ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಧೀನ ಜಮೀನಿಗೆ ಇನ್ನೂ ಪರಿಹಾರ ಇಲ್ಲ

ಮುಳಬಾಗಿಲು: ರೈಲ್ವೆ ಇಲಾಖೆಯಿಂದ ಆರಂಭವಾದ ಕಾಮಗಾರಿ
Last Updated 3 ಡಿಸೆಂಬರ್ 2021, 5:09 IST
ಅಕ್ಷರ ಗಾತ್ರ

ಮುಳಬಾಗಿಲು: ತಾಲ್ಲೂಕಿಗೆ ರೈಲು ಸಂಪರ್ಕ ಕಲ್ಪಿಸುವ ಯೋಜನೆಗೆ 2016ರಲ್ಲಿ ಚಾಲನೆ ನೀಡಲಾಗಿದ್ದರೂ, ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಜೊತೆಗೆ, ಸ್ವಾಧೀನಗೊಂಡಿರುವ ಜಮೀನಿಗೆ ಪರಿಹಾರದ ಹಣವೂ ಬಾರದೆ ನಾಗರಿಕರು ಆತಂಕಕ್ಕೊಳಗಾಗಿದ್ದಾರೆ.

2016ರಲ್ಲಿ ಜಮೀನು ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ನಂತರ ಸರ್ವೇ ಕಾರ್ಯ ಪೂರ್ಣಗೊಂಡ ಎರಡು ವರ್ಷಗಳ ಬಳಿಕವೂ ರೈಲ್ವೆ ಇಲಾಖೆಯ ಕಡೆಯಿಂದ ಯಾವುದೇ ಕಾಮಗಾರಿ ಪ್ರಾರಂಭವಾಗಿಲ್ಲ. ಜಮೀನು ಮಾರಾಟ ಮಾಡಲಾಗದೆ, ಇತ್ತ ಪರಿಹಾರದ ಹಣದ ಬಗ್ಗೆಯೂ ಖಾತರಿ ಇಲ್ಲದೆ ಯೋಜನೆಗಾಗಿ ಜಮೀನು ಕಳೆದುಕೊಳ್ಳುವವರು ಸಂಕಷ್ಟಕ್ಕೊಳಗಾಗಿದ್ದಾರೆ.

ತಾಲ್ಲೂಕಿನ 13 ಗ್ರಾಮಗಳ 179 ಸರ್ವೇ ನಂಬರ್‌ಗಳ ಒಟ್ಟು 222 ಎಕರೆ 26 ಗುಂಟೆ ಜಮೀನನ್ನು ರೈಲ್ವೆ ಇಲಾಖೆ ಸ್ವಾಧೀನಪಡಿಸಿಕೊಳ್ಳಲು ಯೋಜಿಸಿತ್ತು. ಇದರಂತೆ ತಾಲ್ಲೂಕು ವ್ಯಾಪ್ತಿಯ ಹನುಮನಹಳ್ಳಿ, ಕುರುಬರಹಳ್ಳಿ, ಅನಂತಪುರ, ಜಮ್ಮನಹಳ್ಳಿ, ಚಿಕ್ಕಮಾದೇನಹಳ್ಳಿ, ವಿರೂಪಾಕ್ಷಿ, ಗುಟ್ಟಹಳ್ಳಿ, ಮುಳಬಾಗಲು ಗ್ರಾಮ, ಕುಮದೇನಹಳ್ಳಿ, ತುರುಕರಹಳ್ಳಿ, ಇಂಡ್ಲಕೆರೆ, ಸೊಣ್ಣವಾಡಿ, ನರಸೀಪುರದಿನ್ನೆ ಗ್ರಾಮಗಳಲ್ಲಿ ಒಟ್ಟು 222 ಎಕರೆ 26 ಗುಂಟೆ ಜಮೀನಿನ ಸರ್ವೇ ಮಾಡಲಾಗಿದೆ.

ತಾಲ್ಲೂಕಿಗೆ ರೈಲು ಬರುತ್ತಿದೆ ಎನ್ನುತ್ತಿದ್ದಂತೆಯೇ ಸುತ್ತಮುತ್ತಲಿನ ಜಮೀನಿಗೆ ಒಳ್ಳೆಯ ಬೆಲೆ ಬಂದಿದೆ. ಜೊತೆಗೆ ಯೋಜನೆಗಾಗಿ ಜಮೀನು ಕಳೆದುಕೊಳ್ಳುವವರು ಪರಿಹಾರದ ಕುರಿತು ಭರವಸೆಯನ್ನೂ ಇಟ್ಟುಕೊಂಡಿದ್ದರು. ಆದರೆ ಈಗ ಎರಡೂ ಇಲ್ಲದಂತಾಗಿದೆ.

‘ಯೋಜನೆಗಾಗಿ ಕೆಲವು ಕುಟುಂಬಗಳ ಪೂರ್ತಿ ಜಮೀನನ್ನು ಗುರುತು ಮಾಡಲಾಗಿದೆ. ಸರ್ವೇ ಕಾರ್ಯ ಮುಗಿದು ರೈಲು ಮಾರ್ಗ ನಿರ್ಮಾಣಕ್ಕಾಗಿ ಗುರುತು ಹಾಕಿದ್ದಾರೆ. ಜಮೀನಿನಲ್ಲಿ ರೈಲ್ವೆ ಇಲಾಖೆಯವರು ಕಲ್ಲುಗಳನ್ನು ನೆಟ್ಟುಹೋಗಿದ್ದಾರೆ. ಆದರೆ, ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ’ ಎಂದು ನಾಗರಿಕರು ಹೇಳಿದರು.

ಈ ಕುರಿತು ಬೆಂಗಳೂರಿನ ರೈಲ್ವೆ ಮುಖ್ಯ ಕಚೇರಿ ಕಾಂಟೋನ್ಮೆಟ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ‘ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯಿಂದ (ಕೆಐಎಡಿಬಿ) ಸರ್ವೇ ಮಾಡಲಾದ ಜಮೀನುಗಳ ಸ್ವಾಧೀನಕ್ಕೆ
ಕೇಂದ್ರ ಸರ್ಕಾರದಿಂದ ಹಣ ಮಂಜೂರಾಗಿಲ್ಲ. ಜೊತೆಗೆ ‌ಈ ಯೋಜನೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT