ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಧಾನ್ಯ ಸಂಸ್ಕರಣೆಯ ಯಶೋಗಾಥೆ

ಗುಂಡಮನತ್ತ ಗ್ರಾಮದ ರತ್ನಮ್ಮ ಸಾಧನೆಗೆ ಮೆಚ್ಚುಗೆ
Last Updated 5 ಡಿಸೆಂಬರ್ 2021, 5:07 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ ಗುಂಡ ಮನತ್ತ ಗ್ರಾಮದಲ್ಲಿ ಮಹಿಳೆಯೊಬ್ಬರು ಸಿರಿಧಾನ್ಯ ಸಂಸ್ಕರಣಾ ಘಟಕ ಸ್ಥಾಪಿಸಿ ಯಶಸ್ವಿಯಾಗಿದ್ದಾರೆ. ಈ ಘಟಕದಲ್ಲಿ ತಯಾರಿಸಲ್ಪಡುವ ಉತ್ಪನ್ನಗಳು ಸಿರಿಧಾನ್ಯ ಪ್ರಿಯರ ಮನ ಸೆಳೆದಿವೆ.

ಕೃಷಿಕ ಕುಟುಂಬಕ್ಕೆ ಸೇರಿದ ಎ.ವಿ. ರತ್ನಮ್ಮ ಶಿಕ್ಷಕ ತರಬೇತಿ ಪಡೆದಿದ್ದರೂ ಉದ್ಯೋಗಕ್ಕಾಗಿ ಕಾಯದೆ ಪತಿ ನಾರಾಯಣಸ್ವಾಮಿ ಅವರೊಂದಿಗೆ ತಮ್ಮ ಜಮೀನಿನಲ್ಲಿ ಸಿರಿದಾನ್ಯ ಬೆಳೆದು ಸಣ್ಣ ಪ್ರಮಾಣದಲ್ಲಿ ಸಂಸ್ಕರಣಾ ಘಟಕ ಸ್ಥಾಪಿಸಿದರು. ಐದು ವರ್ಷಗಳಲ್ಲಿ ಹಂತ ಹಂತವಾಗಿ ಬೆಳವಣಿಗೆ ಹೊಂದಿ, ಅಲ್ಲಿ ಉತ್ಪಾದಿಸುವ ಉತ್ಪನ್ನಗಳು ಜಿಲ್ಲೆಯ ಗಡಿ ದಾಟಿದ್ದು, ಅವರಿಗೆ ರಾಜ್ಯಮಟ್ಟದ ಅತ್ಯುತ್ತಮ ಮಹಿಳಾ ಉದ್ಯಮಿ ಪ್ರಶಸ್ತಿಯನ್ನೂ ತಂದುಕೊಟ್ಟಿವೆ.

ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸಿರುವ ಈ ಘಟಕದಲ್ಲಿ ಸಾಮೆ, ನವಣೆ, ಆರಕ, ಊದಲು, ಕೊರಲೆ, ಬರಗು, ರಾಗಿ, ಜೋಳ ಹಾಗೂ ಸಜ್ಜೆಯಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಿ, ಆಕರ್ಷಕವಾಗಿ ಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತಿದೆ. ವೈಭವ ಸಿರಿಧಾನ್ಯಗಳ ಸ್ವಸಹಾಯ ಸಂಘದ ಮುಖ್ಯಸ್ಥೆಯಾದ ಅವರು, ಸಿರಿಧಾನ್ಯ ಸಂಸ್ಕರಣಾ ತರಬೇತಿ ಪಡೆದು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸುವುದರ ಮೂಲಕ ಹೆಸರು ಮಾಡಿದ್ದಾರೆ.

‘ಸದ್ಯದ ಪರಿಸ್ಥಿತಿಯಲ್ಲಿ ಮಹಿಳೆಯರು ಉತ್ಪಾದನಾ ಕ್ಷೇತ್ರಕ್ಕೆ ಬರುವುದೇ ದೊಡ್ಡ ಸವಾಲು. ಸ್ವಾವಲಂಬಿ ಜೀವನ ನಡೆಸುವುದರ ಜತೆಗೆ ಬೇರೆಯವರಿಗೆ ಬದುಕು ಕಟ್ಟಿಕೊಡುವ ಪ್ರಯತ್ನಕ್ಕೆ ಅಗತ್ಯವಾದ ಪ್ರೋತ್ಸಾಹ ಸಿಗುತ್ತಿಲ್ಲ. ಸಿರಿಧಾನ್ಯ ಸಂಸ್ಕರಣಾ ಘಟಕ ಸ್ಥಾಪನೆ ಅಥವಾ ವಿಸ್ತರಣೆಗೆ ಅಗತ್ಯ ಬಂಡವಾಳ ಸಿಗುತ್ತಿಲ್ಲ. ಯಾವುದೇ ಬ್ಯಾಂಕ್ ಇಂತಹ ಘಟಕಗಳಿಗೆ ಸಾಲ ನೀಡಲು ಮುಂದೆ ಬರುತ್ತಿಲ್ಲ. ಸಾಲಕ್ಕಾಗಿ ಬೇಡಿಕೆ ಇಟ್ಟರೆ ಸಬೂಬು ಹೇಳಿ ಕಳಿಸಿಕೊಡುತ್ತಾರೆ’ ಎಂಬುದು ರತ್ನಮ್ಮ ಅವರ ಅಳಲು.

‘ಮನುಷ್ಯನ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿರುವ ಸಿರಿಧಾನ್ಯ ಉತ್ಪನ್ನಗಳಿಗೆ ಬೇಡಿಕೆ ಇದ್ದರೂ, ಗೃಹ ಕೈಗಾರಿಕೆಯಂತೆ ನಡೆಸಲಾಗುತ್ತಿರುವ ಘಟಕಗಳಲ್ಲಿ ಉತ್ಪಾದಿಸುವ ಉತ್ಪನ್ನಗಳಿಗೆ ಪ್ರಚಾರದ ಕೊರತೆ ಇದೆ. ದೊಡ್ಡ ಕಂಪನಿಗಳು ತಯಾರಿಸುವ ಉತ್ಪನ್ನಗಳ ಅಬ್ಬರದ ಪ್ರಚಾರದ ನಡುವೆ ಸಣ್ಣ ಘಟಕಗಳಲ್ಲಿ ತಯಾರಿಸಲ್ಪಡುವ ಉತ್ಪನ್ನಗಳು ಜನರ ಗಮನಕ್ಕೆ ಹೋಗುತ್ತಿಲ್ಲ. ಇದರಿಂದ ವ್ಯಾಪಾರ ನಿರೀಕ್ಷಿತ ಮಟ್ಟದಲ್ಲಿ ನಡೆಯುವುದಿಲ್ಲ’ ಎಂಬುದು ಅವರ ಅನುಭವದ ಮಾತು.

ರತ್ನಮ್ಮ ಸಿರಿಧಾನ್ಯ ಉತ್ಪನ್ನಗಳನ್ನು ಮಾತ್ರವಲ್ಲದೆ ಉಪ್ಪಿನಕಾಯಿ, ಸಾಂಬಾರು ಪುಡಿ ಮತ್ತಿತರ ದಿನಬಳಕೆ ವಸ್ತುಗಳನ್ನೂ ತಯಾರಿಸುತ್ತಾರೆ. ಇಷ್ಟು ಮಾತ್ರವಲ್ಲದೇ ಕಬ್ಬಿಣಾಂಶ ಮತ್ತು ವಿಟಮಿನ್ ‘ಸಿ’ ಭರಿತ ವೇದಿಕ್ ಸಿರಿಧಾನ್ಯ ಆರೋಗ್ಯ ಪೇಯ ತಯಾರಿಕೆಗೆ ಪೇಟೆಂಟ್ ಕೂಡ ಪಡೆದುಕೊಂಡಿದ್ದಾರೆ. ವಿದ್ಯಾವಂತ ಗ್ರಾಮೀಣ ಮಹಿಳೆಯರಿಗೆ ಮಾದರಿಯಾಗಿ ಘಟಕ ನಡೆಸುತ್ತಿರುವುದು ಅವರ ಹಿರಿಮೆ.

ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಿ ಸಿರಿಧಾನ್ಯ ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಬೆಳೆದ ಸಿರಿಧಾನ್ಯ ಖರೀದಿಸಿ ಘಟಕದಲ್ಲಿ ಸಂಸ್ಕರಣೆ ಮಾಡುತ್ತಿದ್ದಾರೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳ ರೈತರಿಗೂ ಅನುಕೂಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT