ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಾಲಕ್ಕೆ ಸಾಲ ಮಂಜೂರು ಮಾಡಿ :ಜಿಲ್ಲಾಧಿಕಾರಿ ಜೆ.ಮಂಜುನಾಥ್

Last Updated 24 ಡಿಸೆಂಬರ್ 2019, 16:37 IST
ಅಕ್ಷರ ಗಾತ್ರ

ಕೋಲಾರ: ‘ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಸ್ವಯಂ ಉದ್ಯೋಗ ಮಾಡುವ ಫಲಾನುಭವಿಗಳಿಗೆ ಬ್ಯಾಂಕ್‌ಗಳು ಸಕಾಲಕ್ಕೆ ಸಾಲ ಮಂಜೂರು ಮಾಡಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೂಚಿಸಿದರು.

ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಯವರ ಸ್ವಯಂ ಉದ್ಯೋಗ ಸೃಜನ ಯೋಜನೆ ಸಂಬಂಧ ಇಲ್ಲಿ ಮಂಗಳವಾರ ನಡೆದ ಬ್ಯಾಂಕ್ ಅಧಿಕಾರಿಗಳ ಕಾರ್ಯಗಾರದಲ್ಲಿ ಮಾತನಾಡಿ, ‘ಶಿಕ್ಷಣ ಪಡೆದ ಪ್ರತಿಯೊಬ್ಬರಿಗೂ ಉದ್ಯೋಗ ಸಿಗುತ್ತಿಲ್ಲ. ಶಿಕ್ಷಣ ಇದ್ದರೂ ಕೆಲವರಿಗೆ ಕೌಶಲ ತರಬೇತಿ ಕೊರತೆಯಿಂದ ಉದ್ಯೋಗ ಸಿಗುತ್ತಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಭವಿಷ್ಯದಲ್ಲಿ ಉದ್ಯೋಗ ಸಮಸ್ಯೆ ಸೃಷ್ಟಿಯಾಗುವ ಮೊದಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸ್ವಯಂ ಉದ್ಯೋಗ ಯೋಜನೆ ಬಗ್ಗೆ ನಿರುದ್ಯೋಗಿಗಳಿಗೆ ಅರಿವು ಮೂಡಿಸಬೇಕು. ಜತೆಗೆ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ನೀಡಿದರೆ ಅಲ್ಲಿ ಉದ್ಯೋಗಾವಕಾಶ ಸೃಷ್ಟಿಯಾಗಿ ಸಮಾಜದಲ್ಲಿ ಮತ್ತು ದೇಶದಲ್ಲಿ ಬದಲಾವಣೆ ತರಲು ಸಹಕಾರಿಯಾಗುತ್ತದೆ’ ಎಂದು ಸಲಹೆ ನೀಡಿದರು.

‘ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳುವವರಿಗೆ ಹಣ ಪಾವತಿಸಲು ಬ್ಯಾಂಕ್‌ಗಳು ವಿಳಂಬ ಮಾಡಬಾರದು. ಪ್ರವಾಸೋದ್ಯಮ ಇಲಾಖೆಯಿಂದ ಟ್ಯಾಕ್ಸಿ ನೀಡುವಾಗ ಬ್ಯಾಂಕ್‌ನವರು ಸಾಲ ಕೊಟ್ಟರೆ ನಿರುದ್ಯೋಗಿಗಳು ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುತ್ತದೆ. ಅನಗತ್ಯವಾಗಿ ದಾಖಲೆಪತ್ರ ಕೇಳಿ ಅಲೆಸಬಾರದು’ ಎಂದು ಸೂಚಿಸಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸಬೇಕು. ಯೋಜನೆಗಳ ಬಗ್ಗೆ ಯುವಕರಿಗೆ ಅರಿವು ಮೂಡಿಸಬೇಕು. ದೇಶದಲ್ಲಿ ಯುವಕ ಯುವತಿಯರಿಗೆ ಉದ್ಯೋಗ ನೀಡಿದರೆ ಅವರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಲ್ಲ. ಬದಲಿಗೆ ಸಮಾಜದ ಅಭಿವೃದ್ಧಿಗೆ ಕೈಜೋಡಿಸುತ್ತಾರೆ. ಈ ನಿಟ್ಟಿನಲ್ಲಿ ಎಲ್ಲಾ ಬ್ಯಾಂಕ್‌ಗಳು ಕೆಲಸ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಪ್ರೋತ್ಸಾಹ ನೀಡಿ: ‘ಕೋಲಾರ ಕೃಷಿ ಪ್ರಧಾನ ಜಿಲ್ಲೆಯಾಗಿದೆ. ಕೃಷಿ ಚಟುವಟಿಕೆಗೆ ಇಲಾಖೆ ಮತ್ತು ಬ್ಯಾಂಕ್‌ಗಳು ಹೆಚ್ಚಿನ ಪ್ರೋತ್ಸಾಹ ನೀಡಿದರೆ ದೇಶ ಮುಂದುವರಿಯಲು ಸಾಧ್ಯವಾಗುತ್ತದೆ’ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಪೂಜಾರ್ ತಿಳಿಸಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಹೊಸಮಠ್, ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT