ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳಬಾಗಿಲು: ಅವನತಿ ಹಂತದಲ್ಲಿ ಶತಮಾನದ ಶಾಲೆ

ಶಾಲೆಯಲ್ಲಿ ಶೌಚಾಲಯಕ್ಕೂ ನೀರಿಲ್ಲ, ಕುಡಿಯಲೂ ನೀರಿಲ್ಲ
Published 21 ಜೂನ್ 2024, 7:03 IST
Last Updated 21 ಜೂನ್ 2024, 7:03 IST
ಅಕ್ಷರ ಗಾತ್ರ

ಮುಳಬಾಗಿಲು: ನಗರದ ಹೃದಯ ಭಾಗದಲ್ಲಿರುವ 107 ವರ್ಷಗಳ ಇತಿಹಾಸವಿರುವ ಸರ್ಕಾರಿ ಪ್ರಾಥಮಿಕ ಕಿರಿಯ ಹಾಗೂ ಹಿರಿಯ ಬಾಂಗ್ಲಾ ಶಾಲಾ ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿದ್ದು, ಚಾವಣಿಯು ರಂದ್ರಗಳು ಬಿದ್ದಿದ್ದು ಅವನತಿಯ ಸ್ಥಿತಿಯಲ್ಲಿದೆ.

ಬ್ರಿಟ್ರಿಷರು 1917ರಲ್ಲಿ ಕಾಮಗಾರಿ ಪ್ರಾರಂಭಿಸಿ 1925ರಲ್ಲಿ ಅತ್ಯಾಕರ್ಷಕವಾಗಿ ಪೂರ್ಣಗೊಳಿಸಿದ್ದ ಶಾಲೆಯೇ ಬಂಗಲೆ ಶಾಲೆ ಅಥವಾ ಬಾಂಗ್ಲಾ ಶಾಲೆ. ಭಾರೀ ಗಾತ್ರದ ಹಾಗೂ ಎತ್ತರದ ಗೋಡೆ ನಿರ್ಮಿಸಿ ಹೆಂಚನ್ನು ಚಾವಣಿಯಾಗಿ ಬಳಸಿ ಕೆಂಪು ಬಣ್ಣವನ್ನು ಬಳಸಿ ಸುಂದರವಾಗಿ ನಿರ್ಮಿಸಲಾಗಿತ್ತು. ನಗರದ ನೇತಾಜಿ ಕ್ರೀಡಾಂಗಣ ಹಾಗೂ ಡಿವಿಜಿ ಗಡಿ ಭವನದ ಮದ್ಯದಲ್ಲಿ ಅತ್ಯಾಧುನಿಕ ಕಾಲದ ಕಟ್ಟಡದಂತೆ ನಿರ್ಮಾಣ ಮಾಡಲಾಗಿತ್ತು. ಅಂತಹ ಕಟ್ಟಡಕ್ಕೆ ಶತಮಾನ ಕಳೆದಿದ್ದು, ಬೀಳುವ ಹಂತಕ್ಕೆ ತಲುಪಿದೆ.

ಶಾಲೆಯನ್ನು ಭಾರೀ ಗಾತ್ರದ ಗೋಡೆ, ಮರದ ಸಾಮಾಗ್ರಿ ಬಳಸಿ ನಿರ್ಮಿಸಲಾಗಿದೆ. ಆದರೆ ಮಳೆ ಹಾಗೂ ಗಾಳಿಗೆ ಹೆಂಚುಗಳು ಅಲ್ಲಲ್ಲಿ ಪಕ್ಕಕ್ಕೆ ಸರಿದು ಹೋಗಿ ರಂದ್ರಗಳಾಗಿವೆ. ಹಾಗಾಗಿ ಮಳೆ ನೀರು ಸರಾಗವಾಗಿ ಶಾಲೆಯ ಒಳಗೆ ಬೀಳುತ್ತದೆ. ಜತೆಗೆ ಗೋಡೆ ಮೇಲೆ ನೀರು ಸೋರಿಕೆಯಾಗಿ ಬಹುತೇಕ ಗೋಡೆಗಳು ನೆನೆದು ನಿಂತಿವೆ. ಇನ್ನು ಚಾವಣಿಯ ಮರದ ಸಾಮಾಗ್ರಿಗಳು ಮಳೆಯಿಂದಾಗಿ ನೆನೆದು ಕಪ್ಪು ಬಣ್ಣಕ್ಕೆ ತಿರುಗಿದೆ. ಇದರಿಂದ ಚಾವಣಿ ಯಾವ ಸಮಯದಲ್ಲಿ ಕುಸುತ್ತಿದೆಯೋ ಗೊತ್ತಿಲ್ಲ. ಆದರೂ, ವಿದ್ಯಾರ್ಥಿಗಳು ಅದೇ ಕಟ್ಟಡದಲ್ಲಿ ಕುಳಿತು ಪಾಠ ಕೇಳುವ ಸ್ಥಿತಿ ಇದೆ.

ಶಾಲೆಯಲ್ಲಿ ಒಟ್ಟು 12 ಕೊಠಡಿಗಳಿದ್ದು, ಕೇವಲ 9 ಕೊಠಡಿಗಳಲ್ಲಿ ಪಾಠ ಪ್ರವಚನಗಳು ನಡೆಯುತ್ತದೆ. ಹಾಳಾಗಿರುವ ಒಂದು ಕೊಠಡಿಯಲ್ಲಿ ಹಳೆಯ ಶೈಕ್ಷಣಿಕ ಪರಿಕರಗಳನ್ನು ಹಾಕಿದ್ದರೆ, ಮತ್ತೊಂದು ಕೊಠಡಿಯನ್ನು ಶೌಚಾಲಯಕ್ಕೆ ಹಾಗೂ ಇನ್ನೊಂದು ಕೊಠಡಿಯನ್ನು ಕಚೇರಿ ಕೆಲಸಗಳಿಗೆ ಬಳಕೆ ಮಾಡಲಾಗುತ್ತಿದೆ. ಶಾಲೆಯ ಎಲ್ಲಾ ಕೊಠಡಿಗಳು ಅವನತಿಯ ಹಂತ ತಲುಪಿದೆ.

ಕೆಲವು ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿರುವ ಸಂದರ್ಭದಲ್ಲಿ ಬಾಂಗ್ಲಾ ಶಾಲೆಯ ಆಂಗ್ಲ ಮಾಧ್ಯಮದಲ್ಲಿ 1 ರಿಂದ 7ನೇ ತರಗತಿವರೆಗೆ 370 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 10 ಮಂದಿ ಕಾಯಂ ಹಾಗೂ ಮೂರು ಮಂದಿ ಅತಿಥಿ ಶಿಕ್ಷಕರಿದ್ದಾರೆ. 7 ಮತ್ತು 8ನೇ ತರಗತಿಯಲ್ಲಿ ಮಾತ್ರ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಬೀಳುವ ಸ್ಥಿತಿಯಲ್ಲಿ ಗೋಡೆಗಳು: 107 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಶಾಲೆಯ ಎಲ್ಲಾ ಗೋಡೆಗಳು ಬಿರುಕು ಬಿಟ್ಟಿದ್ದು, ಬೀಳುವ ಸ್ಥಿತಿ ತಲುಪಿದೆ. ಕೆಲವು ಗೋಡೆಗಳು ಮಳೆಯ ನೀರು ಸೋರಿಕೆಯಾಗಿ ಬಣ್ಣವೇ ಕಳೆದುಕೊಂಡಿದೆ.

ಎಲ್ಲರಿಗೂ ಒಂದೇ ಶೌಚಾಲಯ: ಬಾಲಕ ಮತ್ತು ಬಾಲಕಿಯರಿಗೆ ಒಂದೇ ಶೌಚಾಲಯವಿದ್ದು, ಮಕ್ಕಳನ್ನು ಒಂದೇ ಸಲ ಶೌಚಾಲಯಕ್ಕೆ ಕಳುಹಿಸಲು ಶಿಕ್ಷಕರೇ ಭಯ ಪಡುವಂತಹ ವಾತಾವರಣ ಇದೆ. ಹಾಗಾಗಿ ಪ್ರತ್ಯೇಕ ಶೌಚಾಲಯದ ಅವಶ್ಯಕವಿದೆ.

ತೆರೆದ ನೀರಿನ ಸಂಪು: ಇನ್ನು ಆಳವಾದ ನೀರಿನ ಸಂಪು ಶಾಲೆಯ ಮದ್ಯದಲ್ಲಿ ಇದ್ದರೂ ನೀರಿಲ್ಲದೆ ಹಾಗೂ ಸಂಪಿನ ಮುಚ್ಚಳ ಸಂಪೂರ್ಣವಾಗಿ ಮುರಿದು ಬಿದ್ದಿದೆ. ಹಾಗಾಗಿ ವಿದ್ಯಾರ್ಥಿಗಳು ಭಯದಿಂದ ಓಡಾಡುವಂತಾಗಿದೆ. ಸಂಪಿನ ಸುತ್ತಲೂ ಕಲ್ಲಿನ ಚಪ್ಪಡಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸ್ವಲ್ಪ ಯಾಮಾರಿದರೂ ಬೀಳುವುದು ಖಚಿತ.

ಕುಡಿಯುವ ನೀರನ್ನು ಕೊಂಡು ಬಳಸುವ ಪರಿಸ್ಥಿತಿ: 370 ವಿದ್ಯಾರ್ಥಿಗಳು, 13 ಮಂದಿ ಒಟ್ಟು ಶಿಕ್ಷಕರು ಮೂರು ಮಂದಿ ಅಡುಗೆ ಸಹಾಯಕರಿರುವ ಶಾಲೆಯಲ್ಲಿ ಶೌಚಾಲಯಕ್ಕೂ ನೀರಿಲ್ಲ, ಕುಡಿಯಲೂ ನೀರಿಲ್ಲ. ಹಾಗಾಗಿ ಪ್ರತಿನಿತ್ಯ ಒಂದು ಬಿಂದಿಗೆಗೆ ₹10 ರಿಂದ ₹15 ನೀಡಿ ಖಾಸಗಿಯವರಿಂದ ಶಾಲಾ ಅಭಿವೃದ್ಧಿ ಅನುದಾನದಲ್ಲಿ ಕೊಂಡು ಬಳಸುವಂತಾಗಿದೆ.

ಶಾಲೆಯ ಪ್ರತ್ಯೇಕ ಐದು ಕೊಠಡಿಗಳು ಬೀಳುವ ಸ್ಥಿತಿಯಲ್ಲಿ: ಬಾಂಗ್ಲಾ ಶಾಲೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ನೇತಾಜಿ ಕ್ರೀಡಾಂಗಣ ಹಾಗೂ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಸಮೀಪದಲ್ಲಿ ಐದು ಕೊಠಡಿಗಳನ್ನು ನಿರ್ಮಿಸಲಾಗಿತ್ತು. ಆದರೆ, ಐದರಲ್ಲಿ ಒಂದು ಕೊಠಡಿ ಬಿಟ್ಟು ಉಳಿದ ನಾಲ್ಕು ಕೊಠಡಿಗಳು ಸಂಪೂರ್ಣವಾಗಿ ಚಾವಣಿಯ ಸಿಮೆಂಟ್ ಉದುರಿ, ಮಳೆಗೆ ಗೋಡೆಗಳು ನೆನೆದು ನಾಶವಾಗಿದೆ. ಇದರಿಂದ ನಾಲ್ಕು ಕೊಠಡಿಗಳನ್ನು ಸಂಪೂರ್ಣವಾಗಿ ವ್ಯರ್ಥವಾಗಿ ಬಿಡಲಾಗಿದೆ.

ಶಾಲೆಯ ಹೆಂಚಿನ ಚಾವಣಿಯಲ್ಲಿ ರಂದ್ರಗಳು ಬಿದ್ದಿರುವುದು
ಶಾಲೆಯ ಹೆಂಚಿನ ಚಾವಣಿಯಲ್ಲಿ ರಂದ್ರಗಳು ಬಿದ್ದಿರುವುದು
ಶಾಲೆಯಲ್ಲಿ ಕೊಠಡಿಗಳ ಸಮಸ್ಯೆ
ಶಾಲೆಯಲ್ಲಿ ಕೊಠಡಿಗಳ ಸಮಸ್ಯೆಯಿದ್ದು ಎರಡು ಮೂರು ತರಗತಿಗಳನ್ನು ಒಂದೇ ಕೊಠಡಿಯಲ್ಲಿ ಕೂರಿಸುವಂತಾಗಿದೆ. ಜತೆಗೆ ಶುದ್ಧ ಕುಡಿಯುವ ನೀರಿನ ಯಂತ್ರ ರಿಪೇರಿಯಾಗಿ ಮೂಲೆಗೆ ಬಿದ್ದಿದೆ. ಮಕ್ಕಳು ಊಟ ಮಾಡಲು ಸ್ಥಳಾವಕಾಶವೇ ಇಲ್ಲವಾಗಿದೆ. ನಗರಸಭೆಯಿಂದ ₹ 100 ನೀಡಿ ನೀರು ತರಿಸಿಕೊಳ್ಳುತ್ತೇವೆ. ತಡವಾಗಿದ್ದರೆ ಖಾಸಗಿಯವರಿಗೆ ₹600 ನೀಡಿ ನೀರನ್ನು ಕೊಂಡು ಬಳಸುವಂತಾಗಿದೆ. ನಾಗರತ್ನಮ್ಮ ಮುಖ್ಯ ಶಿಕ್ಷಕಿ === ನಾಲ್ಕು ಕೊಠಡಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆ ತಾಲ್ಲೂಕಿನಲ್ಲಿ ಬೀಳುವ ಸ್ಥಿತಿಯಲ್ಲಿರುವ ಕಟ್ಟಡಗಳನ್ನು ನೆಲಸಮ ಮಾಡಲು ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ. 60 ಶಾಲೆಗಳು ದುರಸ್ತಿಗೆ ಒಳಗಾಗಿದ್ದರೆ ಒಟ್ಟು ತಾಲ್ಲೂಕಿನಲ್ಲಿ 116 ಕೊಠಡಿಗಳು ದುರಸ್ತಿಗೆ ಪಟ್ಟಿ ಮಾಡಲಾಗಿದೆ. ಬಾಂಗ್ಲಾ ಶಾಲೆಯ ನಾಲ್ಕು ಕೊಠಡಿಗಳನ್ನು ನೂತನವಾಗಿ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆ.ಆರ್.ಗಂಗರಾಮಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT