ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆನಿಲ್ಲಾ ಮರ್ಮ ಮತ್ತು ಸಿನಿಮಾ ಧರ್ಮ

Last Updated 24 ಮೇ 2018, 19:30 IST
ಅಕ್ಷರ ಗಾತ್ರ

‘ಸಿನಿಮಾ ತಯಾರಿಕೆಯಲ್ಲಿ ಎರಡು ಧರ್ಮಗಳಿವೆ. ಕಮರ್ಷಿಯಲ್ ಸಿನಿಮಾ ಮಾಡಿ ಹೇಗಾದರೂ ನಿರ್ಮಾಪಕರಿಗೆ ಹಣ ತಂದುಕೊಡಬೇಕು ಎನ್ನುವುದು ಒಂದು ಧರ್ಮ. ಕಮರ್ಷಿಯಲ್‌ ಅಂಶಗಳನ್ನು ಇಟ್ಟುಕೊಂಡೂ ಸಮಾಜಕ್ಕೆ ಒಂದು ಸಂದೇಶ ನೀಡಬೇಕು ಎಂಬ ಜವಾಬ್ದಾರಿಯಿಂದ ಸಿನಿಮಾ ಮಾಡುವುದು ಇನ್ನೊಂದು ಧರ್ಮ. ನಮ್ಮದು ಎರಡನೇ ಥರದ ಉದ್ದೇಶ ಇಟ್ಟುಕೊಂಡು ತಯಾರಾದ ಸಿನಿಮಾ’

ಹೀಗೆ ಸಿನಿಮಾ ಧರ್ಮಕರ್ಮಗಳ ಬಗ್ಗೆ ವಿಶ್ಲೇಷಣೆ ನಡೆಸಿದ್ದು ನಿರ್ದೇಶಕ ಜಯತೀರ್ಥ. ಅವರ ನಿರ್ದೇಶನದ ಐದನೇ ಸಿನಿಮಾ ಜೂನ್‌ 1ರಂದು ತೆರೆಗೆ ಬರಲಿದೆ. ಇದೇ ವಿಷಯವನ್ನು ಹಂಚಿಕೊಳ್ಳಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ‘ಈ ಚಿತ್ರದಲ್ಲಿ ಮರ್ಡರ್‌ ಮಿಸ್ಟ್ರಿ, ಥ್ರಿಲ್ಲರ್ ಅಂಶ, ಹಾಸ್ಯ, ಪ್ರೇಮ ಎಲ್ಲವೂ ಇದೆ. ಆದರೆ ಇವುಗಳ ಜತೆಗೆ ಒಂದು ಗಟ್ಟಿಯಾದ ಸಾಮಾಜಿಕ ಸಂದೇಶವೂ ಇದೆ. ಅದನ್ನು ನೀಡುವುದು ನಿರ್ದೇಶಕನಾದ ನನ್ನ ಜವಾಬ್ದಾರಿ ಎಂದು ನಂಬಿಕೊಂಡವನು ನಾನು. ಅದೇ ನೈತಿಕ ಹಕ್ಕಿನಿಂದ ಕೇಳುತ್ತಿದ್ದೇನೆ, ‘ವೆನಿಲ್ಲಾ’ ಚಿತ್ರವನ್ನು ಜನರು ಗೆಲ್ಲಿಸಿಕೊಡಬೇಕು’ ಎಂದೂ ಅವರು ಹೇಳಿದರು.

ಚಿತ್ರತಂಡದಲ್ಲಿರುವ ಹಲವರಿಗೆ ಇದು ಪ್ರಥಮ ಸಿನಿಮಾ. ಮೈಸೂರಿನ ಪ್ರತಿಭೆ ಅವಿನಾಶ್‌ ಈ ಚಿತ್ರದ ಮೂಲಕ ನಾಯಕನಾಗಿ ಪರಿಚಿತರಾಗುತ್ತಿದ್ದಾರೆ. ಮಂಡ್ಯ ರಮೇಶ ಅವರ ‘ನಟನ’ ರಂಗತಂಡದಲ್ಲಿ  ಅಭಿನಯ ತರಬೇತಿ ಪಡೆದ ಅನುಭವ ಅವರಿಗಿದೆ. ಮೊದಲ ಸಿನಿಮಾ ಬಿಡುಗಡೆಯಾಗುತ್ತಿರುವ ಸಂಭ್ರಮ ಮತ್ತು ಆತಂಕ ಎರಡೂ ಅವರ ಮಾತುಗಳಲ್ಲಿ ಎದ್ದು ಕಾಣುತ್ತಿತ್ತು. ‘ಇದು ನನ್ನ ಕನಸು ನನಸಾಗುತ್ತಿರುವ ಗಳಿಗೆ. ಇದಕ್ಕೆಲ್ಲ ಮುಖ್ಯ ಕಾರಣ ತಂದೆ ಜೈರಾಮ್‌’ ಎಂದು ಸಿನಿಮಾ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ತಂದೆಯನ್ನು ಅವರು ಸ್ಮರಿಸಿಕೊಂಡರು. ‘ವೆನಿಲ್ಲಾ’ದಲ್ಲಿ ಅವರು ಸೀದಾ ಸಾದಾ ಹುಡುಗನ ಪಾತ್ರದಲ್ಲಿ ನಟಿಸಿದ್ದಾರಂತೆ. ‘ನಾಯಕನ ಬದುಕಿನಲ್ಲಿ ನಡೆಯುವ ಒಂದು ಘಟನೆ ಅವನ ಜೀವನವನ್ನು ಎಲ್ಲೆಲ್ಲಿಗೋ ಕರೆದೊಯ್ಯುತ್ತದೆ. ತನ್ನ ಡಿಪ್ಲೊಮಸಿ ಗುಣದಿಂದಾಗಿಯೇ ಅವನು ಎಲ್ಲವನ್ನೂ ಎದುರಿಸುತ್ತಾನೆ’ ಎಂದು ಕಥೆಯ ಎಳೆಯನ್ನು ಸೂಚ್ಯವಾಗಿ ಬಿಚ್ಚಿಟ್ಟರು ಅವಿನಾಶ್‌.

ರೆಹಮಾನ್‌ ಅವರು ಈ ಚಿತ್ರದಲ್ಲಿ ನಾಯಕಿಯ ಅಣ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಈ ಚಿತ್ರದಲ್ಲಿ ನಾನು ಸಂಶೋಧಕ. ತೆರೆಯ ಮೇಲೆ ಸ್ವಲ್ಪ ಕಡಿಮೆಯೇ ಕಾಣಿಸಿಕೊಂಡರೂ ಇಡೀ ಚಿತ್ರದ ಕಥೆಯನ್ನು ಸ್ಪಷ್ಟಗೊಳಿಸುವ ಮಹತ್ವದ ಪಾತ್ರ ನನ್ನದು. ಈ ಚಿತ್ರ ಗೆಲ್ಲುತ್ತದೆ ಎಂಬ ನಂಬಿಕೆ ನನಗಿದೆ’ ಎಂದರು ರೆಹಮಾನ್‌.

ವೆನಿಲ್ಲಾಕ್ಕೆ ಸಂಗೀತ ನಿರ್ದೇಶನ ಮಾಡಿರುವ ಭರತ್‌ ಬಿ.ಜೆ. ಅವರು ಹಿನ್ನೆಲೆ ಸಂಗೀತದಲ್ಲಿಯೂ ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದಾರಂತೆ. ‘ಚಿತ್ರಕಥೆಯ ಹಂತದಿಂದಲೂ ಸಂಗೀತ ನಿರ್ದೇಶಕರನ್ನು ಜತೆಗಿಟ್ಟುಕೊಳ್ಳುವ ಅಪರೂಪದ ನಿರ್ದೇಶಕ ಜಯತೀರ್ಥ’ ಎಂದು ಅವರು ಶ್ಲಾಘಿಸಿದರು.

ಕೊನೆಯಲ್ಲಿ ಮಾತನಾಡಿದ ನಾಯಕಿ ಸ್ವಾತಿ ಕೊಂಡೆ ಅವರು ‘ಇದು ನಾನು ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ. ಕ್ಯಾಪ್ನೊಪೋಬಿಯಾ ಎಂಬ ಎಲ್ಲಿಯೇ ಹೊಗೆ ಕಾಣಿಸಿದರೂ ಉಬ್ಬಸ ಕಾಣಿಸಿಕೊಳ್ಳುವ ಕಾಯಿಲೆ ಇರುವ ಹುಡುಗಿಯಾಗಿ ನಟಿಸಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT