ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಶಾನಕ್ಕೆ ಜಾಗ: ಗ್ರಾಮಸ್ಥರ ಪ್ರತಿಭಟನೆ

Last Updated 7 ಅಕ್ಟೋಬರ್ 2021, 15:20 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ಚೌಡದೇನಹಳ್ಳಿ ಗ್ರಾಮದಲ್ಲಿ ಭೋವಿ ಹಾಗೂ ಒಕ್ಕಲಿಗ ಸಮುದಾಯಕ್ಕೆ ಸ್ಮಶಾನ ಜಾಗ ಒದಗಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಇಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದರು.

‘ಅಧಿಕಾರಿಗಳ ಕುಮ್ಮಕಿನಿಂದ ಗ್ರಾಮದ ಬಲಾಢ್ಯರೊಬ್ಬರು ಸ್ಮಶಾನದ ಜಾಗವನ್ನು ಸ್ವಂತಕ್ಕೆ ಮಂಜೂರು ಮಾಡಿಸಿಕೊಂಡಿದ್ದಾರೆ. ಗ್ರಾಮದಲ್ಲಿ ಯಾರೇ ಸತ್ತರೂ ಹೆಣ ಹೂಳಲು ಸ್ಮಶಾನ ಇಲ್ಲದಂತಾಗಿದೆ. ಈ ಸಂಬಂಧ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿ ಸ್ಮಶಾನಕ್ಕೆ ಜಮೀನು ನೀಡುವಂತೆ ಕೋರಿದರೂ ಪ್ರಯೋಜನವಾಗಿಲ್ಲ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಚೌಡದೇನಹಳ್ಳಿಯ ಸರ್ವೆ ನಂ 6ರಲ್ಲಿನ ಸರ್ಕಾರದ 4 ಎಕರೆ 20 ಗುಂಟೆ ಜಾಗದಲ್ಲಿ ಗ್ರಾಮಸ್ಥರು ಹಲವು ವರ್ಷಗಳಿಂದ ಮೃತರ ಹೆಣಗಳನ್ನು ಹೂಳುತ್ತಿದ್ದರು. ಶ್ಯಾನಭೋಗರಾಗಿದ್ದ ಲಕ್ಷ್ಮೀನಾರಾಯಣ ಎಂಬುವರು ರಾಜಕೀಯ ಪ್ರಭಾವ ಬಳಸಿ ಆ ಜಾಗದಲ್ಲಿ 2 ಎಕರೆ 9 ಗುಂಟೆ ಜಮೀನನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಂಡು ಮಂಗಸಂದ್ರ ಗ್ರಾಮದ ಮಂಜುನಾಥ್ ಎಂಬುವರಿಗೆ ಮಾರಾಟ ಮಾಡಿದ್ದಾರೆ’ ಎಂದು ಗ್ರಾಮಸ್ಥ ವೆಂಕಟಾಚಲಪತಿ ಹೇಳಿದರು.

‘ಉಳಿಕೆ 2 ಎಕರೆ 11 ಗುಂಟೆ ಜಮೀನು ಸ್ಮಶಾನದ ಜಾಗವಾಗಿದ್ದು, ಈ ಜಮೀನು ಕಲ್ಲು ಬಂಡೆಗಳಿಂದ ಕೂಡಿದ್ದು, ಅಲ್ಲಿ ಹೆಣ ಹೂಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಅಂತ್ಯ ಸಂಸ್ಕಾರಕ್ಕೆ ಜಾಗ ಇಲ್ಲದಂತಾಗಿದೆ’ ಎಂದು ಗ್ರಾಮಸ್ಥ ಕುಪೇಂದ್ರ ಆರೋಪಿಸಿದರು.

‘ಸ್ಮಶಾನಕ್ಕಾಗಿ ಮೀಸಲಾಗಿದ್ದ ಸರ್ಕಾರಿ ಜಾಗವನ್ನು ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡದೆ ಅಕ್ರಮವಾಗಿ ಮಂಜೂರು ಮಾಡಿದ್ದಾರೆ. ಈ ಮಂಜೂರಾತಿ ರದ್ದುಪಡಿಸಿ ಸ್ಮಶಾನಕ್ಕೆ ಜಮೀನು ನೀಡಬೇಕು. ಸ್ಮಶಾನಕ್ಕಾಗಿ ಮೀಸಲಿಟ್ಟಿದ್ದ ಜಮೀನು ಗುರುತಿಸಿ ಕೊಡಬೇಕು. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸ್ಮಶಾನಕ್ಕೆ ಕಲ್ಲು ಬಂಡೆಗಳು ಇಲ್ಲದ ಸೂಕ್ತ ಜಾಗ ಕೊಡಬೇಕು. ಸ್ಮಶಾನಕ್ಕೆ ರಸ್ತೆ ನಿರ್ಮಾಣ ಮಾಡಿಕೊಡಬೇಕು’ ಎಂದು ಗ್ರಾಮಸ್ಥರು ಮನವಿ ಮಾಡಿದರು.

ಹೆಣವಿಟ್ಟು ಹೋರಾಟ: ‘ಸ್ಮಶಾನಕ್ಕೆ ಸೂಕ್ತ ಜಮೀನು ಕೊಡದಿದ್ದರೆ ಗ್ರಾಮದಲ್ಲಿ ಯಾರೇ ಸತ್ತರೂ ಜಿಲ್ಲಾಧಿಕಾರಿ ಕಚೇರಿ ಅವರ ಎದುರು ಹೆಣವಿಟ್ಟು ಹೋರಾಟ ಮಾಡುತ್ತೇವೆ. ವಿಧಾನಸೌಧದವರೆಗೆ ಕಾಲ್ನಡಿಗೆ ಜಾಥಾ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಗ್ರಾಮಸ್ಥರಾದ ಚಿಕ್ಕಮುನಿಯಪ್ಪ, ಪ್ರಭಾವತಿ, ಗಜೇಂದ್ರ, ಕೆಂಬೋಡಿ ಗ್ರಾಮದ ನಾರಾಯಣಸ್ವಾಮಿ, ಮುಖಂಡರಾದ ಸಂಜೀವಯ್ಯ, ಶಾಂತಮ್ಮ, ಆನಂದ್, ವಿಜಯಕುಮಾರ್, ಮುನಿಸ್ವಾಮಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT