ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನದ ನಂತರ ಮನಸು ಹಗುರ

ಮತದಾನದ ಮರುದಿನವಾದ ಭಾನುವಾರ ಅಭ್ಯರ್ಥಿಗಳ ದಿನಚರಿ
ಅಕ್ಷರ ಗಾತ್ರ

ಧಾರವಾಡ: ಚುನಾವಣಾ ಅಭ್ಯರ್ಥಿಗಳ ನಿದ್ರೆ ಇಲ್ಲದ ರಾತ್ರಿಗಳು, ಸತತ ಪಾದಯಾತ್ರೆಯಿಂದ ಬಳಲಿದ ದೇಹ, ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಒತ್ತಡಕ್ಕೆ ಸಿಲುಕಿದ ಮನಸ್ಸಿಗೆ ತುಸು ಆರಾಮ ಸಿಕ್ಕಿದ್ದು ಮತದಾನದ ಮರುದಿನವಾದ ಭಾನುವಾರ.

ಚುನಾವಣೆ ಘೋಷಣೆಯಾದ ನಂತರ ತಮ್ಮ ಕಾಲಿಗೆ ಚಕ್ರ ಹಾಗೂ ಬೆನ್ನಿಗೆ ಕಾರ್ಯಕರ್ತರನ್ನು ಕಟ್ಟಿಕೊಂಡು ಊರೂರು, ಮನೆಮನೆ ಸುತ್ತಿದ ಅಭ್ಯರ್ಥಿಗಳು ಭಾನುವಾರ ಸಂಪೂರ್ಣ ಆರಾಮವಾಗಿ ತಮ್ಮ ಕುಟುಂಬದವರೊಂದಿಗೆ ಕಾಲ ಕಳೆದರು.

ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಅವರು ಶಿವಗಿರಿ ಮನೆಯಲ್ಲಿ ಬೆಳಿಗ್ಗೆ ಒಂದಷ್ಟು ಜನ ಕಾರ್ಯಕರ್ತರು ಭೇಟಿ ಮಾಡಿ ಮತದಾನದ ಪ್ರಮಾಣ ಕುರಿತು ಚರ್ಚಿಸಿದರು. ನಂತರ ನೇರವಾಗಿ ಅವರು ತಮ್ಮ  ಡೇರಿಗೆ ಹೋಗಿ ಬಹಳ ಹೊತ್ತು ಅಲ್ಲೇ ಕಳೆದರು.

‘ಡೇರಿಗೆ ಬಂದರೆ ನನಗೆ ಮನಸ್ಸು ಹಗುರಾಗುತ್ತದೆ. ನಾನು ಇನ್ನಷ್ಟು ಉಲ್ಲಾಸಿತನಾಗುತ್ತೇನೆ. ನನಗೆ ಸಿನಿಮಾ ನೋಡಿ ಗೊತ್ತಿಲ್ಲ. ಪುಸ್ತಕ ಓದುತ್ತೇನೆ. ಆದರೆ ಜಾನುವಾರುಗಳೊಂದಿಗಿನ ಒಡನಾಟ ನನಗೆ ಹೆಚ್ಚು ಆರಾಮ ನೀಡುತ್ತದೆ. ಈ ಡೇರಿಯೇ ನನಗೆ ದೇವಸ್ಥಾನ, ಪ್ರವಾಸ ಸ್ಥಳ ಎಲ್ಲವೂ. ಚುನಾವಣೆಯ ಒತ್ತಡದ ನಡುವೆ ಈ ಕಡೆ ಗಮನ ನೀಡಲಾಗಿರಲಿಲ್ಲ. ಹೀಗಾಗಿ ಭಾನುವಾರ ಇಲ್ಲೇ ಇದ್ದು ಇವುಗಳ ಆರೈಕೆ ಮಾಡಬೇಕೆಂದಿದ್ದೇನೆ’ ಎಂದರು.

ಆಕಳು, ಎಮ್ಮೆ, ಕುರಿ, ಕುದರೆ ಇತ್ಯಾದಿಗಳಿಗೆ ಆಹಾರ ನೀಡುವ ಬಗೆ, ಅವುಗಳನ್ನು ಶುಚಿಯಾಗಿಡುವ ಕುರಿತು ಅಲ್ಲಿನ ಸಿಬ್ಬಂದಿಗೆ ಸೂಚಿಸಿದರು. ಇದರ ನಡುವೆ, ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಆದ ಮತದಾನದ ಪ್ರಮಾಣ ಕುರಿತು ಕಾರ್ಯಕರ್ತರು ಮಾಹಿತಿ ನೀಡುತ್ತಿದ್ದದನ್ನು ಕೇಳಿಸಿಕೊಳ್ಳುತ್ತಿದ್ದರು. ಅವರ ಮನಸ್ಸು ಜಾನುವಾರುಗಳತ್ತಲೇ ನೆಟ್ಟಿತ್ತು.

ಇದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಇಡೀ ದಿನ ಮನೆಯಲ್ಲೇ ಕಳೆದರು. ಬೆಳಿಗ್ಗೆ ತಮ್ಮನ್ನು ಭೇಟಿ ಮಾಡಿದ ಕಾರ್ಯಕರ್ತರೊಂದಿಗೆ ಮಾತನಾಡಿದರು. ನಂತರ ತಮ್ಮ ತಂದೆ ಎ.ಬಿ.ದೇಸಾಯಿ ಅವರೊಂದಿಗೆ ಚುನಾವಣೆಯ ಲೆಕ್ಕಾಚಾರ ಹಾಗೂ ಪತ್ರಿಕೆಗಳ ವರದಿಗಳ ಕುರಿತು ಗಹನವಾದ ಚರ್ಚೆ ನಡೆಸಿದರು. ನಂತರ ತಮ್ಮ ಪುತ್ರಿಯರೊಂದಿಗೆ ಸಮಯ ಕಳೆದರು.

ಬಿಡುವಿಲ್ಲದೆ ಓಡಾಟ ನಡೆಸಿದ್ದ ಅವರು, ಭಾನುವಾರ ಇಡೀ ಕುಟುಂಬದೊಂದಿಗೆ ಕುಳಿತು ಉಪಾಹಾರ, ಮಧ್ಯಾಹ್ನದ ಊಟ ಸವಿಯುವ ಮೂಲಕ ದೇಹ ಹಾಗೂ ಮನಸ್ಸು ಹಗುರಾಗಿಸಿಕೊಂಡರು.

ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಅಭ್ಯರ್ಥಿ ಅರವಿಂದ ಬೆಲ್ಲದ ಅವರು ತಮ್ಮ ಧಾರವಾಡ ನಿವಾಸದಲ್ಲಿ ಭಾನುವಾರ ಕುಟುಂಬದವರೊಂದಿಗೆ ಹೊತ್ತು ಕಳೆದರು. ವಿಶ್ವ ತಾಯಂದಿರ ದಿನದ ಕಾರಣ ಬಹಳ ಹೊತ್ತು ತಮ್ಮ ತಾಯಿ ಲೀಲಾವತಿ ಅವರೊಂದಿಗೆ ಕಾಲ ಕಳೆದರು. ತಮ್ಮ ತಾಯಿ ಪ್ರೀತಿಯಿಂದ ನೀಡಿದ ಹಣ್ಣುಗಳನ್ನು ಸವಿಯುತ್ತ ಹರಟಿದರು. ಧಾರವಾಡ ಮನೆಯಲ್ಲಿ ಊಟ ಮುಗಿಸಿದ ಅರವಿಂದ, ನೇರವಾಗಿ ಹುಬ್ಬಳ್ಳಿಯ ಮನೆಗೆ ಹೋಗಿ ಅಲ್ಲಿಂದ ವೈಯಕ್ತಿಕ ಕೆಲಸದ ಮೇಲೆ ಸಂಜೆ ವಿಮಾನ ಮೂಲಕ ಬೆಂಗಳೂರಿಗೆ ತೆರಳಿದರು.

ಜನ್ಮದಿನದಲ್ಲಿ ಭಾಗಿ...

ಧಾರವಾಡ: ಇದೇ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರ ಅವರು ತಮ್ಮ ಪತ್ನಿ ಪೂರ್ಣಿಮಾ (ರುಖಯಾ) ಅವರ ಜನ್ಮದಿನ ಆಚರಿಸಲು ಶನಿವಾರ ರಾತ್ರಿಯೇ ಕುಟುಂಬದ ಸಮೇತ ಅಜ್ಞಾತ ಸ್ಥಳಕ್ಕೆ ತೆರಳಿದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT