ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಪಶು ಇಲಾಖೆ– ಅರ್ಧಕ್ಕಿಂತ ಹೆಚ್ಚು ಹುದ್ದೆ ಖಾಲಿ

Published 24 ಫೆಬ್ರುವರಿ 2024, 7:07 IST
Last Updated 24 ಫೆಬ್ರುವರಿ 2024, 7:07 IST
ಅಕ್ಷರ ಗಾತ್ರ

ಕೋಲಾರ: ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವೆ ಇಲಾಖೆಯಲ್ಲಿ ಶೇ 70ರಷ್ಟು ಹುದ್ದೆ ಖಾಲಿ ಇದ್ದು, ಹೈನುಗಾರಿಕೆಯೇ ಜೀವಾಳವಾಗಿರುವ ಬಯಲುಸೀಮೆ ಜಿಲ್ಲೆಯಲ್ಲಿ ಭಾರಿ ಸಮಸ್ಯೆ ತಂದೊಡ್ಡಿದೆ.

ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ಜಿಲ್ಲೆಯಲ್ಲಿ ಇಲಾಖೆಯೇ ಸೊರಗಿ ಹೋಗಿದೆ. ಮ೦ಜೂರಾದ ಒಟ್ಟು ಹುದ್ದೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಹುದ್ದೆ ಖಾಲಿ ಇದ್ದು, ಹುದ್ದೆ ಭರ್ತಿಗೆ ರಾಜ್ಯ ಸರ್ಕಾರ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ಜಿಲ್ಲೆಗೆಂದು ಒಟ್ಟು 490 ಹುದ್ದೆಗಳು ಮಂಜೂರಾಗಿವೆ. ಈವರೆಗೆ ಭರ್ತಿ ಆಗಿರುವುದು ಕೇವಲ 165 ಹುದ್ದೆ ಮಾತ್ರ. ಇನ್ನೂ 325 ಹುದ್ದೆಗಳು ಖಾಲಿ ಬಿದ್ದಿದ್ದು, ಉಳಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಕಾರ್ಯಭಾರದ ವಿಪರೀತ ಒತ್ತಡ ಉಂಟಾಗುತ್ತಿದೆ.

ಇಲಾಖೆಯಲ್ಲಿ ಪ್ರತಿ ವರ್ಷ ಹೊಸ ಹೊಸ ಯೋಜನೆಗಳು ಸೇರ್ಪಡೆಯಾಗುತ್ತವೆ. ಜೊತೆಗೆ ಜಾನುವಾರುಗಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಎಷ್ಟೇ ಕೆಲಸ ಹೆಚ್ಚಾದರೂ ಈಗಿರುವ ಸಿಬ್ಬಂದಿಯೇ ಆ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕಾಗುತ್ತದೆ. ಆದರೆ, ಸಿಬ್ಬಂದಿ ಕೊರತೆ ಹಾಗೂ ಹೆಚ್ಚಿನ ಕೆಲಸದ ಒತ್ತಡದ ಪರಿಣಾಮ ಅವುಗಳನ್ನು ಸಕಾಲಕ್ಕೆ ಅನುಷ್ಠಾನಗೊಳಿಸಲು, ಸಕಾಲದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ರೈತರಿಗೆ ಮೇವಿನ ಬೆಳೆಗಳ ಬಗ್ಗೆ ಮಾಹಿತಿ, ವಿಶೇಷ ತಳಿಗಳ ಸಂರಕ್ಷಣೆಯಂತಹ ಕಾರ್ಯವನ್ನೂ ಸಮರ್ಪಕವಾಗಿ ಮಾಡಲು ಕಷ್ಟವಾಗುತ್ತಿದೆ.

‘ರಾಜ್ಯದಲ್ಲಿ ಕೋಲಾರ ಜಿಲ್ಲೆಯು ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಹೆಚ್ಚಿನ ರೈತರು ಹೈನೋದ್ಯಮ ಅವಲಂಬಿಸಿದ್ದಾರೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆಯಿಂದ ತೊಂದರೆ ಆಗುತ್ತಿದೆ. ‘ಡಿ’ ದರ್ಜೆ ನೌಕರರ ಕೊರತೆಯೇ ಹೆಚ್ಚಿದೆ. ಬೇಗನೇ ಭರ್ತಿ ಮಾಡಿದರೆ ಒಳ್ಳೆಯದು’ ಎಂದು ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಜಿ.ಟಿ.ರಾಮಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ತುರ್ತು ಸಂದರ್ಭದಲ್ಲಿ ಅಕ್ಕಪಕ್ಕದ ಆಸ್ಪತ್ರೆಗಳಲ್ಲಿನ ವೈದ್ಯರು, ಸಿಬ್ಬಂದಿಯನ್ನು ಕರೆಯಿಸಿಕೊಂಡು ಚಿಕಿತ್ಸೆ ಹಾಗೂ ಇನ್ನಿತರ ಕೆಲಸ ಮಾಡುತ್ತಿದ್ದೇವೆ’ ಎಂದರು.

ಜಿಲ್ಲೆಯಲ್ಲಿ 2.36 ಲಕ್ಷ ರಾಸು, 5.72 ಲಕ್ಷ ಕುರಿ, ಮೇಕೆ ಹಾಗೂ 5 ಸಾವಿರ ಹಂದಿಗಳಿವೆ. ಸಾಕು ಪ್ರಾಣಿಗಳೂ ಅಧಿಕ ಸಂಖ್ಯೆಯಲ್ಲಿವೆ.

ಜಿಲ್ಲೆಗೆ ಮಂಜೂರಾದ 42 ಮುಖ್ಯ ಪಶು ವೈದ್ಯಾಧಿಕಾರಿ ಹುದ್ದೆಗಳಲ್ಲಿ 25 ಹುದ್ದೆ ಭರ್ತಿಯಾಗಿದ್ದು, 17 ಖಾಲಿ ಉಳಿದಿವೆ. 21 ಹಿರಿಯ ಪಶು ವೈದ್ಯಾಧಿಕಾರಿಗಳಿದ್ದು, 4 ಖಾಲಿ ಇವೆ. 22 ಪಶು ವೈದ್ಯಾಧಿಕಾರಿಗಳಿದ್ದು, 9 ಹುದ್ದೆ ಖಾಲಿ ಉಳಿದಿವೆ.

ಮಂಜೂರಾದ 21 ಜಾನುವಾರು ಅಧಿಕಾರಿ ಹುದ್ದೆಗಳಲ್ಲಿ 7 ಹುದ್ದೆ ಭರ್ತಿಯಾಗಿದ್ದು, 14 ಖಾಲಿ ಇವೆ. ಹಿರಿಯ ಪಶು ವೈದ್ಯಕೀಯ ಪರೀಕ್ಷಕರು 14 ಹುದ್ದೆ ಭರ್ತಿಯಾಗಿದ್ದು, 32 ಖಾಲಿ ಉಳಿದಿವೆ. 16 ಪಶು ವೈದ್ಯಕೀಯ ಪರೀಕ್ಷಕರು ಹುದ್ದೆ ಭರ್ತಿಯಾಗಿದ್ದು, 29 ಹುದ್ದೆ ಖಾಲಿ ಇವೆ. 17 ಕಿರಿಯ ಪಶು ವೈದ್ಯಕೀಯ ಪರೀಕ್ಷಕರು ಹುದ್ದೆ ಭರ್ತಿಯಾಗಿದ್ದು, 37 ಹುದ್ದೆ ಖಾಲಿ ಇವೆ.

ಇನ್ನೂ ಮಂಜೂರಾದ ‘ಡಿ’ ದರ್ಜೆಯ 192 ಹುದ್ದೆಗಳಲ್ಲಿ 27 ಹುದ್ದೆ ಭರ್ತಿಯಾಗಿದ್ದು, 165 ಹುದ್ದೆಗಳು ಖಾಲಿ ಉಳಿದಿವೆ.

ಜಿಲ್ಲೆಯಲ್ಲಿ 2022ರಲ್ಲಿ ಜಾನುವಾರುಗಳಿಗೆ ಆವರಿಸಿದ ಚರ್ಮಗಂಟು ರೋಗದಿಂದ ರೈತರು ತತ್ತರಿಸಿ ಹೋಗಿದ್ದರು. 400ಕ್ಕೂ ಅಧಿಕ ಹಳ್ಳಿಗಳಲ್ಲಿ ಕಾಣಿಸಿಕೊಂಡಿತ್ತು. ಆಗಲೂ ಸಿಬ್ಬಂದಿ ಕೊರತೆಯಿಂದ ಸಮಸ್ಯೆ ಉಂಟಾಗಿತ್ತು.

‘ಗ್ರಾಮೀಣ ಭಾಗದ ಪಶು ಆಸ್ಪತ್ರೆಗಳಲ್ಲಿ ವೈದ್ಯರೇ ಇರುವುದಿಲ್ಲ. ಕೆಲವೆಡೆ ಕೆಲಸ ಕಾರ್ಯ ಬಿಟ್ಟು ಕಿಲೋ ಮೀಟರ್‌ಗಟ್ಟಲೆ ನಡೆದು ಹೋಗಬೇಕಾದ ಪರಿಸ್ಥಿತಿ ಇದೆ. ಅಗತ್ಯ ಸಿಬ್ಬಂದಿ ಇದ್ದರೆ ಸ್ಥಳಕ್ಕೆ ಬಂದು ಚಿಕಿತ್ಸೆ ನೀಡುತ್ತಾರೆ. ಸರ್ಕಾರ ಈ ವಿಚಾರವಾಗಿ ಗಮನ ಹರಿಸಿ ಕೂಡಲೇ ಹುದ್ದೆ ಭರ್ತಿ ಮಾಡುಬೇಕು’ ಎಂದು ಜಿಲ್ಲೆಯ ಹೈನುಗಾರರು ಒತ್ತಾಯಿಸಿದ್ದಾರೆ.

ಕೋಲಾರ ಜಿಲ್ಲೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯಲ್ಲಿ ವೈದ್ಯರು ಸಿಬ್ಬಂದಿ ವಿವರ(ತಾಲ್ಲೂಕು; ಮಂಜೂರು, ಭರ್ತಿ, ಖಾಲಿ)

ಕೋಲಾರ: 142; 59; 83

ಬಂಗಾರಪೇಟೆ; 46; 14; 32

ಕೆಜಿಎಫ್‌; 40; 13; 27

ಮುಳಬಾಗಿಲು; 94; 24; 70

ಮಾಲೂರು; 81; 27; 54

ಶ್ರೀನಿವಾಸಪುರ; 87; 28; 59

ಒಟ್ಟು; 490; 165; 325

ಜಿಲ್ಲೆಯಲ್ಲಿ 7 ಸಂಚಾರಿ ಪಶು ಚಿಕಿತ್ಸಾಲಯ

ಜಾನುವಾರುಗಳ ಕೃತಕ ಗರ್ಭಧಾರಣೆ ಅಥವಾ ಚಿಕಿತ್ಸೆಗೆಂದು ರೈತರ ಮನೆ ಬಾಗಿಲಿಗೆ ಹೋಗಿ ಚಿಕಿತ್ಸೆ ನೀಡಲು ಜಿಲ್ಲೆಯಲ್ಲಿ ಏಳು ಸಂಚಾರಿ ಪಶು ಚಿಕಿತ್ಸಾ ವಾಹನಗಳಿವೆ. ರಾಷ್ಟ್ರೀಯ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದ ನೆರವಿನಲ್ಲಿ ಈ ಸೇವೆ ಒದಗಿಸಲಾಗಿದೆ. ‘ಜಿಲ್ಲೆಯಲ್ಲಿ ಸಿಬ್ಬಂದಿ ಕೊರತೆ ಇದ್ದು ಸಂಚಾರಿ ಪಶು ಚಿಕಿತ್ಸಾಲಯ ನೆರವಿಗೆ ಬಂದಿವೆ. ಮನೆಗಳ ಬಳಿಗೆ ಹೋಗಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಜಿ.ಟಿ.ರಾಮಯ್ಯ ತಿಳಿಸಿದರು.

ಜಿಲ್ಲೆಯಲ್ಲಿ ಖಾಲಿ ಹುದ್ದೆ ವಿಚಾರವನ್ನು ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ವೈದ್ಯರು ಸಿಬ್ಬಂದಿ ಕೊರತೆಯಿಂದ ಉಳಿದವರ ಮೇಲೆ ಒತ್ತಡ ಹೆಚ್ಚಿರುವುದು ನಿಜ
ಜಿ.ಟಿ.ರಾಮಯ್ಯ, ಉಪನಿರ್ದೇಶಕ, ಪಶು ಸಂಗೋಪನೆ ಇಲಾಖೆ, ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT