ಗುರುವಾರ , ಆಗಸ್ಟ್ 22, 2019
27 °C
ವರಮಹಾಲಕ್ಷ್ಮಿ ವ್ರತ ಆಚರಣೆಗೆ ಸಿದ್ಧತೆ

ವರಮಹಾಲಕ್ಷ್ಮಿ ಹಬ್ಬ: ಮಾರುಕಟ್ಟೆಯಲ್ಲಿ ವಹಿವಾಟು ಜೋರು

Published:
Updated:
Prajavani

 ಕೋಲಾರ: ಶ್ರಾವಣ ಮಾಸದ ಮೊದಲ ಹಬ್ಬ ವರಮಹಾಲಕ್ಷ್ಮಿ ವ್ರತದ ಆಚರಣೆಗೆ ಪೂಜಾ ಸಾಮಗ್ರಿ ಖರೀದಿಸಲು ಗ್ರಾಹಕರು ನಗರದ ಮಾರುಕಟ್ಟೆಗಳಿಗೆ ಗುರುವಾರ ಮುಗಿಬಿದ್ದರು. ವಸ್ತುಗಳ ಬೆಲೆ ಏರಿಕೆ ನಡುವೆಯೂ ಮಾರುಕಟ್ಟೆಯಲ್ಲಿ ವಹಿವಾಟು ಜೋರಾಗಿತ್ತು.

ಎಂ.ಜಿ.ರಸ್ತೆ, ಹಳೆ ಬಸ್‌ ನಿಲ್ದಾಣ, ದೊಡ್ಡಪೇಟೆ, ಹೊಸ ಬಸ್‌ ನಿಲ್ದಾಣ, ವಾಸವಿ ದೇವಸ್ಥಾನ ರಸ್ತೆ, ಕಾಳಮ್ಮ ಗುಡಿ ರಸ್ತೆ, ಅಮ್ಮವಾರಿಪೇಟೆ ಸೇರಿದಂತೆ ಪ್ರಮುಖ ವಾಣಿಜ್ಯ ಸ್ಥಳಗಳಲ್ಲಿ ಜನಜಂಗುಳಿಯೇ ಕಂಡುಬಂತು. ವರ್ತಕರ ಮೊಗದಲ್ಲಿ ಸಂತಸ ಮನೆ ಮಾಡಿತ್ತು.

ಬಟ್ಟೆ, ಹಣ್ಣು, ತರಕಾರಿ ಹಾಗೂ ದಿನಸಿ ಅಂಗಡಿಗಳು ಗ್ರಾಹಕರಿಂದ ತುಂಬಿ ಹೋಗಿದ್ದವು. ಪ್ರಮುಖ ರಸ್ತೆಗಳ ಬದಿಯಲ್ಲಿ ಹಾಗೂ ಪಾದಚಾರಿ ಮಾರ್ಗದಲ್ಲಿ ವರ್ತಕರು ಹೂವು, ಹಣ್ಣು, ಬಳೆ, ಬಾಳೆ ದಿಂಡು, ತೆಂಗಿನ ಕಾಯಿ, ಮಾವಿನ ಸೊಪ್ಪು ಮಾರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಟಿ.ಚನ್ನಯ್ಯ ರಂಗಮಂದಿರ ಮುಂಭಾಗದ ರಸ್ತೆಯ ಅಕ್ಕಪಕ್ಕದ ಮಳಿಗೆಗಳು ಗ್ರಾಹಕರಿಂದ ಗಿಜಿಗುಡುತ್ತಿದ್ದವು. ಗ್ರಾಹಕರು ತುಂತರು ಮಳೆಯಲ್ಲೂ ಖರೀದಿಯಲ್ಲಿ ತೊಡಗಿದ್ದರು.

ಹಬ್ಬದ ಹಿನ್ನೆಲೆಯಲ್ಲಿ ವಸ್ತುಗಳ ಬೆಲೆ ಗಗನಕ್ಕೇರಿದ್ದವು. ಏಲಕ್ಕಿ ಬಾಳೆ, ಸೀತಾಫಲ, ಸೀಬೆ ಹಣ್ಣು ಹಾಗೂ ಸಪೋಟ ಕೆ.ಜಿಗೆ ₹ 60, ಪಚ್ಚ ಬಾಳೆ ₹ 40, ಕಿತ್ತಳೆ ₹ 100, ಸೇಬು 150 ಹಾಗೂ ದಾಳಿಂಬೆ ₹ 180, ಮೋಸಂಬಿ ₹ 100, ಕಪ್ಪು ದ್ರಾಕ್ಷಿ ₹ 100, ಬಿಳಿ ದ್ರಾಕ್ಷಿ ₹ 150 ಇತ್ತು. ತೆಂಗಿನಕಾಯಿ ಒಂದಕ್ಕೆ ₹ 30, ಅನಾನ್ ₹ 60 ಇತ್ತು. ಹಬ್ಬಕ್ಕೆ ಮುಖ್ಯವಾಗಿ ಬೇಕಾದ ಮಾವು ಸೊಪ್ಪಿನ ಬೆಲೆ ಒಂದು ಕಟ್ಟಿಗೆ ₹ 20, ಬಾಳೆ ದಿಂಡು ಜೋಡಿಗೆ ₹ 30ರಿಂದ ₹ 50 ಇತ್ತು. ಮತ್ತೊಂದೆಡೆ ತರಕಾರಿ ಬೆಲೆಗಳು ಗಗನಮುಖಿಯಾಗಿದ್ದವು.

ಮಲ್ಲಿಗೆ ಬಿಡಿ ಹೂವು ಕೆ.ಜಿಗೆ ₹ 600, ಕನಕಾಂಬರ ₹ 1,500, ಗುಲಾಬಿ ₹ 200, ಸೇವಂತಿಗೆ ₹ 300, ಚೆಂಡು ಹೂವು ₹ 60, ಬಟನ್ಸ್‌ ಹೂವು ₹ 150 ಇತ್ತು. ಹೂವು, ಹಣ್ಣಿನ ಜತೆಗೆ ಸಕ್ಕರೆ, ಬೆಲ್ಲ, ಮೈದಾ, ಕಡಲೆ ಬೇಳೆಯಂತಹ ದಿನಸಿ ಪದಾರ್ಥಗಳ ಬೆಲೆಗಳು ಏರಿಕೆಯಾಗಿದ್ದವು. ಮಾರುಕಟ್ಟೆಗೆ ಬಂದಿದ್ದ ಗ್ರಾಹಕರಿಗೆ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟಿತು.

ವಾಹನ ದಟ್ಟಣೆ: ಸಂಜೆಯಾದಂತೆ ಮಾರುಕಟ್ಟೆಗೆ ಬರುವ ಗ್ರಾಹಕರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಇದರಿಂದ ವಾಣಿಜ್ಯ ಸ್ಥಳಗಳಲ್ಲಿ ವಾಹನ ದಟ್ಟಣೆ ಉಂಟಾಯಿತು. ಚನ್ನಯ್ಯ ರಂಗಮಂದಿರ ಮುಂಭಾಗದ ರಸ್ತೆ, ಎಂ.ಜಿ ರಸ್ತೆಯಲ್ಲಿ ವಾಹನಗಳು ಕಿಲೋ ಮೀಟರ್‌ಗಟ್ಟಲೇ ಸಾಲುಗಟ್ಟಿ ನಿಂತಿದ್ದವು.

ಮುನ್ನೆಚ್ಚರಿಕೆ ಕ್ರಮವಾಗಿ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ಹಾಗೂ ಭಾರಿ ವಾಹನಗಳ ಓಡಾಟ ನಿರ್ಬಂಧಿಸಲಾಗಿತ್ತು. ವಾಹನ ಸಂಚಾರ ನಿಯಂತ್ರಸಲು ಪೊಲೀಸರು ಹಾಗೂ ಗೃಹರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

Post Comments (+)