ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಶಾಲೆಯಲ್ಲಿ ಮಲ ಗುಂಡಿ ಸ್ವಚ್ಛತೆಗೆ ಮಕ್ಕಳ ಬಳಕೆ; ಮತ್ತಿಬ್ಬರ ಬಂಧನ

ಕೋಲಾರದ ಮೊರಾರ್ಜಿ ವಸತಿ ಶಾಲೆ ಪ್ರಕರಣ‌ l ಮುಖ್ಯಮಂತ್ರಿಯವರ ಸೂಚನೆಯ ಬೆನ್ನಲ್ಲೇ ಆರೋಪಿಗಳ ಪತ್ತೆ
Published 28 ಡಿಸೆಂಬರ್ 2023, 6:31 IST
Last Updated 28 ಡಿಸೆಂಬರ್ 2023, 6:31 IST
ಅಕ್ಷರ ಗಾತ್ರ

ಕೋಲಾರ: ಮಾಲೂರು ತಾಲ್ಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಲದ ಗುಂಡಿ ಸ್ವಚ್ಛತೆಗೆ ಮಕ್ಕಳನ್ನು ಇಳಿಸಿದ್ದ ಪ್ರಕರಣ ದಲ್ಲಿ ಪೊಲೀಸರು ಗುರುವಾರ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ದೂರು ದಾಖಲಾಗುತ್ತಲೇ ತಲೆ ಮರೆಸಿಕೊಂಡಿದ್ದ ಅತಿಥಿ ಶಿಕ್ಷಕ ಅಭಿಷೇಕ್‌ ಹಾಗೂ ಸ್ವಚ್ಛತಾ ಸಿಬ್ಬಂದಿ ಕಲಾವತಿ ಬಂಧಿತರು. ಇಬ್ಬರೂ ಜಿಲ್ಲೆಯಲ್ಲಿಯೇ ತಲೆಮರೆಸಿಕೊಂಡಿದ್ದರು. ಇದರೊಂದಿಗೆ ಪ್ರಕರಣ ಸಂಬಂಧ ಐವರನ್ನು ಬಂಧಿಸಿದಂತಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಎರಡು ದಿನದಲ್ಲಿ ಆರೋಪಿಗಳ ಬಂಧನಕ್ಕೆ ಸೂಚಿಸಿದ್ದರು. ಅದರ ಬೆನ್ನಲೇ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.

ಸದ್ಯ ವಸತಿ ಶಾಲೆ ಪ್ರಾಂಶುಪಾಲೆ ಭಾರತಮ್ಮ, ಚಿತ್ರಕಲಾ ಶಿಕ್ಷಕ ಮುನಿಯಪ್ಪ, ವಾರ್ಡನ್‌ ಮಂಜುನಾಥ್‌ ಅವರನ್ನು ಬಂಧಿಸಲಾಗಿದೆ.

ಐವರು ಆರೋಪಿಗಳ ವಿರುದ್ಧ ಮಾಸ್ತಿ ಪೊಲೀಸ್‌ ಠಾಣೆಯಲ್ಲಿ ದೌರ್ಜನ್ಯ ಪ್ರಕರಣ ಹಾಗೂ ಈ ಪೈಕಿ ಒಬ್ಬರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ವಾರ್ಡನ್‌ ಮಂಜುನಾಥ್‌ ಜಾಮೀನಿನ ಮೇಲೆ ಹೊರಬಂದಿದ್ದಾರೆ.

ಮೊಬೈಲ್‌ ವಶಕ್ಕೆ: ಫೋಟೊ, ವಿಡಿಯೊ ಮಾಯ!: ತನಿಖೆಗಾಗಿ ವಸತಿ ಶಾಲೆಯ ಎಲ್ಲಾ ಸಿಬ್ಬಂದಿಯ ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ, ಆರೋಪಿ ಶಿಕ್ಷಕ ಮುನಿಯಪ್ಪ ಮೊಬೈಲ್‌ನಲ್ಲಿದ್ದ ಫೋಟೊ, ವಿಡಿಯೊ ಅಳಿಸಿ ಹಾಕಿದ್ದಾರೆ.

‘ಯಾರು ವಿಡಿಯೊ ಮಾಡಿದ್ದಾರೆ ಎಂದು ಪತ್ತೆ ಹಚ್ಚುತ್ತಿದ್ದೇವೆ. ಶಿಕ್ಷಕ ಮುನಿಯಪ್ಪ ಮೊಬೈಲ್‌ನಲ್ಲಿದ್ದ ವಿಡಿಯೊಗಳನ್ನು ಅಳಿಸಿ ಹಾಕಿದ್ದು, ಅವನ್ನು ಪಡೆಯಲು (ರಿಟ್ರೀವ್‌) ಸಿಐಡಿ ನೆರವು ಕೋರಿದ್ದೇವೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದರು. 

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಡಿಜಿಟಲ್‌ ಸಾಕ್ಷ್ಯ,ಪ್ರತ್ಯಕ್ಷದರ್ಶಿಗಳು, ಘಟನೆಗೆ ಸಂಬಂಧಿಸಿದ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ಮುಂದುವರಿದಿದೆ. ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ’ ಎಂದು ಹೇಳಿದರು.

‘ವಾರ್ಡನ್‌ ಹುದ್ದೆಯ ಗುಂಪುಗಾರಿಕೆ ಕಾರಣ?’

ವಸತಿ ಶಾಲೆಯಲ್ಲಿ ನಡೆದ ಘಟನೆಗಳಿಗೆ ಶಾಲೆ ನಿರ್ವಹಣೆ ಸಂಬಂಧ ಕಾಯಂ ಶಿಕ್ಷಕರು ಹಾಗೂ ಹೊರಗುತ್ತಿಗೆ ಶಿಕ್ಷಕರ ನಡುವಿನ ವೈಮನಸ್ಯ, ಕಮಿಷನ್ ಹಂಚಿಕೊಳ್ಳುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಮುಖ್ಯ ಕಾರಣ ಎಂದು ವಿಚಾರಣೆಯಲ್ಲಿ ಗೊತ್ತಾಗಿದೆ.

ವಾರ್ಡನ್‌ ಹುದ್ದೆಗಾಗಿ ಕಣ್ಣಿಟ್ಟು ಗುಂಪುಗಾರಿಕೆ ನಡೆದಿರುವುದೂ ಕಾರಣವಾಗಿದೆ. ಪ್ರಭಾರ ವಾರ್ಡನ್‌ ಮಂಜುನಾಥ್‌ ಅವರನ್ನು ಕೆಳಗಿಳಿಸಲು ಪ್ರಯತ್ನ ನಡೆದಿತ್ತು. ಹೀಗಾಗಿ, ಒಂದು ಗುಂಪು ವಸತಿ ಶಾಲೆಯಲ್ಲಿನ ಘಟನೆಗಳನ್ನು ವಿಡಿಯೊ ಮಾಡಿದೆ ಎಂಬ ಅಂಶ ವಿಚಾರಣೆಯಲ್ಲಿ ಗೊತ್ತಾಗಿದೆ

ಶಾಲೆಗೆ ಕೆಟ್ಟು ಹೆಸರು ತಂದು ಪ್ರಾಂಶುಪಾಲರನ್ನು ಸಿಕ್ಕಿಸಿ ಹಾಕಿಸುವುದು ಇವರ ಉದ್ದೇಶವಾಗಿತ್ತು. ಹೀಗಾಗಿ, ಮಕ್ಕಳಿಗೆ ನೀಡುತ್ತಿದ್ದ ಹಿಂಸೆ, ಮಾಡಿಸುತ್ತಿದ್ದ ಕೆಲಸಗಳನ್ನು ವಿಡಿಯೊ ಮಾಡಲಾಗಿತ್ತು ಎಂದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛತೆ ಮುಖ್ಯ ಶಿಕ್ಷಕ ಅಮಾನತು

ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಗುಡ್ಡದ ನೇರಲಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಅಲ್ಲಿನ ಶೌಚಾಲಯ ಸ್ವಚ್ಛಗೊಳಿಸಲು ಬಳಸಲಾಗಿದೆ. ಈ ಕುರಿತ ವಿಡಿಯೊ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಭದ್ರಾವತಿ ಬಿಇಒ ನಾಗೇಂದ್ರಪ್ಪ ಅವರು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದು ಶಿಕ್ಷಕರು, ವಿದ್ಯಾರ್ಥಿಗಳೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿ ಮಾಹಿತಿ ಸಂಗ್ರಹಿಸಿದ್ದರು.

ಅವರು ಸಲ್ಲಿಸಿರುವ ವರದಿಯನ್ನು ಆಧರಿಸಿ ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಪ್ರಭಾರ ಮುಖ್ಯಶಿಕ್ಷಕ ಶಂಕರಪ್ಪ ವಿರುದ್ಧ ಇಲಾಖೆ ವಿಚಾರಣೆ ಕಾಯ್ದಿರಿಸಿ, ಅವರನ್ನು ಅಮಾನತುಗೊಳಿಸಿದ್ದಾರೆ.ಶಂಕರಪ್ಪ 11 ವರ್ಷಗಳಿಂದ ಈ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು.

ಪ್ರತ್ಯೇಕ ವಿಡಿಯೊ: ಶಾಲೆಯ ಸಮವಸ್ತ್ರದಲ್ಲಿರುವ ವಿದ್ಯಾರ್ಥಿ –ವಿದ್ಯಾರ್ಥಿನಿಯರು ಬ್ರಷ್‌ ಹಿಡಿದು ಶೌಚಾಲಯದ ನೆಲವನ್ನು ಉಜ್ಜಿ ಸ್ವಚ್ಛಗೊಳಿಸುತ್ತಿರುವುದು ವಿಡಿಯೊದಲ್ಲಿದೆ.

ಡಿಎಸ್‌ಎಸ್‌ ದೂರು: ಜಾಲತಾಣಗಳಲ್ಲಿ ವಿಡಿಯೊ ಹರಿದಾಡುತ್ತಿದ್ದಂತೆಯೇ ದಲಿತ ಸಂಘರ್ಷ ಸಮಿತಿಯ ಮುಖಂಡರು ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣ ಅವರಿಗೆ ಈ ಸಂಬಂಧ ದೂರು ನೀಡಿದ್ದಾರೆ. ‘ಶಾಲೆ ಶೌಚಾಲಯ ಸ್ವಚ್ಛಗೊಳಿಸಲು ಪದೇಪದೇ ವಿದ್ಯಾರ್ಥಿಗಳನ್ನು ಬಳಸಲಾಗುತ್ತಿದೆ. ನಿರಾಕರಿಸುವ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಮುಖ್ಯಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಸ್ವಚ್ಛತಾ ಸಿಬ್ಬಂದಿ ಕಲಾವತಿ

ಸ್ವಚ್ಛತಾ ಸಿಬ್ಬಂದಿ ಕಲಾವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT