ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಬಾಗಿಲು: ಸೊರಗಿದ ಶ್ರೀರಾಮಮಂದಿರ

ನಿರ್ವಹಣೆ ಇಲ್ಲದೆ ದೇಗುಲ; ಕಾಯಕಲ್ಪಕ್ಕೆ ಶಾಸಕರ ಭರವಸೆ
Last Updated 5 ಫೆಬ್ರುವರಿ 2022, 2:59 IST
ಅಕ್ಷರ ಗಾತ್ರ

ಮುಳಬಾಗಿಲು: ಜಿಲ್ಲೆಯ ಮೇರು ರಾಜಕಾರಣಿ ದಿವಂಗತ ಎಂ.ವಿ.ಕೃಷ್ಣಪ್ಪ ಅವರ ಕನಸಿನ ಶ್ರೀರಾಮಮಂದಿರ ಕಲ್ಯಾಣ ಮಂಟಪ ನಿರ್ವಹಣೆ ಕೊರತೆಯಿಂದಾಗಿ ಬಾಗಿಲು ಮುಚ್ಚಿದೆ.

ಕೇಂದ್ರ ಹಾಗೂ ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಎಂ.ವಿ.ಕೃಷ್ಣಪ್ಪ ಅವರು ಬಡ ಹಾಗೂ ಮಧ್ಯಮವರ್ಗದವರ ನೆರವಿಗೆಂದು 1962ರಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಮುಂದಾದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿ ಕಮ್ಯೂನಿಸ್ಟ್ ಪಕ್ಷದ ಮುಖಂಡ ಶಾಸಕ ದಿವಂಗತ ಆರ್.ವೆಂಕಟರಾಮಯ್ಯ ಅವರು ನೂರಾರು ಮಂದಿ ಕಾರ್ಯಕರ್ತರೊಡಗೂಡಿ ಪ್ರತಿಭಟನೆ ನಡೆಸಿದ್ದರು. ಅಂದಿನ ಕಾಲದಲ್ಲಿ ಕಲ್ಯಾಣ ಮಂಟಪಕ್ಕೆ ₹70 ಸಾವಿರ ವ್ಯಯಿಸಿರುವುದು ಅವರ ವಿರೋಧಕ್ಕೆ ಕಾರಣವಾಗಿತ್ತು.

‘ಶ್ರೀರಾಮಮಂದಿರ ಉದ್ಫಾಟನೆ ವಿರೋಧಿಸಿ ಆರ್.ವೆಂಕಟರಾಮಯ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಕಾರರನ್ನು ಚದುರಿಸಲು ಲಾಠಿಚಾರ್ಜ್‌, ಅಶ್ರುವಾಯು ಪ್ರಯೋಗಿಸಲಾಗಿತ್ತು’ ಎಂದು ಅಂದಿನ ಘಟನೆಗಳನ್ನು ನೆನೆಸಿಕೊಳ್ಳುತ್ತಾರೆ ಅಂದಿನ ಘಟನೆಗೆ ಸಾಕ್ಷಿಯಾಗಿದ್ದ ಮಂಡಿಕಲ್ ಗ್ರಾಮದ ಎಂ.ವಿ.ಶ್ರೀನಿವಾಸಗೌಡ.

‘ವಿರೋಧದ ನಡುವೆಯೂ ಎಂ.ವಿ.ಕೃಷ್ಣಪ್ಪ ತಮ್ಮ ಅಧಿಕಾರ ಉಪಯೋಗಿಸಿ ಶ್ರೀ ರಾಮಮಂದಿರ ಕಲ್ಯಾಣ ಮಂಟಪ ನಿರ್ಮಿಸಿ ಸ್ಥಳೀಯರಿಗೆ ಕೊಡುಗೆಯಾಗಿ ನೀಡಿದ್ದರು. ಆಕರ್ಷಣೀಯ ಕಲ್ಲುಗಳಿಂದ ನಿರ್ಮಿಸಲಾಗಿದೆ. ದೂರದ ಊರುಗಳಿಂದ ಬರುವವರು ವಾಸ್ತವ್ಯ ಹೂಡಲು ವ್ಯವಸ್ಥಿತವಾಗಿದೆ. ಇಲ್ಲಿ ಸಾವಿರಾರು ಮದುವೆ ಕಾರ್ಯಗಳು ನಡೆದು ಇಲ್ಲಿ ಮಾಡಿದ ಮದುವೆ ಸಂಬಂಧಗಳು ಹಳಸುವುದಿಲ್ಲ ಹಾಗೂ ಗಟ್ಟಿಯಾಗಿರುತ್ತದೆ ಎಂಬ ಪ್ರತೀತಿ ಜನಜನಿತವಾಗಿತ್ತು.

ಈಗ ನಿರ್ವಹಣೆ ಕೊರತೆಯಿಂದ ಮೂಲಸೌಲಭ್ಯಕ್ಕೆ ಕೊರತೆಯಾಗಿದೆ. ನಿರ್ವಹಣೆ ಹೊತ್ತಿರುವ ಮುಜರಾಯಿ ಇಲಾಖೆ ನಿರ್ಲಕ್ಷದಿಂದ ನೀರು, ಪಾತ್ರೆ, ಅಡುಗೆಕೋಣೆ, ಶೌಚಾಲಯ, ವಿದ್ಯುತ್ ಸಂಪರ್ಕ ಸುಸ್ಥಿತಿಯಲ್ಲಿಲ್ಲ. ತಾಲ್ಲೂಕು ಆಡಳಿತಕ್ಕೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

‘ಶ್ರೀರಾಮಮಂದಿರಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಇಲ್ಲಿ ಬಡವರು ಅತ್ಯಂತ ಕಡಿಮೆ ಬಾಡಿಗೆಯಲ್ಲಿ ಕೇವಲ ₹500 ಪಾವತಿಸಿ ಮದುವೆ ಸಮಾರಂಭ ಮಾಡಿಕೊಳ್ಳುತ್ತಿದ್ದರು. ಆದರೆ ಅದು ನಿರ್ವಹಣೆ ಹಾಗೂ ಮೂಲ ಸೌಲಭ್ಯಗಳ ಕೊರತೆಯಿಂದ ಮುಚ್ಚಿರುವುದು ಖಂಡನೀಯ. ಜನಪ್ರತಿನಿಧಿಗಳು ಅಧಿಕಾರಿಗಳು ಸೂಕ್ತ ಕ್ರಮವಹಿಸಿ ಮಂಟಪ ಪುನ: ಕಾರ್ಯಾರಂಭ ಮಾಡಿಸುವತ್ತ ಗಮನಹರಿಸಬೇಕು’ ಎಂದು ಸ್ಥಳೀಯರಾದ ಕದರೀಪುರ ಮಣಿ ಅವರು ಒತ್ತಾಯಿಸಿದರು.

ಭರವಸೆ: ಶಾಸಕ ಎಚ್.ನಾಗೇಶ್ ಪ್ರತಿಕ್ರಿಯಿಸಿ ಶ್ರೀರಾಮಮಂದಿರಕ್ಕೆ ಮೂಲಸೌಕರ್ಯ ಕಲ್ಪಿಸಿ ಬಡವರಿಗೆ ಸಮಾರಂಭ ನಡೆಸಲು ಅನುಕೂಲವಾಗುವಂತೆ ಶೀಘ್ರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT