ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ ಬೆಳೆಗಾರರು ಕಂಗಾಲು: ಬೆಲೆ ಕುಸಿತ- ಕೋಯ್ಲಿಗೆ ರೈತರ ನಿರಾಸಕ್ತಿ

Last Updated 23 ಮಾರ್ಚ್ 2022, 5:24 IST
ಅಕ್ಷರ ಗಾತ್ರ

ಬೇತಮಂಗಲ: ಒಂದೆಡೆ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಬೆಲೆ ಕುಸಿತದಿಂದ ಟೊಮೆಟೊ ಬೆಳೆದಿರುವ ಹೋಬಳಿಯ ರೈತರು ಕಂಗಾಲಾಗಿದ್ದಾರೆ. ಟೊಮೆಟೊ ಕೊಯ್ಲು ಮಾಡದೆ ತೋಟದಲ್ಲಿಯೇ ಬಿಟ್ಟಿದ್ದು ಕೊಳೆಯುತ್ತಿದೆ.

ಹೋಬಳಿಯ ಕಮ್ಮಸಂದ್ರ ಗ್ರಾಮದ ಯುವ ರೈತ ಸಂತೋಷ್ ಸುಮಾರು 3 ಎಕರೆ ಭೂಮಿಯಲ್ಲಿ ಟೊಮೆಟೊ ಬೆಳೆ ಬೆಳೆದಿದ್ದಾರೆ. ಸೂಕ್ತ ಬೆಲೆ ದೊರೆಯದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎರಡನೇ ಬಾರಿಗೆ ಕೊಳವೆಬಾವಿಯಲ್ಲಿ ಇರುವ ಅಲ್ಪಸ್ವಲ್ಪ ನೀರು ಬಳಸಿಕೊಂಡು ಟೊಮೆಟೊ ಬೆಳೆ ಬೆಳೆದಿದ್ದ ಅವರು ಈಗ ನಷ್ಟ ಅನುಭವಿಸುವಂತಾಗಿದೆ.

ತೋಟದಲ್ಲಿಸುಮಾರು 12 ಸಾವಿರ ಟೊಮೆಟೊ ಸಸಿಗಳನ್ನು ನಾಟಿ ಮಾಡಿದ್ದರು. ಬೆಳೆಗೆ ಔಷಧಿ, ಗೊಬ್ಬರ, ಕಾರ್ಮಿಕರಿಗೆ ಕೂಲಿ ಸೇರಿದಂತೆ ₹ 5 ಲಕ್ಷದವರೆಗೂ ಖರ್ಚು ಮಾಡಿದ್ದಾರೆ. ಪ್ರಸ್ತುತ ಅವರು ವ್ಯಯಿಸಿರುವ ಹಣವೂ ಕೈಸೇರುತ್ತಿಲ್ಲ.

‘ಪ್ರಸ್ತುತಮಾರುಕಟ್ಟೆಯಲ್ಲಿ 19 ಕೆ.ಜಿಯ ಒಂದು ಟೊಮೆಟೊ ಬಾಕ್ಸ್ ಬೆಲೆ ಕೇವಲ ₹ 50ರಿಂದ ₹ 70 ಇದೆ. ಹಾಗಾಗಿ, ಮಾರುಕಟ್ಟೆಗೆ ಸಾಗಾಣಿಕೆ ಮಾಡುವ ವೆಚ್ಚವೂ ಕೈಗೆ ಬರುವುದಿಲ್ಲ. ಆದ್ದರಿಂದ ಹೊಲದಲ್ಲಿಯೇ ಕೊಯ್ಲು ಮಾಡದೆ ಬಿಟ್ಟಿದ್ದೇನೆ’ ಎಂದು ತಿಳಿಸಿದರು.

ಎರಡು, ಮೂರು ವರ್ಷದಿಂದ ಬೇಸಿಗೆ ಸಮಯದಲ್ಲಿ ಟೊಮೆಟೊಗೆ ಉತ್ತಮ ಬೆಲೆ ದೊರೆಯುತ್ತಿತ್ತು. ಆದ್ದರಿಂದ ಸೂಕ್ತ ಬೆಲೆ ದೊರೆಯುವ ದೃಷ್ಟಿಯಿಂದ ಈ ಬಾರಿ ರೈತರು ಉತ್ತಮ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದರು. ಹೆಚ್ಚಿನ ಪ್ರದೇಶದಲ್ಲಿ ಟೊಮೆಟೊ ಬೆಳೆದಿದ್ದರು. ದರ ಕುಸಿತ ಅವರ ಬದುಕಿಗೆ ಬರೆ ಎಳೆದಿದೆ.

‘ರೈತರು ಕಷ್ಟಪಟ್ಟು ಬೆಳೆಯುವ ತರಕಾರಿಗಳಿಗೆ ಸೂಕ್ತ ಬೆಲೆ ದೊರೆಯುತ್ತಿಲ್ಲ. ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲದ ಕಾರಣ ಟೊಮೆಟೊ ಕೊಯ್ಲು ಮಾಡಿದರೆ ಮಾರುಕಟ್ಟೆಗೆ ಸಾಗಾಣಿಕ ಮಾಡುವ ಖರ್ಚು ಸಹ ಸಿಗುವುದಿಲ್ಲ. ಈ ಬಾರಿ ನಷ್ಟ ಅನುಭವಿಸಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕು’ ಎಂಬುದು ರೈತ ಸಂತೋಷ್‌ ಅವರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT