ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಕ್ರೇನ್ ತಾಯ್ನಡಿನಂತೆ: ಬೇಸರವಿಲ್ಲ’

ಸುರಕ್ಷಿತವಾಗಿ ಹಿಂದಿರುಗಿದ ಎಂಬಿಬಿಎಸ್‌ ವಿದ್ಯಾರ್ಥಿ ಜೀವನ್‌ ಹೇಳಿಕೆ
Last Updated 8 ಮಾರ್ಚ್ 2022, 15:04 IST
ಅಕ್ಷರ ಗಾತ್ರ

ಕೋಲಾರ: ‘ಉಕ್ರೇನ್‌ನ ಪರಿಸ್ಥಿತಿ ನೋಡಿದರೆ ನೋವಾಗುತ್ತಿದೆ. ಉಕ್ರೇನ್ ಮೇಲೆ ನನಗೆ ಖಂಡಿತ ಬೇಸರವಿಲ್ಲ. ಅದು ನನಗೊಂದು ಮತ್ತೊಂದು ತಾಯ್ನಡಿನಂತೆ ಇತ್ತು. ಅಲ್ಲಿ ನನಗೆ ತುಂಬಾ ನೆನಪಿನ ಕ್ಷಣಗಳಿವೆ’ ಎಂದು ಉಕ್ರೇನ್‌ನಿಂದ ಮಂಗಳವಾರ ನಗರಕ್ಕೆ ಹಿಂದಿರುಗಿದ ವಿದ್ಯಾರ್ಥಿ ಜೀವನ್‌ ನೆನಪಿನ ಬುತ್ತಿ ಬಿಚ್ಚಿಟ್ಟರು.

‘ಯುದ್ಧ ಕೊನೆಗೊಂಡ ನಂತರ ಉಕ್ರೇನ್‌ ಮತ್ತೆ ಮೊದಲಿನಂತಾಗುತ್ತದೆ. ನಾನು ಮತ್ತೆ ಉಕ್ರೇನ್‌ಗೆ ಹೋಗಿ ಶಿಕ್ಷಣ ಮುಂದುವರಿಸುತ್ತೇನೆ. ಉಕ್ರೇನ್‍ನವರಿಗೆ ಭಾರತದ ಮೇಲೆ ತುಂಬಾ ಗೌರವವಿದೆ. ಯುದ್ಧದ ಸಂದರ್ಭದಲ್ಲೂ ಅಷ್ಟೇ, ಯುದ್ಧಕೂ ಮೊದಲೂ ಅಷ್ಟೇ. ಉಕ್ರೇನ್‌ನಲ್ಲಿ ತುಂಬಾ ಕಷ್ಟದ ಪರಿಸ್ಥಿತಿಯಲ್ಲೂ ನಮ್ಮ ದೇಶದ ಧ್ವಜ ನಮ್ಮನ್ನು ಕಾಪಾಡಿದೆ’ ಎಂದು ಹೇಳಿದರು.

‘ಯುದ್ಧದ ಸನ್ನಿವೇಶ ನೆನೆದರೆ ಈಗಲೂ ಭಯವಾಗುತ್ತದೆ. ಮತ್ತೆ ಜೀವಂತವಾಗಿ ಭಾರತಕ್ಕೆ ಹೋಗುತ್ತೇನೆ ಎಂಬ ನಂಬಿಕೆಯೇ ಇರಲಿಲ್ಲ. ಯಾವುದೇ ಅಪಾಯವಿಲ್ಲದೆ ತಾಯ್ನಾಡಿಗೆ ಬಂದಿರುವುದಕ್ಕೆ ತುಂಬಾ ಸಂತೋಷವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ನಮಗೆ ಸಾಕಷ್ಟು ಸಹಾಯ ಮಾಡಿದೆ’ ಎಂದು ಸ್ಮರಿಸಿದರು.

ನಗರದ ಕೀಲುಕೋಟೆ ಬಡಾವಣೆಯ ನಾಗರಾಜ್ ಮತ್ತು ಕಲಾವತಿ ದಂಪತಿ ಪುತ್ರ ಜೀವನ್ ಅವರು ಉಕ್ರೇನ್‍ನ ಹಾರ್ಕಿವ್‌ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ 2ನೇ ವರ್ಷದ ಎಂಬಿಬಿಎಸ್‌ ಓದುತ್ತಿದ್ದರು.

ಮತ್ತೆ ಕಳುಹಿಸುವುದಿಲ್ಲ: ‘ಮಗನನ್ನು ಭವಿಷ್ಯದಲ್ಲಿ ಯಾವುದೇ ಕಾರಣಕ್ಕೂ ಉಕ್ರೇನ್‌ಗೆ ಕಳುಹಿಸುವುದಿಲ್ಲ. ರಷ್ಯಾ ಮತ್ತು ಉಕ್ರೇನ್‌ ನಡುವೆ ಯುದ್ಧ ಆರಂಭವಾದ ದಿನದಿಂದ ಆಹಾರ, ನಿದ್ದೆ ಬಿಟ್ಟು ಕಣ್ಣೀರುಡುತ್ತಲೇ ಮಗನಿಗಾಗಿ ಕಾದಿದ್ದೆವು. ಅಂತೂ ಸರ್ಕಾರದ ನೆರವಿನಿಂದ ಮಗ ಸುರಕ್ಷಿತವಾಗಿ ಮನೆಗೆ ಬಂದಿದ್ದಾನೆ’ ಎಂದು ಜೀವನ್‌ರ ತಾಯಿ ಕಲಾವತಿ ನಿಟ್ಟುಸಿರು ಬಿಟ್ಟರು.

‘ನಮಗೆ ಸಾಕಾಗಿದೆ, ಮಗ ಕಣ್ಣ ಮುಂದೆ ಇರಲಿ. ಉಕ್ರೇನ್‌ನಿಂದ ಮಗ ಸುರಕ್ಷಿತವಾಗಿ ವಾಪಸ್‌ ಬರಲಿ ಎಂದು ಪೂಜಿಸದ ದೇವರಿಲ್ಲ. ಕೊನೆಗೂ ದೇವರು ಮಗನನ್ನು ಕಾಪಾಡಿದ್ದಾನೆ. ಮಗನಿಗೆ ರಾಜ್ಯದಲ್ಲೇ ಶಿಕ್ಷಣ ಮುಂದುವರಿಸಲು ಸರ್ಕಾರ ಅನುಕೂಲ ಕಲ್ಪಿಸಿ ಕೊಡಬೇಕು’ ಎಂದು ಮನವಿ ಮಾಡಿದರು.

‘ಮಗ ನನಗೆ ಏನೂ ಹೇಳುತ್ತಿರಲಿಲ್ಲ. ಆದರೆ, ಟಿ.ವಿಯಲ್ಲಿ ಉಕ್ರೇನ್‌ನ ಯುದ್ಧದ ಸ್ಥಿತಿ ನೋಡುತ್ತಿದ್ದರೆ ತುಂಬಾ ಭಯವಾಗುತ್ತಿತ್ತು. ಮಾಧ್ಯಮಗಳಿಂದ ತುಂಬಾ ಅನುಕೂಲವಾಗಿದೆ, ಕ್ಷಣ ಕ್ಷಣದ ಮಾಹಿತಿ ಸಿಗುತ್ತಿತ್ತು. ಮಗ ಸುರಕ್ಷಿತವಾಗಿ ಬರಲು ನೆರವಾದ ಕೇಂದ್ರ ಸರ್ಕಾರಕ್ಕೆ ಧನ್ಯವಾದ’ ಎಂದು ತಿಳಿಸಿದರು.

‘ಮಗ ಉಕ್ರೇನ್‌ನಲ್ಲಿ ಇದ್ದಾಗ ತನ್ನ ನೋವು ಯಾರಿಗೂ ಹೇಳಿಕೊಂಡಿಲ್ಲ. ನಮ್ಮ ಕಷ್ಟ ಅವನಿಗೆ ಗೊತ್ತಾಗಿಲ್ಲ, ಅವನ ಕಷ್ಟ ನಮಗೆ ಗೊತ್ತಿಲ್ಲ. ಏನಾಗುತ್ತೋ ಅನ್ನೋ ಭಯದಲ್ಲೇ ಮೊಂಡ ಧೈರ್ಯದಲ್ಲಿ ಕಾಲ ದೂಡಿದ್ದೇವೆ’ ಎಂದು ನಾಗರಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT