ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಮಗಲ್‌–ನರಸಾಪುರ ಠಾಣೆ ಮೇಲ್ದರ್ಜೆಗೆ

Last Updated 14 ಮೇ 2021, 14:39 IST
ಅಕ್ಷರ ಗಾತ್ರ

ಕೋಲಾರ: ಸರ್ಕಾರವು ತಾಲ್ಲೂಕಿನ ವೇಮಗಲ್ ಪೊಲೀಸ್ ಠಾಣೆಯನ್ನು ವೃತ್ತ ನಿರೀಕ್ಷಕ ಹಂತದ ಠಾಣೆಯಾಗಿ ಹಾಗೂ ನರಸಾಪುರ ಹೊರ ಠಾಣೆಯನ್ನು ಎಸ್‌ಐ ಠಾಣೆಯಾಗಿ ಮೇಲ್ದರ್ಜೆಗೇರಿಸಿ ಶುಕ್ರವಾರ ಆದೇಶ ಹೊರಡಿಸಿದ್ದು, ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಮಾರ್ಚ್ 21ರಂದು ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದ ಸುದರ್ಶನ್ ಅವರು ವೇಮಗಲ್ ಹೋಬಳಿಯು ಜಿಲ್ಲೆಯಲ್ಲೇ ಅತಿ ಹೆಚ್ಚು ಭೌಗೋಳಿಕ ವಿಸ್ತೀರ್ಣ ಹೊಂದಿದೆ. ವೇಮಗಲ್‌ನಲ್ಲಿರುವ ಎಸ್‌ಐ ಹಂತದ ಠಾಣೆ ವ್ಯಾಪ್ತಿಗೆ ವೇಮಗಲ್ ಮತ್ತು ನರಸಾಪುರ ಹೋಬಳಿಯ ಹಳ್ಳಿಗಳು, ಸುಗಟೂರು ಹಾಗೂ ವಕ್ಕಲೇರಿ ಹೋಬಳಿಯ ತಲಾ ಒಂದು ಗ್ರಾ.ಪಂ ವ್ಯಾಪ್ತಿಯ ಹಳ್ಳಿಗಳು ಸೇರುತ್ತವೆ ಎಂದು ತಿಳಿಸಿದ್ದರು.

ವೇಮಗಲ್‌ನ ಸುಮಾರು 1 ಸಾವಿರ ಎಕರೆ ಪ್ರದೇಶದಲ್ಲಿ ಬೃಹತ್ ಕೈಗಾರಿಕಾ ಪ್ರದೇಶವಿದೆ. 2009ರಿಂದ ನರಸಾಪುರ ಕೈಗಾರಿಕಾ ಪ್ರದೇಶವೂ ಸುಮಾರು ಒಂದು ಸಾವಿರ ಎಕರೆ ಪ್ರದೇಶದಲ್ಲಿ ಆರಂಭಗೊಂಡಿದ್ದು, ಇಲ್ಲಿ ಸಾವಿರಾರು ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಸ್ಥಳೀಯವಾಗಿ ಕೃಷಿ, ವಾಣಿಜ್ಯ ವಹಿವಾಟು, ಕೈಗಾರಿಕಾ ಚಟುವಟಿಕೆ ವೃದ್ಧಿಸಿವೆ. ಈ ಹಿನ್ನೆಲೆಯಲ್ಲಿ ವೇಮಗಲ್‌ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೆ ಏರಿಸಬೇಕೆಂದು ಕೋರಿದ್ದರು.

ಸರ್ಕಾರ ಇತ್ತೀಚೆಗೆ ವೇಮಗಲ್-ಕುರಗಲ್‍ ಅನ್ನು ಪಟ್ಟಣ ಪಂಚಾಯಿತಿಯಾಗಿ ಘೋಷಿಸಿದೆ. ಕೈಗಾರಿಕಾ ಪ್ರದೇಶಾಭಿವೃದ್ದಿ ಹಾಗೂ ಜನರ ಹಿತರಕ್ಷಣೆ, ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸ್ ಠಾಣೆ ಮೇಲ್ದರ್ಜೆಗೆ ಏರಿಸಬೇಕು ಎಂದು ಮನವಿ ಮಾಡಿದ್ದರು.

ಈ ಮನವಿಗೆ ಸ್ಪಂದಿಸಿರುವ ಸರ್ಕಾರ ವೇಮಗಲ್ ಮತ್ತು ನರಸಾಪುರ ಹೊರ ಠಾಣೆಯನ್ನು ಮೇಲ್ದರ್ಜೆಗೆ ಏರಿಸಿದೆ. ಈ ಠಾಣೆಗಳಿಗೆ ಅಗತ್ಯ ಸಿಬ್ಬಂದಿ ಜತೆಗೆ ಮೂಲಸೌಕರ್ಯ ಒದಗಿಸಬೇಕು ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT