ಶನಿವಾರ, ಏಪ್ರಿಲ್ 17, 2021
31 °C
ಬ್ಲ್ಯಾಕ್‌ಮೇಲ್‌ ಮಾಡುವವರಿಗೆ ತಕ್ಕಪಾಠದ ಎಚ್ಚರಿಕೆ

ಅನಧಿಕೃತ ಕಟ್ಟಡ ತೆರವು ಖಚಿತ: ನಗರಸಭೆ ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್: ‘ನಗರದಲ್ಲಿ ಇನ್ನು ಮುಂದೆ ನಿರ್ಮಾಣವಾಗುವ ಕಟ್ಟಡಗಳಿಗೆ ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ಇದ್ದರೆ ಮಾತ್ರ ಅನುಮತಿ ನೀಡಲಾಗುವುದು. ಇಲ್ಲವಾದಲ್ಲಿ ಅದನ್ನು ಅನಧಿಕೃತ ಕಟ್ಟಡ ಎಂದು ತೆರವುಗೊಳಿಸಲಾಗುವುದು’ ಎಂದು ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಹೇಳಿದರು.

ನಗರಸಭೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಮತ್ತು ಬಜೆಟ್ ಸಭೆಯಲ್ಲಿ ಮಾತನಾಡಿ, ‘ಕೆಲವು ವ್ಯಕ್ತಿಗಳು ಅಧಿಕಾರಿಗಳನ್ನು ಬೆದರಿಸಿ, ಅನಧಿಕೃತ ಕೆಲಸ ಮಾಡಿಸಿಕೊಳ್ಳಲು ಹೊರಟಿದ್ದಾರೆ. ಅಂತಹವರನ್ನು ಮಟ್ಟಹಾಕಲಾಗುವುದು. ಬ್ಲಾಕ್ ಮೇಲ್ ಮಾಡುವ, ಗೋಲ್‌ಮಾಲ್‌ ಕೆಲಸ ಮಾಡುವವರಿಗೆ ತಕ್ಕ ಪಾಠ ಕಲಿಸಲಾಗುವುದು’ ಎಂದರು.

‘ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪಕ್ಕದಲ್ಲಿರುವ ಈಶ್ವರ ದೇವಾಲಯದ ಸುತ್ತಮುತ್ತ ನಗರಸಭೆಗೆ ಸೇರಿದ ಜಮೀನು ಇದೆ. ಅದಕ್ಕೆ ಬೇಲಿ ಹಾಕಿ, ನಗರಸಭೆಗೆ ವಶಪಡಿಸಿಕೊಳ್ಳಲಾಗುವುದು’ ಎಂದು ಸದಸ್ಯೆ ಶಾಲಿನಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಸದಸ್ಯರುಗಳಾದ ಜಯಪಾಲ್, ಎಸ್.ರಾಜೇಂದ್ರನ್ ಮತ್ತು ರಮೇಶ್ ಗೌತಂನಗರ ಮತ್ತು ಸುಮತಿ ನಗರದಲ್ಲಿ ಕಟ್ಟಲಾಗುತ್ತಿರುವ ಅನಧಿಕೃತ ಕಟ್ಟಡಗಳ ಬಗ್ಗೆ ಕಿಡಿ ಕಾರಿದರು. ‘ಬಡವರಿಗೆ ಸೇರಿದ ಐದು ಅಡಿ ಗೋಡೆ ಒಡೆದು ಹಾಕುತ್ತೀರಿ. ಆದರೆ ಅನಧಿಕೃತವಾಗಿ ಕಟ್ಟಲಾಗುತ್ತಿರುವ ಮನೆಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಗೌತಮನಗರದಲ್ಲಿ ಏಜೆಂಟ್‌ಗಳು ಹುಟ್ಟಿಕೊಂಡಿದ್ದಾರೆ. ಖಾತೆ ಮಾಡಿಕೊಡುತ್ತೇವೆ ಎಂದು ವಸೂಲಿ ಮಾಡುವವರು ಇದ್ದಾರೆ. ಸರ್ವೆ ನಂಬರ್ 65ರಲ್ಲಿ ಸಾಕಷ್ಟು ಬೋಗಸ್ ಆಗಿದೆ’ ಎಂದು
ಆರೋಪಿಸಿದರು.

‘ಗೌತಂನಗರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ಹೋಗಿದ್ದ ಕಡತ 20 ವರ್ಷಗಳ ನಂತರ
ವಾಪಸ್ ಬಂದಿದೆ. ಆದರೆ ನಗರಸಭೆ ಆಸ್ತಿಪಟ್ಟಿಯಲ್ಲಿರುವ ನಿವೇಶನಕ್ಕೆ ಮಾತ್ರ ಖಾತೆ ಮಾಡಲಾಗುವುದು. ಸಿಂಧೂ ನಗರದಲ್ಲಿ 160 ಖಾತೆಗಳನ್ನು ಮಾಡಲಾಗಿದೆ. ಅವುಗಳನ್ನು ಹಿಂದಿನ ಆಯುಕ್ತರು ಮಾಡಿದ್ದಾರೆ. ಈಗ ಖಾತೆಗಳನ್ನು ಮಾಡಿಲ್ಲ’ ಎಂದು ಆಯುಕ್ತೆ ಸರ್ವರ್ ಮರ್ಚೆಂಟ್ ಸಮಜಾಯಿಸಿ ನೀಡಿದರು.

‘ಕೆರೆ ಕಟ್ಟೆ ಒಡೆದು ನಿವೇಶನ ಮಾಡಿದ್ದಾರೆ. ಅಂತಹ ಜಾಗಕ್ಕೆ ಖಾತೆ ಮಾಡಿದ್ದೀರಿ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಅನಧಿಕೃತ ಬಡಾವಣೆಗೆ ಖಾತೆ ಮಾಡಬಾರದು. ಈಗಾಗಲೇ ಮಾಡಿರುವ ಖಾತೆಗಳನ್ನು ರದ್ದು ಮಾಡಿ’ ಎಂದು ಜಯಪಾಲ್ ಆಗ್ರಹಿಸಿದರು.

‘ಯುಜಿಡಿ ಕಾಮಗಾರಿ ನಡೆಸುವ ಗುತ್ತಿಗೆದಾರರು ಜನರಿಂದ ದುಡ್ಡು ಕೀಳುತ್ತಿದ್ದಾರೆ. ಮನೆಯ ಕೊನೆಯವರೆಗೂ ಪೈಪ್ ಹಾಕುತ್ತಾರೆ. ಮನೆ ಅಂಗಳಕ್ಕೆ ಪೈಪ್ ಎಳೆಯಲು ಐದು ಸಾವಿರ, ಹತ್ತು ಸಾವಿರ ಕೊಡಿ ಎಂದು ಪೀಡಿಸುತ್ತಾರೆ. ಇದಕ್ಕೆ ಸಾಕಷ್ಟು ನಿದರ್ಶನಗಳು ಇವೆ’ ಎಂದು ಶಕ್ತಿವೇಲ್, ಕೋದಂಡನ್, ಪ್ರವೀಣ್, ಸೆಂದಿಲ್, ಜರ್ಮನ್ ಆರೋಪಿಸಿದರು.

‘ಸ್ವರ್ಣನಗರದಲ್ಲಿರುವ ಕೆರೆಯನ್ನು ಅಭಿವೃದ್ಧಿಪಡಿಸಿ ವಾಕಿಂಗ್ ಪಾತ್‌ ನಿರ್ಮಾಣ ಮಾಡಬೇಕು. ಹಳೆಯದಾದ ನೀರಿನ ಕೊಳವೆಗಳನ್ನು ಬದಲಾಯಿಸಿ ಹೊಸದಾಗಿ ಅಳವಡಿಸಬೇಕು’ ಎಂದು ಕರುಣಾಕರನ್ ಒತ್ತಾಯಿಸಿದರು.

‘ಗುತ್ತಿಗೆ ನೌಕರರಿಗೆ ಸರಿಯಾಗಿ ವೇತನ ಪಾವತಿ ಮಾಡುತ್ತಿಲ್ಲ. ಅವರಿಗೆ ಪಿಎಫ್, ಇಎಸ್ಐ ಅನುಕೂಲ ಇಲ್ಲ. ಸರ್ಕಾರದ ಮಾರ್ಗಸೂಚಿಯಂತೆ ನಗರಸಭೆ ಸದಸ್ಯರಿಗೆ ಕೂಡ ವೇತನ ಹೆಚ್ಚು ಮಾಡಬೇಕು’ ಎಂದು ಪಿ.ತಂಗರಾಜ್ ಆಗ್ರಹಿಸಿದರು.

ನಗರದಲ್ಲಿ ಪೌರಕಾರ್ಮಿಕರ ಸಂಖ್ಯೆ ಕಡಿಮೆ ಇರುವುದರಿಂದ ವಾರ್ಡ್‌ಗಳಲ್ಲಿ ಮಹಿಳಾ ಸ್ತ್ರೀ ಶಕ್ತಿ ಸಂಘಗಳಿಗೆ ಶುಚಿತ್ವ ನಿರ್ವಹಣೆಗೆ ಗುತ್ತಿಗೆ ಕೊಡಲು ತೀರ್ಮಾನಿಸಲಾಗಿದೆ. ಇನ್ನು ಮುಂದೆ ಉದ್ಯಾನವನ ಮತ್ತು ಸ್ವಚ್ಛತೆಯ ನಿರ್ವಹಣೆಯನ್ನು ಆಯಾ ವಾರ್ಡ್‌ಗಳ ಸದಸ್ಯರ ಉಸ್ತುವಾರಿಯಲ್ಲಿ ನಡೆಯುತ್ತದೆ ಎಂದು ಅಧ್ಯಕ್ಷರು ಹೇಳಿದರು.

ಎಂ.ಜಿ.ಮಾರುಕಟ್ಟೆ ಬಾಡಿಗೆ ಪರಿಷ್ಕರಣೆ:

ಎಂ.ಜಿ.ಮಾರುಕಟ್ಟೆಯಿಂದ ಮಾಸಿಕ ₹2.40 ಲಕ್ಷ ರೂಪಾಯಿ ಬಾಡಿಗೆ ಬರುತ್ತಿದೆ. ನಿರ್ವಹಣೆ ವೆಚ್ಚವೇ ಅದಕ್ಕಿಂತ ಹೆಚ್ಚಾಗಿದೆ. ಆದ್ದರಿಂದ ಲೋಕೋಪಯೋಗಿ ಇಲಾಖೆಯ ಮಾರ್ಗಸೂಚಿಯಂತೆ ಬಾಡಿಗೆಯನ್ನು ₹200 ರೂಪಾಯಿಗಳಿಂದ ಮೊದಲ್ಗೊಂಡು ₹15 ಸಾವಿರವರೆಗೂ ಹೆಚ್ಚಿಸಲು ಸಭೆಯ ಅನುಮತಿಯನ್ನು ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ ಕೋರಿದರು. ಬಾಡಿಗೆ ಹೆಚ್ಚಿಸಿದರೆ ಮಾಸಿಕ ₹35.85 ಲಕ್ಷ ಹೆಚ್ಚು ಆದಾಯ ಬರುತ್ತದೆ. ನ್ಯಾಯಾಲಯಕ್ಕೆ ಹೋಗಿರುವವರನ್ನು ಬಿಟ್ಟು ಉಳಿದವರಿಗೆ ಈ ಮಾನದಂಡ ಅನ್ವಯವಾಗುತ್ತದೆ. ಸರ್ಕಾರ ಮಾರುಕಟ್ಟೆಯನ್ನು ಹರಾಜು ಮಾಡುವ ತನಕ ಈ ವ್ಯವಸ್ಥೆ ಮುಂದುವರೆಯುತ್ತದೆ ಎಂದು ಹೇಳಿದರು. ವರ್ತಕರಿಂದ ಹಳೇ ಬಾಕಿ ವಸೂಲಿ ಮಾಡಿ ಎಂದು ರಾಜೇಂದ್ರನ್ ಒತ್ತಾಯಕ್ಕೆ ಉತ್ತರಿಸಿದ ಅವರು, ಬಾಕಿ ಇರುವ ಬಗ್ಗೆ ನಗರಸಭೆಯಲ್ಲಿ ಯಾವುದೇ ದಾಖಲೆ ಇಲ್ಲ ಎಂದರು.

2020-21 ಸಾಲಿನ ಬಜೆಟ್: ಕುಡಿಯುವ ನೀರು, ಉತ್ತಮ ಆರೋಗ್ಯ, ಸ್ವಚ್ಛನಗರ, ಬೀದಿ ದೀಪ, ರಸ್ತೆ ಮತ್ತು ಚರಂಡಿ ಹಾಗೂ ಉದ್ಯಾನವನ ನಿರ್ವಹಣೆಗೆ 2020-21ನೇ ಸಾಲಿನ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಹುಲ್ಲು ಮಾರುಕಟ್ಟೆಯಲ್ಲಿ ಕಾರ್ ಪಾರ್ಕಿಂಗ್‌ ವ್ಯವಸ್ಥೆ, ನೂತನ ನಗರಸಭೆ ಕಟ್ಟಡ ನಿರ್ಮಾಣಕ್ಕೆ ₹3 ಕೋಟಿ ನಿಗದಿ ಮಾಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು