ಜಿಲ್ಲಾಧಿಕಾರಿ ನಗರ ಪ್ರದಕ್ಷಿಣೆ: ಸಮಸ್ಯೆ ದಿಗ್ದರ್ಶನ

7
ರಸ್ತೆ– ಒಳಚರಂಡಿ ಸಮಸ್ಯೆ ಬಗ್ಗೆ ನಗರವಾಸಿಗಳ ಅಳಲು: ಸಮಸ್ಯೆ ಬಗೆಹರಿಸುವ ಭರವಸೆ

ಜಿಲ್ಲಾಧಿಕಾರಿ ನಗರ ಪ್ರದಕ್ಷಿಣೆ: ಸಮಸ್ಯೆ ದಿಗ್ದರ್ಶನ

Published:
Updated:
Deccan Herald

ಕೋಲಾರ: ನಗರದಲ್ಲಿ ಮಂಗಳವಾರ ಸಂಜೆ ಬೈಕ್‌ ಏರಿ ನಗರ ಪ್ರದಕ್ಷಿಣೆ ನಡೆಸಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರಿಗೆ ಮೂಲಸೌಕರ್ಯ ಸಮಸ್ಯೆಯ ದಿಗ್ದರ್ಶನವಾಯಿತು.

ಗುಂಡಿಮಯ ರಸ್ತೆಗಳು, ಚರಂಡಿಗಳಿಂದ ಹೊರಗೆ ಹರಿಯುತ್ತಿದ್ದ ಕೊಳಚೆ ನೀರು ಹಾಗೂ ರಸ್ತೆ ಬದಿಯ ಕಸದ ರಾಶಿ ಕಂಡು ಅಸಮಾಧಾನಗೊಂಡ ಜಿಲ್ಲಾಧಿಕಾರಿಯು ನಗರಸಭೆ, ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ರಹಮತ್‌ನಗರ, ಕೋಡಿಕಣ್ಣೂರು ಕರೆ, ಬಂಬೂ ಬಜಾರ್ ರಸ್ತೆ, ಹೊಸ ಬಸ್ ನಿಲ್ದಾಣ, ಕ್ಲಾಕ್‌ ಟವರ್‌, ವಿನಾಯಕನಗರ, ಡೂಂಲೈಟ್ ವೃತ್ತ, ಕೇಶವನಗರ, ಖಾದ್ರಿಪುರ ರೈಲ್ವೆ ಕೆಳಸೇತುವೆ, ಎಂ.ಜಿ ರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಂಚರಿಸಿದ ಜಿಲ್ಲಾಧಿಕಾರಿ ಸಾರ್ವಜನಿಕರ ಸಮಸ್ಯೆ ಆಲಿಸಿ ಪರಿಹರಿಸುವ ಭರವಸೆ ನೀಡಿದರು.

‘ಕೇಶವನಗರದಲ್ಲಿ ಹಾಳಾಗಿರುವ ಯುಜಿಡಿ ದುರಸ್ತಿಗೆ ಒತ್ತಾಯಿಸಿ ನಗರಸಭೆ ಎದುರು ಹಲವು ಬಾರಿ ಹೋರಾಟ ನಡೆಸಿದ್ದೇವೆ. ನಗರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳು ಮೂರ್ನಾಲ್ಕು ಬಾರಿ ಸ್ಥಳ ಪರಿಶೀಲನೆ ಮಾಡಿದ್ದರೂ ಯುಜಿಡಿ ದುರಸ್ತಿಯಾಗಿಲ್ಲ’ ಎಂದು ಸ್ಥಳೀಯರು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಯುಜಿಡಿ ಸಮಸ್ಯೆ ತುಂಬಾ ಗಂಭೀರವಾಗಿದೆ. ಸ್ಥಳೀಯರು ಸಮಸ್ಯೆ ನೀವೇ ನೋಡುದ್ದೀರಿ. ಹಾಳಾಗಿರುವ ಯುಜಿಡಿ ಮಾರ್ಗವನ್ನು ಶೀಘ್ರವೇ ದುರಸ್ತಿ ಮಾಡಿಸಿ’ ಎಂದು ನಗರಸಭೆ ಆಯುಕ್ತ ಸತ್ಯನಾರಾಯಣ್‌ ಅವರಿಗೆ ಆದೇಶಿಸಿದರು.

ರಸ್ತೆ ಅಗೆಯಲಾಗಿದೆ: ‘ಯುಜಿಡಿ ಕಾಮಗಾರಿಗಾಗಿ ಬಡಾವಣೆಯ ಬಹುಪಾಲು ರಸ್ತೆಗಳನ್ನು ಅಗೆಯಲಾಗಿದೆ. ಕಾಮಗಾರಿ ಮುಗಿದು ನಾಲ್ಕೈದು ತಿಂಗಳಾದರೂ ರಸ್ತೆ ದುರಸ್ತಿ ಮಾಡಿಲ್ಲ. ಅಧಿಕಾರಿಗಳಿಗೆ ನಮ್ಮ ಬಡಾವಣೆಗಳು ಲೆಕ್ಕಕ್ಕೆ ಇಲ್ಲದಾಗಿದೆ. ಹಿಂದಿನ ವರ್ಷ ರಂಜಾನ್ ಹಬ್ಬದ ವೇಳೆ ಕಸ ತೆರವುಗೊಳಿಸಿ ಹೋಗಿದ್ದ ಅಧಿಕಾರಿಗಳು ಇತ್ತೀಚೆಗೆ ಬಕ್ರೀದ್‌ ಹಬ್ಬದ ಸಂದರ್ಭದಲ್ಲಿ ಬಡಾವಣೆಗೆ ಬಂದಿದ್ದಾರೆ’ ಎಂದು ರಹಮತ್‌ನಗರ ನಿವಾಸಿಗಳು ಆರೋಪಿಸಿದರು.

ರಹಮತ್‌ನಗರ ರಾಜಕಾಲುವೆಯಲ್ಲಿ ಕಸ ತುಂಬಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ, ‘ನಗರಸಭೆ ಅಧಿಕಾರಿಗಳು ಏನು ಕೆಲಸ ಮಾಡುತ್ತಿದ್ದೀರಿ? ಮಾಂಸದ ತ್ಯಾಜ್ಯವನ್ನು ಅಂಗಡಿಯವರು ಮನಬಂದಂತೆ ಎಲ್ಲೆಂದರಲ್ಲಿ ಎಸೆದಿದ್ದಾರೆ. ಇದನ್ನು ನೀವು ಗಮನಿಸುವುದಿಲ್ಲವೇ? ಆರೋಗ್ಯ ನಿರೀಕ್ಷಕರನ್ನು ಕೂಡಲೇ ಸ್ಥಳಕ್ಕೆ ಕರೆಸಿ ಕಸ ವಿಲೇವಾರಿ ಮಾಡಿಸಿ’ ಎಂದು ಎಚ್ಚರಿಕೆ ನೀಡಿದರು.

‘ಯುಜಿಡಿ ಪೈಪ್‌ ಹಾಳಾಗಿ ಕೊಳಚೆ ನೀರು, ಮಲಮೂತ್ರ ರಸ್ತೆಗೆ ಹರಿಯುತ್ತಿದೆ. ಮಳೆ ಬಂದರೆ ರಸ್ತೆಗಳು ಕೆಸರು ಗದ್ದೆಯಂತಾಗುತ್ತವೆ. ಬಡಾವಣೆ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಸ್ಥಳೀಯರು ಅಳಲು ತೋಡಿಕೊಂಡರು.

ಅಧಿಕಾರಿಗಳಿಗೆ ತರಾಟೆ: ಕೋಡಿಕಣ್ಣೂರು ಕೆರೆ ಅಂಗಳ ಮತ್ತು ರಸ್ತೆಯ ಅಕ್ಕಪಕ್ಕ ಕಟ್ಟಡ ತ್ಯಾಜ್ಯ, ಮಾಂಸದ ಅಂಗಡಿಗಳ ತ್ಯಾಜ್ಯ ಸುರಿದಿರುವನ್ನು ಕಂಡು ಕೆಂಡಾಮಂಡಲರಾದ ಜಿಲ್ಲಾಧಿಕಾರಿ, ‘ಕೆರೆಯು ಕಸದ ತೊಟ್ಟಿಯಂತಾಗಿದೆ. ಕಸದ ರಾಶಿಯಿಂದ ಕೆರೆಯ ಸ್ವರೂಪವೇ ಬದಲಾಗಿದೆ. ಇಲ್ಲಿ ಕಸ ವಿಲೇವಾರಿ ಮಾಡುತ್ತಿರುವವರು ಯಾರು?’ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಮಾಂಸದಂಗಡಿ ಕೆಲಸಗಾರರು ರಾತ್ರಿ ವೇಳೆ ತ್ಯಾಜ್ಯ ತಂದು ಕೆರೆಗೆ ಸುರಿಯುತ್ತಿದ್ದಾರೆ. ಇದರಿಂದ ನಾಯಿಗಳ ಹಾವಳಿ ಹೆಚ್ಚಿದೆ. ತ್ಯಾಜ್ಯ ಸ್ಥಳದಲ್ಲೇ ಕೊಳೆತು ದುರ್ನಾತ ಬೀರುತ್ತಿದ್ದು, ಸೊಳ್ಳೆ ಹಾಗೂ ನೊಣಗಳ ಕಾಟ ಶುರುವಾಗಿದೆ. ಸಾಂಕ್ರಾಮಿಕ ರೋಗ ಭೀತಿ ಎದುರಾಗಿದ್ದು, ಅಧಿಕಾರಿಗಳು ತ್ಯಾಜ್ಯ ಸುರಿಯುವವರ ವಿರುದ್ಧ ಕ್ರಮ ಜರುಗಿಸುತ್ತಿಲ್ಲ’ ಎಂದು ನೀರಾವರಿ ಹೋರಾಟ ಸಮಿತಿ ಸಂಚಾಲಕ ವೆಂಕಟೇಶ್‌ ಹೇಳಿದರು.

‘ನಗರದಲ್ಲಿ ಕೆಡವಲಾಗುವ ಹಳೆ ಮನೆ, ಕಟ್ಟಡಗಳ ತ್ಯಾಜ್ಯವನ್ನು ಕೆರೆ ಬದಿಯಲ್ಲಿ ಸುರಿಯಲಾಗುತ್ತಿದೆ. ಇದರಿಂದ ದೂಳಿನ ಸಮಸ್ಯೆ ಎದುರಾಗಿದೆ. ಸುತ್ತಮುತ್ತ ಸಿ.ಸಿ ಕ್ಯಾಮೆರಾ ಅಳವಡಿಸಿ ಕೆರೆ ಸಂರಕ್ಷಿಸಿ’ ಎಂದು ಮನವಿ ಮಾಡಿದರು.

ಅನುದಾನ ಸಮಸ್ಯೆ‌

 ‘ಅಮೃತ್‌ಸಿಟಿ, ನಗರೋತ್ಥಾನ- 3ರ ಅಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕೆಲ ರಸ್ತೆಗಳು ಲೋಕೋಪಯೋಗಿ ಮತ್ತು ನಗರಸಭೆ ವ್ಯಾಪ್ತಿಗೆ ಒಳಪಡುತ್ತವೆ. ಸದ್ಯಕ್ಕೆ ಅನುದಾನದ ಸಮಸ್ಯೆಯಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ಯಾವುದಾದರೂ ಅನುದಾನದಲ್ಲಿ ರಸ್ತೆಗಳ ಡಾಂಬರೀಕರಣ ಮಾಡುತ್ತೇವೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

‘ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ನಗರಸಭೆ ಅಧ್ಯಕ್ಷರು, ಆಯುಕ್ತರು, ಲೋಕೋಪಯೋಗಿ, ನೀರಾವರಿ ಇಲಾಖೆ ಅಧಿಕಾರಿಗಳ ಜತೆ ನಗರ ಪ್ರದಕ್ಷಿಣೆ ನಡೆಸುತ್ತಿದ್ದು, ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸೆಪಟ್‌ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !