂದ ಆರಂಭಗೊಂಡಿತು. ಇಂದು 176ಕ್ಕೂ ಹೆಚ್ಚು ದೇಶಗಳಲ್ಲಿ ಕೋಟ್ಯಾಂತರ ಸಂಸ್ಥೆಯು ಸದಸ್ಯರನ್ನು ಹೊಂದಿದೆ. ಸಂಸ್ಥೆಯ ಸದಸ್ಯತ್ವ ಹೆಚ್ಚಿಸಲು ಪ್ರಯತ್ನಿಸಬೇಕು’ ಎಂದು ತಿಳಿಸಿದರು.

‘113 ವರ್ಷಗಳನ್ನು ಯಶ್ವಸಿಯಾಗಿ ಪೂರ್ಣಗೊಳಿಸಿರುವ ಸಂಸ್ಥೆಯು ಇಂದಿಗೂ ಕ್ರಿಯಾಶೀಲವಾಗಿದೆ. ಸಂಸ್ಥೆಯು ವಿದ್ಯಾರ್ಥಿ ಸಮುದಾಯದಲ್ಲಿ ದೇಶ ಪ್ರೇಮ ಮತ್ತು ಜೀವನ ಮೌಲ್ಯ ಬೆಳೆಸುತ್ತಿದೆ. ಬದಲಾಗುತ್ತಿರುವ ರಾಜಕೀಯ ವ್ಯವಸ್ಥೆಯಿಂದ ಅನೇಕ ಸಂಸ್ಥೆಗಳು ನೇಪಥ್ಯಕ್ಕೆ ಸರಿಯುತ್ತಿವೆ. ಆದರೆ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಬೇರುಗಳು ಇಂದಿಗೂ ಬಲಿಷ್ಠವಾಗಿವೆ. ಸಂಸ್ಥೆಗೆ ಇನ್ನಷ್ಟು ಬಲ ತುಂಬುವ ಅಗತ್ಯವಿದೆ’ ಎಂದರು.

‘ಸ್ಕೌಟ್ಸ್- ಮತ್ತು ಗೈಡ್ಸ್ ಸಂಸ್ಥೆಯು ಶಿಸ್ತು ಹಾಗೂ ಸಂಯಮಕ್ಕೆ ಹೆಸರಾಗಿದೆ. ಸಂಸ್ಥೆಯ ಆದರ್ಶಗಳು ಉತ್ತಮ ಸಮಾಜಕ್ಕೆ ಪೂರಕ. ಸೇವಾ ಮನೋಭಾವದಿಂದ ಉತ್ತಮ ಸಮಾಜ ನಿರ್ಮಾಣ ಮಾಡುವ ಮನಸ್ಸುಗಳಿಗೆ ಸಂಸ್ಥೆಯಲ್ಲಿ ಸದಸ್ಯತ್ವ ಸದಾ ಸಿಗಲಿದೆ’ ಎಂದು ಹೇಳಿದರು.

ದಾರಿ ದೀಪ: ‘ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಇಡೀ ವಿಶ್ವದಲ್ಲಿ ಸಮವಸ್ತ್ರ ಧರಿಸಿ ಸೇವೆ ಸಲ್ಲಿಸುವ ಹಾಗೂ ಯುವಕ ಯುವತಿಯರನ್ನು ಉತ್ತಮ ನಾಗರಿಕರಾಗಿ ಮಾಡುವ ಸೇವಾ ಸಂಸ್ಥೆಯಾಗಿದೆ. ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸುವಲ್ಲಿ ಸಂಸ್ಥೆಯ ಆದರ್ಶಗಳು ದಾರಿ ದೀಪವಾಗಿವೆ’ ಎಂದು ಸಂಸ್ಥೆಯ ಜಿಲ್ಲಾ ಸಂಘಟನಾ ಆಯುಕ್ತ ವಿ.ಬಾಬು ಅಭಿಪ್ರಾಯಪಟ್ಟರು.

‘ದೇಶದ ಭವಿಷ್ಯ ಯುವ ಸಮುದಾಯದ ಮೇಲೆ ನಿಂತಿದೆ. ದೇಶದ ಅಮೂಲ್ಯ ಆಸ್ತಿಯಾದ ಯುವ ಸಮುದಾಯವು ಸರಿ ದಾರಿಯಲ್ಲಿ ಸಾಗಬೇಕು. ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ, ಸಾಹಸ, ನಾಯಕತ್ವ ಗುಣ ಬಿತ್ತುತ್ತಿದೆ. ಯುವ ಪೀಳಿಗೆಯು ಸಮಾಜಕ್ಕೆ ಆದರ್ಶಗಳನ್ನು ತಲುಪಿಸುವ ಕೆಲಸ ಮಾಡಬೇಕು. ಅರ್ಪಣಾ ಮನೋಭಾವದಿಂದ ಸಮಾಜ ಸೇವೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಬಿಡುವಿನ ಸಮಯದಲ್ಲಿ ಸ್ಕೌಟ್ಸ್- ಗೈಡ್ಸ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಕೈಲಾದಷ್ಟು ಸಹಾಯ ಮಾಡಬೇಕು. ಸಂಸ್ಥೆಯಲ್ಲಿ 3 ವರ್ಷದ ಮಕ್ಕಳಿಂದ 25 ವಯಸ್ಸಿನವರಿಗೆ ಶಿಬಿರ ಆಯೋಜಿಸಲಾಗಿದೆ. ಈ ಶಿಬಿರಗಳಲ್ಲಿ ಭಾಗವಹಿಸಿ ಭವಿಷ್ಯದಲ್ಲಿ ಉತ್ತಮ ನಾಯಕ ಮತ್ತು ನಾಯಕಿಯರಾಗಿ ಬೆಳೆಯಬೇಕು’ ಎಂದು ಆಶಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು