ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿತಾಣ ಅಭಿವೃದ್ಧಿ: ಕ್ರಿಯಾಯೋಜನೆ ರೂಪಿಸಿ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವ ಸಿ.ಟಿ.ರವಿ ಸೂಚನೆ
Last Updated 4 ಅಕ್ಟೋಬರ್ 2019, 13:45 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಿ’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿ ಶುಕ್ರವಾರ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಪ್ರವಾಸಿತಾಣಗಳು ಅಭಿವೃದ್ಧಿಯಾದರೆ ಸ್ಥಳೀಯವಾಗಿ ಆರ್ಥಿಕ ಚಟುವಟಿಕೆ ಹೆಚ್ಚುತ್ತವೆ. ಇದರಿಂದ ಸ್ಥಳೀಯ ಅಭಿವೃದ್ಧಿ ಕಾಣಬಹುದು’ ಎಂದರು.

‘ಪ್ರವಾಸೋದ್ಯಮ ಇಲಾಖೆಯಲ್ಲಿ ಶೇ 82ರಷ್ಟು ಹುದ್ದೆ ಖಾಲಿಯಿವೆ. ಜಿಲ್ಲೆಯ ಯಾತ್ರಿ ನಿವಾಸಗಳ ನಿರ್ವಹಣೆಗೆ ದೇವಾಲಯ ಸಮಿತಿ, ಗ್ರಾಮೀಣ ಪ್ರವಾಸೋದ್ಯಮ ಸಮಿತಿ ಅಥವಾ ಗ್ರಾಮೀಣ ಅರಣ್ಯ ಸಮಿತಿಗಳಿಗೆ ಜವಾಬ್ದಾರಿ ನೀಡಬೇಕು. ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಯಾತ್ರಿ ನಿವಾಸಗಳು, ಫುಡ್‌ ಕೋರ್ಟ್‌ ಹಾಗೂ ಉದ್ಯಾನಗಳನ್ನು ನಿರ್ಮಿಸಬೇಕು’ ಎಂದು ತಿಳಿಸಿದರು.

‘ಬೆಂಗಳೂರಿಗೆ ಹತ್ತಿರವಿರುವ ಕೋಲಾರ ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ವ್ಯವಸ್ಥೆ ಮಾಡಬೇಕು. ಪ್ರವಾಸಿ ಮಾಹಿತಿ ಕೇಂದ್ರಗಳನ್ನು ಆರಂಭಿಸಬೇಕು. ಪ್ರವಾಸಿ ತಾಣಗಳಲ್ಲಿ ಬಾಕಿಯಿರುವ ಕಾಮಗಾರಿ ಪೂರ್ಣಗೊಳಿಸಬೇಕು. ಜಿಲ್ಲೆಯ ಬೇಡಿಕೆ ಆಧರಿಸಿ ಟ್ಯಾಕ್ಸಿ ಮತ್ತು ಸಾಲ ಸೌಲಭ್ಯ ಕಲ್ಪಿಸಬೇಕು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹಾಗೂ ಸ್ಥಳೀಯ ಪರಿಸರಕ್ಕೆ ಧಕ್ಕೆಯಾಗದಂತೆ ಪ್ರವಾಸಿತಾಣಗಳನ್ನು ಅಭಿವೃದ್ಧಿಪಡಿಸಬೇಕು’ ಎಂದು ಹೇಳಿದರು.

‘150ನೇ ಗಾಂಧಿ ಜಯಂತಿ ಸಂಭ್ರಮದಲ್ಲಿರುವ ಕಾರಣ ಗಾಂಧೀಜಿ ಭೇಟಿ ನೀಡಿದ್ದ ಸ್ಥಳಗಳಿಗೆ ಶಾಲಾ ಮಕ್ಕಳನ್ನು ಕರ್ನಾಟಕ ದರ್ಶನದಲ್ಲಿ ಕರೆದೊಯ್ದು ಅವರ ಜೀವನಚರಿತ್ರೆ ತಿಳಿಸಿಕೊಡಬೇಕು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 4-5 ಮಕ್ಕಳನ್ನು ಆಯ್ಕೆ ಮಾಡಿ ದೇವಾಲಯ, ಐತಿಹಾಸಿಕ ಹಿನ್ನೆಲೆ ಸೇರಿದಂತೆ ಗ್ರಾಮದ ಸಮಗ್ರ ಅಧ್ಯಯನಕ್ಕೆ ಅವಕಾಶ ಕಲ್ಪಸಿ’ ಎಂದು ಸೂಚನೆ ನೀಡಿದರು.

ನರಕ ತೋರಿಸುತ್ತಾರೆ: ‘ಪ್ರವಾಸಿ ಟ್ಯಾಕ್ಸಿ ಖರೀದಿಗೆ ಇಲಾಖೆಯಿಂದ ₹ 3 ಲಕ್ಷ ಸಹಾಯಧನ ನೀಡಲಾಗುತ್ತದೆ. ಆದರೆ, ಬಡ ಫಲಾನುಭವಿಗಳು ಸಹಾಯಧನ ಪಡೆಯಲು ಆಸ್ತಿ ಅಡಮಾನ ಇಡುವಂತೆ ಬ್ಯಾಂಕ್ ಅಧಿಕಾರಿಗಳು ಒತ್ತಡ ಹಾಕಿ ನರಕ ತೋರಿಸುತ್ತಾರೆ’ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್‌ ಕಿಡಿಕಾರಿದರು.

‘ಬಡವರ ಬಳಿ ಅಲ್ಪಸ್ವಲ್ಪ ಆಸ್ತಿ ಇರುತ್ತದೆ. ಬ್ಯಾಂಕ್‌ ಅಧಿಕಾರಿಗಳು ಅದನ್ನೂ ಅಡಮಾನ ಇಟ್ಟುಕೊಂಡು ಹರಾಜು ಹಾಕುತ್ತಾರೆ. ಸಾಲದ ಕಂತು ಕಟ್ಟಲು ತಡವಾದರೆ ಟ್ಯಾಂಕ್‌ ಜಫ್ತಿ ಮಾಡುತ್ತಾರೆ. ನೀರವ್ ಮೋದಿಯಂತಹವರು ಸಾವಿರಾರು ಕೋಟಿ ವಂಚಿಸಿದರೂ ಕೇಳುವುದಿಲ್ಲ. ಅಧಿಕಾರಿಗಳದು ಅತ್ಯಂತ ಕ್ರೌರ್ಯದ ಕೆಲಸ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೋವು ಕಾಡುತ್ತಿದೆ: ‘ಅರಣ್ಯ ಇಲಾಖೆ ಅಧಿಕಾರಿಗಳು ನೀಲಗಿರಿ ಹಂಗಿನಲ್ಲಿ ಬದುಕುತ್ತಿದ್ದಾರೆ. ನೀಲಗಿರಿ ಬೆಳೆಸುವ ಸಂದರ್ಭದಲ್ಲಿ ಇಲ್ಲದ ನಿರ್ಬಂಧ ತೆರವುಗೊಳಿಸುವಾಗ ಬಂದೊದಗಿದೆ. ಅಧಿಕಾರಿಗಳ ದರ್ಪದಿಂದ ನಾವು ಜನಸಾಮಾನ್ಯರಿಗೆ ನರಕ ಬಿಟ್ಟು ಹೋದಂತಾಗುತ್ತಿದೆ ಎಂಬ ನೋವು ಕಾಡುತ್ತಿದೆ’ ಎಂದು ವಿಷಾದಿಸಿದರು.

‘ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯೇ ಕಡಿಮೆಯಿದೆ. ಹೀಗಾಗಿ ಕರ್ನಾಟಕ ದರ್ಶನದಲ್ಲಿ ಪರಿಶಿಷ್ಟ, ಸಾಮಾನ್ಯ ಎಂದು ಪರಿಗಣಿಸುವುದು ಸರಿಯಲ್ಲ. ಆಟವಾಡುವ ಮಕ್ಕಳ ಮುಗ್ಧ ಮನಸ್ಸಲ್ಲಿ ಜಾತಿ ವಿಷಬೀಜ ಬಿತ್ತುವ ಬದಲು ಸಮಾನ ಅವಕಾಶ ಕಲ್ಪಿಸಿ’ ಎಂದು ಸಲಹೆ ನೀಡಿದರು.

ರಸ್ತೆಗೆ ತೊಂದರೆ: ‘ಅಂತರಗಂಗೆ ಬೆಟ್ಟಕ್ಕೆ ಹೊಸ ರಸ್ತೆ ಮಾಡಲೆಂದು ₹ 50 ಲಕ್ಷ ಮಂಜೂರು ಮಾಡಿಸಿದ್ದರೂ ಅರಣ್ಯ ಇಲಾಖೆಯವರು ನೀಲಗಿರಿ ತೆರವು ಮಾಡದೆ ತೊಂದರೆ ನೀಡುತ್ತಿದ್ದಾರೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ನೀಲಗಿರಿ ತೆರವುಗೊಳಿಸಿ ರಸ್ತೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿ’ ಎಂದು ಅಧಿಕಾರಿಗಳಿಗೆ ಆದೇಶಿಸಿದರು.

‘ಜಿಲ್ಲೆಯಲ್ಲಿ 9 ಪ್ರಮುಖ ಪ್ರವಾಸಿ ತಾಣಗಳಿವೆ. ಕೆಜಿಎಫ್‌ನಲ್ಲಿ ಚಿನ್ನದ ಗಣಿಗೆ ಸೇರಿದ 12 ಸಾವಿರ ಎಕರೆ ಭೂಮಿಯಿದ್ದು, ಅಲ್ಲಿ 4 ಸಾವಿರ ಎಕರೆ ಬಳಸಿಕೊಂಡು ಕೈಗಾರಿಕಾ ವಲಯ ಆರಂಭಿಸಲು ಚಿಂತಿಸಲಾಗಿದೆ. ಕೋಲಾರ ನಗರದ ಸುತ್ತ 5 ಕಿ.ಮೀ ವ್ಯಾಪ್ತಿಯಲ್ಲಿ ಪ್ರವಾಸಿತಾಣಗಳನ್ನು ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ವಿವರಿಸಿದರು.

‘ಪ್ರವಾಸಿತಾಣಗಳನ್ನು ಅಭಿವೃದ್ಧಿಪಡಿಸಿ ಆದಾಯ ಬರುವಂತೆ ಮಾಡುವುದರ ಜತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶ ಸಿಗಲು ಹೊಸ ಯೋಜನೆ ರೂಪಿಸಿದರೆ ಅನುಕೂಲ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ವಿ.ದರ್ಶನ್ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ಶಾಸಕ ಕೆ.ವೈ.ನಂಜೇಗೌಡ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT