ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖಾ ಕಾರ್ಯ ಚುರುಕುಗೊಳಿಸಲು ಚಿಂತನೆ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೆಪಟ್‌

ಧ್ವಜ ದಿನಾಚರಣೆ
Last Updated 2 ಏಪ್ರಿಲ್ 2019, 14:01 IST
ಅಕ್ಷರ ಗಾತ್ರ

ಕೋಲಾರ: ‘ಇಲಾಖೆಯಲ್ಲಿ ಅಪರಾಧ ಪ್ರಕರಣಗಳ ತನಿಖೆ ಮತ್ತಷ್ಟು ಚುರುಕುಗೊಳಿಸಲು ಚಿಂತಿಸಲಾಗಿದ್ದು, ಇದಕ್ಕಾಗಿ ಜಿಲ್ಲೆಯನ್ನು ಮಾದರಿಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್ ತಿಳಿಸಿದರು.

ಇಲ್ಲಿ ಮಂಗಳವಾರ ನಡೆದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮಾತನಾಡಿ, ‘ಪೊಲೀಸ್ ಇಲಾಖೆಯಲ್ಲಿ ತನಿಖಾ ಕಾರ್ಯ ಬಹಳ ಮುಖ್ಯ. ಅಪರಾಧಿಗಳಿಗೆ ಶಿಕ್ಷೆಯಾಗುವ ದಿಸೆಯಲ್ಲಿ ತನಿಖೆ ನಿರ್ಣಾಯಕ ಪಾತ್ರ ವಹಿಸುತ್ತದೆ’ ಎಂದು ಹೇಳಿದರು.

‘ತನಿಖೆಯಲ್ಲಿ ಲೋಪವಾದರೆ ಅಪರಾಧಿಗಳು ಸಲೀಸಾಗಿ ಶಿಕ್ಷೆಯಿಂದ ಪಾರಾಗುತ್ತಾರೆ. ಆದ್ದರಿಂದ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯು ಹೆಚ್ಚು ಜವಾಬ್ದಾರಿಯುತವಾಗಿ ಪ್ರಕರಣಗಳ ತನಿಖೆ ನಡೆಸಬೇಕು. ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸುವ ಮುನ್ನ ಕಾನೂನು ತಜ್ಞರ ಸಲಹೆ ಪಡೆಯಬೇಕು’ ಎಂದು ಕಿವಿಮಾತು ಹೇಳಿದರು.

‘ಇತ್ತೀಚಿನ ದಿನಗಳಲ್ಲಿ ಪೊಲೀಸ್‌ ಸಿಬ್ಬಂದಿಗೆ ಕಾರ್ಯ ಒತ್ತಡ ಹೆಚ್ಚಿದೆ. ಇದರಿಂದ ಸಿಬ್ಬಂದಿಯ ಆರೋಗ್ಯ ಹಾಳಾಗುತ್ತಿದೆ. ಪೊಲೀಸ್‌ ಇಲಾಖೆಯಲ್ಲಿ ಒತ್ತಡಯುತ ಸೇವೆಗೆ ಮುಕ್ತಿ ನೀಡಬೇಕು. ರಾಜ್ಯದ ಪೊಲೀಸರು ಯಾವುದರಲ್ಲೂ ಕಡಿಮೆಯಿಲ್ಲ. ಅಪರಾಧ ತಡೆ, ಪತ್ತೆ ಹಾಗೂ ತನಿಖಾ ಕಾರ್ಯದಲ್ಲಿ ಸಿಬ್ಬಂದಿಯೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ’ ಎಂದರು.

1965ರಲ್ಲಿ ಜಾರಿಗೆ: ‘ಪೊಲೀಸ್ ಧ್ವಜ ದಿನಾಚರಣೆಯು 1965ರಲ್ಲಿ ಜಾರಿಗೆ ಬಂದಿತು. ಅಂದಿನಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಪೊಲೀಸ್ ಧ್ವಜ ಮಾರಾಟದಿಂದ ಸಂಗ್ರಹವಾಗುವ ಹಣವನ್ನು ಪೊಲೀಸರ ಕ್ಷೇಮಾಭಿವೃದ್ದಿಗೆ ಬಳಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಹಿಂದಿನ ವರ್ಷ ಪೊಲೀಸ್‌ ಧ್ವಜ ಮಾರಾಟದಿಂದ ₹ 2.63 ಲಕ್ಷ ಸಂಗ್ರಹವಾಗಿತ್ತು. ಈ ಪೈಕಿ ₹ 1.41 ಲಕ್ಷವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ಜಮಾ ಮಾಡಲಾಗಿದೆ. ಅಂತ್ಯಸಂಸ್ಕಾರಕ್ಕೆ ₹ 50 ಸಾವಿರ ನೀಡಲಾಗಿದೆ. ಸಿಬ್ಬಂದಿಗೆ ಕಲ್ಯಾಣ ನಿಧಿಗೆ ಶೇ 25ರಷ್ಟು ಮತ್ತು ಕೇಂದ್ರ ಕಲ್ಯಾಣ ಖಾತೆಗೆ ಶೇ 25, ಶೇ 50ರಷ್ಟು ಹಣವನ್ನು ನಿವೃತ್ತ ಸಿಬ್ಬಂದಿಯ ಕ್ಷೇಮಾಭಿವೃದ್ಧಿ ನಿಧಿಗೆ ನೀಡಲಾಗುವುದು’ ಎಂದು ವಿವರಿಸಿದರು.

ಹೊಸ ಕಟ್ಟಡ: ‘ಗಲ್‌ಪೇಟೆಯಲ್ಲಿನ ಹಳೆಯ ಕಟ್ಟಡ ಕೆಡವಿ ನಿವೃತ್ತ ಪೊಲೀಸ್ ಕ್ಷೇಮಾಭಿವೃದ್ಧಿ ಸಂಘಕ್ಕೆ ಹೊಸ ಕಟ್ಟಡ ನಿರ್ಮಿಸಲಾಗುವುದು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯಲ್ಲಿ ಪೊಲೀಸರ ಪಾತ್ರ ನಿರ್ಣಾಯಕ. ಸಿಬ್ಬಂದಿಯು ಚುನಾವಣಾ ಸಂದರ್ಭದಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕು. ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿ ಪರವಾಗಿ ಇರದೆ ಪ್ರಾಮಾಣಿಕವಾಗಿ ಚುನಾವಣಾ ಕರ್ತವ್ಯ ನಿರ್ವಹಿಸಬೇಕು. ಆ ಮೂಲಕ ಇಲಾಖೆಗೆ ಒಳ್ಳೆಯ ಹೆಸರು ತರಬೇಕು’ ಎಂದು ಆಶಿಸಿದರು.

ಕಣ್ಣುಗಳಿದ್ದಂತೆ: ‘ಕಾನೂನು ಪಾಲನೆಯಲ್ಲಿ ಶಿಸ್ತು ಮತ್ತು ವಿಚಾರಣೆ ಪ್ರಕ್ರಿಯೆಯು ಇಲಾಖೆಯ ಎರಡು ಕಣ್ಣುಗಳಿದ್ದಂತೆ’ ಎಂದು ನಿವೃತ್ತ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಬಿ.ರಾಜೇಂದ್ರಕುಮಾರ್ ಅಭಿಪ್ರಾಯಪಟ್ಟರು.

‘ದೇಶದ ಏಕತೆ ಮತ್ತು ಗೋಪ್ಯತೆ ಕಾಪಾಡುವುದು, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿ ಸಾರ್ವಜನಿಕರು ನೆಮ್ಮದಿಯ ಜೀವನ ನಡೆಸುವಂತೆ ಮಾಡುವುದು ಸಿಬ್ಬಂದಿಯ ಧ್ಯೇಯವಾಗಬೇಕು. ಮಾನಸಿಕವಾಗಿ ನೊಂದವರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಪೊಲೀಸ್ ಠಾಣೆಗೆ ಬಂದಾಗ ಅವರೊಂದಿಗೆ ತಾಳ್ಮೆಯಿಂದ ವರ್ತಿಸಬೇಕು. ಜನಸಾಮಾನ್ಯರಿಗೆ ಕಾನೂನುಬದ್ಧವಾಗಿ ರಕ್ಷಣೆ ನೀಡಿ ಗೌರವಯುತವಾಗಿ ನಡೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

26 ಮಂದಿ ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್‌.ಜಾಹ್ನವಿ, ಡಿವೈಎಸ್‍ಪಿಗಳಾದ ಅನೂಷಾ, ತಬಾರಕ್‌ ಫಾತಿಮಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT