ಶುಕ್ರವಾರ, ನವೆಂಬರ್ 22, 2019
21 °C
ಕೊಳೆಗೇರಿಯಾದ ಬೆಮಲ್‌ ಬಡಾವಣೆ; ನಗರವಾಸಿಗಳ ನಿದ್ದೆಗೆಡಿಸಿದ ಕಸದ ಸಮಸ್ಯೆ

ಹಳಿ ತಪ್ಪಿದ ತ್ಯಾಜ್ಯ ಸಂಗ್ರಹಣೆ–ವಿಲೇವಾರಿ

Published:
Updated:
Prajavani

ಕೆಜಿಎಫ್: ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದರೂ ನಗರದ ಚಹರೆ ಹೊಂದಿರುವ ಬೆಮಲ್ ನಗರವು ಸುಂದರವಾಗಿ ಕಂಗೊಳಿಸುವ ಬದಲು ಕೊಳೆಗೇರಿಯಾಗಿ ಬದಲಾಗುತ್ತಿದೆ.

ಬೆಮಲ್ ನಗರದ ಕೆಲ ಭಾಗ ಬಂಗಾರಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸೇರಿದರೆ ಮತ್ತೆ ಕೆಲ ಭಾಗ ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿದೆ. ಕೆಜಿಎಫ್ ವಿಧಾನಸಭಾ ಕ್ಷೇತ್ರದ ಬಹುಪಾಲು ಪ್ರದೇಶವನ್ನು ಬೆಮಲ್ ಆಡಳಿತ ಮಂಡಳಿಯೇ ನಿರ್ವಹಣೆ ಮಾಡುತ್ತಿರುವುದರಿಂದ ಸ್ವಚ್ಛವಾಗಿದೆ.

ಆದರೆ, ದೊಡ್ಡೂರು ಕರಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬೆಮಲ್‌ ನಗರದ ಭಾಗದಲ್ಲಿ ಕಸದ್ದೇ ದೊಡ್ಡ ಸಮಸ್ಯೆ. ಹಾದಿ ಬೀದಿಯಲ್ಲಿ ಹಾಗೂ ಖಾಲಿ ನಿವೇಶನಗಳಲ್ಲಿ ಕಸ ರಾಶಿಯಾಗಿ ಬಿದ್ದಿದೆ. ಇಡೀ ಪ್ರದೇಶ ಕೊಳೆಗೇರಿಯಂತೆ ಭಾಸವಾಗುತ್ತದೆ. ಕಸವನ್ನು ತಿಂಗಳುಗಟ್ಟಲೇ ವಿಲೇವಾರಿ ಮಾಡದಿರುವುದರಿಂದ ಸ್ಥಳದಲ್ಲೇ ಕೊಳೆತು ದುರ್ನಾತ ಬೀರುತ್ತಿದೆ.

ದೊಡ್ಡೂರು ಕರಪನಹಳ್ಳಿಯು ಕೋಲಾರ ಜಿಲ್ಲೆಯಲ್ಲಿ ಅತಿ ದೊಡ್ಡ ಗ್ರಾ.ಪಂ ಎಂಬ ಹೆಗ್ಗಳಿಕೆ ಹೊಂದಿದೆ. ಗ್ರಾ.ಪಂಗೆ ತೆರಿಗೆ ರೂಪದಲ್ಲಿ ಅತಿ ಹೆಚ್ಚು ಆದಾಯ ಸಹ ಹರಿದು ಬರುತ್ತಿದೆ. ಗ್ರಾ.ಪಂ ವ್ಯಾಪ್ತಿಯ ಬಡಾವಣೆಗಳು ಸಹ ನಗರ ಪ್ರದೇಶದ ಬಡಾವಣೆಗಳಂತೆಯೇ ಬೆಳೆದಿವೆ. ಡಿ.ಕೆ ಹಳ್ಳಿ ಗ್ರಾ.ಪಂಗೆ ಸೇರುವ ಪ್ರದೇಶವನ್ನು 12 ಸದಸ್ಯರು ಪ್ರತಿನಿಧಿಸುತ್ತಾರೆ. ಈ ಸದಸ್ಯರು ಕಸದ ಸಮಸ್ಯೆ ಪರಿಹರಿಸದೆ ಕೈಚೆಲ್ಲಿದ್ದಾರೆ.

ಎಂ.ವಿ.ನಗರ, ಭಾರತ್ ನಗರ, ಎಚ್.ಪಿ.ನಗರ, ಪಾಲಾರ್ ನಗರ, ವಾಣಿನಗರ, ಜಯನಗರ, ಹನುಮಂತನಗರ, ಶಾಂತಿನಗರ ಹೀಗೆ ಹಲವು ಬಡಾವಣೆಗಳು ಗ್ರಾ.ಪಂ ವ್ಯಾಪ್ತಿಯಲ್ಲಿವೆ. ಈ ಬಡಾವಣೆಗಳ ಜನಸಂಖ್ಯೆ 10 ಸಾವಿರದ ಗಡಿ ದಾಟಿದೆ. ಹಸಿರು ವಲಯದಲ್ಲಿರುವ ಎಲ್ಲ ಬಡಾವಣೆಗಳು ಹೆಚ್ಚಿನ ಜನದಟ್ಟಣೆಯಿಲ್ಲದೆ  ಪ್ರಶಾಂತವಾಗಿರುತ್ತವೆ.

ಬಡಾವಣೆಗಳು ಬೆಳೆದಂತೆ ಜನಸಂಖ್ಯೆ ವೃದ್ಧಿಯಾಗಿ ಕಸದ ಪ್ರಮಾಣ ಹೆಚ್ಚುತ್ತಿದೆ. ಬಡಾವಣೆಗಳಲ್ಲಿ ಕಸ ಸಂಗ್ರಹಣೆ ಮತ್ತು ವಿಲೇವಾರಿ ಪ್ರಕ್ರಿಯೆ ಹಳ್ಳ ಹಿಡಿದಿದೆ.ಹೀಗಾಗಿ ಸ್ಥಳೀಯರು ಕಂಡಕಂಡಲ್ಲಿ ಕಸ ಸುರಿಯುತ್ತಿದ್ದಾರೆ. ಗ್ರಾ.ಪಂ ಕಸ ವಿಲೇವಾರಿಗೆ ಕ್ರಮ ಕೈಗೊಂಡಿಲ್ಲ. ಇತ್ತೀಚೆಗೆ ಸುರಿದ ಮಳೆಯಿಂದ ಕಸದ ರಾಶಿ ಸ್ಥಳದಲ್ಲೇ ಕೊಳೆತು ದುರ್ನಾತ ಬೀರುತ್ತಿದೆ.

ರೋಗ ಭೀತಿ: ಕುವೆಂಪು ನಗರದ ಬಳಿ ಎದುರಾಗುವ ದೊಡ್ಡ ಕಸದ ರಾಶಿಯು ಬೆಮಲ್‌ ನಗರದ ನೆನಪು ಮಾಡಿಕೊಡುತ್ತದೆ. ದಾಸರಹೊಸಹಳ್ಳಿ ಪೆಟ್ರೋಲ್ ಬಂಕ್ ಮುಂಭಾಗ, ಆಲದ ಮರದ ಬಳಿ, ಕೋಟಿಲಿಂಗೇಶ್ವರ ದೇವಾಲಯಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ಕಸ ರಾಶಿಯಾಗಿ ಬಿದ್ದಿದೆ. ಕಸದ ರಾಶಿಯಲ್ಲಿನ ಪ್ಲಾಸ್ಟಿಕ್ ಕವರ್‌ಗಳು ಹಾಗೂ ಬ್ಯಾಗ್‌ಗಳು ಗಾಳಿಗೆ ಎಲ್ಲೆಂದರಲ್ಲಿ ಹಾರಾಡುತ್ತಾ ಸಮಸ್ಯೆ ಸೃಷ್ಟಿಸುತ್ತಿವೆ.

ಬಡಾವಣೆಗಳ ಚರಂಡಿಗಳಲ್ಲೂ ಕಸ ತುಂಬಿದೆ. ಕೊಳಚೆ ನೀರಿನ ಹರಿವಿಗೆ ಅಡ್ಡಿಯಾಗಿದೆ. ಸಾಕಷ್ಟು ಕಡೆ ಕೊಳಚೆ ನೀರು ರಸ್ತೆಗೆ ಹರಿಯುತ್ತಿದೆ. ರಸ್ತೆಯಲ್ಲಿ ವಾಹನಗಳು ಸಂಚರಿಸಿದಾಗ ಕೊಳಚೆ ನೀರು ವಾಹನ ಸವಾರರು ಹಾಗೂ ದಾರಿಹೋಕರ ಮೇಲೆ ಸಿಡಿಯುತ್ತಿದೆ. ಚರಂಡಿಗಳನ್ನು ಏಳೆಂಟು ತಿಂಗಳಿಂದ ಸ್ವಚ್ಛಗೊಳಿಸಿಲ್ಲ. ಕಸದ ರಾಶಿ ಹಾಗೂ ಚರಂಡಿ ನೀರಿನಿಂದ ಸೊಳ್ಳೆ, ಬೀದಿ ನಾಯಿ ಹಾಗೂ ಹಂದಿಗಳ ಕಾಟ ಹೆಚ್ಚಿದೆ. ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗ ಭೀತಿ ಮನೆ ಮಾಡಿದೆ.

ಜಾಗದ ಸಮಸ್ಯೆ: ತಾಜ್ಯ ವಿಲೇವಾರಿಗೆ ಜಾಗ ಇಲ್ಲದಿರುವುದೇ ಸಮಸ್ಯೆಗೆ ಮೂಲ ಕಾರಣವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುವ ಕಸವನ್ನು ವಿಲೇವಾರಿ ಮಾಡುವುದು ಗ್ರಾ.ಪಂ ಅಧಿಕಾರಿಗಳಿಗೆ ದೊಡ್ಡ ತಲೆ ನೋವಾಗಿದೆ.

ಬೆಮಲ್‌ ನಗರ ಸಮೀಪದ ಕೃಷ್ಣಾಪುರ, ಮದಿರಪ್ಪ ಪ್ರದೇಶ, ಬಿಜಿಎಂಎಲ್ ಪ್ರದೇಶದಲ್ಲಿ ಕಸ ಕದ್ದುಮುಚ್ಚಿ ರಾತ್ರಿ ವೇಳೆ ಸುರಿಯಲಾಗುತ್ತಿತ್ತು. ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಆ ಭಾಗದಲ್ಲಿ ಕಸ ವಿಲೇವಾರಿ ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ. ಈ ಸ್ಥಳಗಳಿಗೆ ಪರ್ಯಾಯವಾಗಿ ಜಾಗ ಹುಡುಕುವ ಪ್ರಯತ್ನ ನಡೆಯುತ್ತಲೇ ಇದೆ.

ದೊಡ್ಡೂರು ಕರಪನಹಳ್ಳಿ ಪ್ಲಾಂಟೇಶನ್‌ನಲ್ಲಿ 160 ಎಕರೆ ಸರ್ಕಾರಿ ಜಮೀನು ಇದೆ. ಈ ಜಮೀನಿನಲ್ಲಿ 20 ಎಕರೆಯನ್ನು ಘನ ತ್ಯಾಜ್ಯ ನಿರ್ವಹಣಾ ಘಟಕ ಹಾಗೂ ಸ್ಮಶಾನಕ್ಕೆ ನೀಡುವ ಪ್ರಯತ್ನ ನಡೆದಿದೆ. ತಹಶೀಲ್ದಾರ್‌ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹಲವು ಬಾರಿ ಸ್ಥಳ ಪರಿಶೀಲನೆ ಸಹ ನಡೆಸಿದ್ದಾರೆ. ಆದರೆ, ಈವರೆಗೂ ಜಮೀನು ಮಂಜೂರಾಗಿಲ್ಲ. ಹೀಗಾಗಿ ಘನ ತ್ಯಾಜ್ಯ ನಿರ್ವಹಣಾ ಘಟಕದ ಆರಂಭ ತೂಗುಯ್ಯಾಲೆಯಲ್ಲಿದೆ.

ಪೌರ ಕಾರ್ಮಿಕರಿಲ್ಲ: ಕಸ ಸಂಗ್ರಹಣೆ, ವಿಂಗಡಣೆ ಹಾಗೂ ವಿಲೇವಾರಿ ಪ್ರಕ್ರಿಯೆ ಸಂಪೂರ್ಣವಾಗಿ ಪೌರ ಕಾರ್ಮಿಕರನ್ನು ಅವಲಂಬಿಸಿದೆ. ಆದರೆ, ಗ್ರಾ.ಪಂ ವ್ಯಾಪ್ತಿಯ ಜನಸಂಖ್ಯೆಗೆ ಹೋಲಿಸಿದರೆ ಪೌರ ಕಾರ್ಮಿಕರ ಸಂಖ್ಯೆ ಕಡಿಮೆಯಿದೆ. ಹೀಗಾಗಿ ಕಸ ಸಂಗ್ರಹಣೆ ಮತ್ತು ವಿಲೇವಾರಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿಲ್ಲ. ಗ್ರಾ.ಪಂ ಚುನಾಯಿತ ಸದಸ್ಯರು ಆಗಾಗ್ಗೆ ಹೊರಗಿನ ಪೌರ ಕಾರ್ಮಿಕರಿಗೆ ಕೂಲಿ ಕೊಟ್ಟು ಬಡಾವಣೆಗಳಲ್ಲಿನ ಕಸ ತೆರವು ಮಾಡಿಸುತ್ತಿದ್ದಾರೆ.

ಗ್ರಾ.ಪಂನಲ್ಲಿ ಲಭ್ಯವಿರುವ ಪೌರ ಕಾರ್ಮಿಕರ ಪೈಕಿ ಯಾವುದೇ ಕಾರ್ಮಿಕರು ಅನಾರೋಗ್ಯ ಅಥವಾ ವೈಯಕ್ತಿಕ ಕಾರಣಕ್ಕೆ ರಜೆ ಹಾಕಿದರೆ ಕಸದ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತದೆ. ಹೆಚ್ಚಿನ ಪೌರ ಕಾರ್ಮಿಕರ ನೇಮಕಕ್ಕೆ ಚುನಾಯಿತ ಸದಸ್ಯರು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಗ್ರಾ. ಪಂ ವ್ಯಾಪ್ತಿಯಂತೆಯೇ ಬೆಮಲ್ ಪ್ರದೇಶದ ಬಡಾವಣೆಗಳಲ್ಲೂ ಕಸ ವಿಲೇವಾರಿಗೆ
ಸೂಕ್ತ ಜಾಗವಿಲ್ಲ. ಎಚ್ ಆ್ಯಂಡ್ ಪಿ ಪಕ್ಕದಲ್ಲಿರುವ ಮರಗಳ ಮಧ್ಯೆ ಕಸ ಸುರಿಯಲಾಗುತ್ತಿದೆ. ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ
ವಿಘ್ನ ಎದುರಾಗಿದ್ದು, ಕಸದ ಸ್ಥಳೀಯರ ನಿದ್ದೆಗೆಡಿಸಿದೆ.

***

ಮನೆ ಸಮೀಪ ಕಸ ರಾಶಿಯಾಗಿ ಬಿದ್ದಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ಸೊಳ್ಳೆ ಕಾಟ ಹೆಚ್ಚಿದೆ. ಈ ಸಂಬಂಧ ಗ್ರಾಮ ಪಂಚಾಯಿತಿಗೆ ಹಲವು ಬಾರಿ ದೂರು ನೀಡಿದರೂ ಸಮಸ್ಯೆ ಬಗೆಹರಿದಿಲ್ಲ.

- ಶೇಖರಪ್ಪ, ಎಂ.ವಿ ನಗರ ನಿವಾಸಿ

ಪೌರ ಕಾರ್ಮಿಕರು ಮನೆ ಬಳಿ ಬಂದು ಸಂಗ್ರಹಿಸುತ್ತಿಲ್ಲ. ಹೀಗಾಗಿ ಸ್ಥಳೀಯರು ರಸ್ತೆ ಪಕ್ಕ ಅಥವಾ ಖಾಲಿ ನಿವೇಶನಗಳಲ್ಲಿ ಕಸ ಸುರಿಯುತ್ತಿದ್ದಾರೆ. ರಸ್ತೆ ಬದಿಯಲ್ಲಿ ಬಿದ್ದಿರುವ ಕಸವನ್ನು ತೆರವು ಮಾಡಿಲ್ಲ.

-ಎಂ.ಎಲ್.ಬೌನ್ಲ್ಸೆ, ಭಾರತ್ ನಗರ ನಿವಾಸಿ

ಕಸ ವಿಲೇವಾರಿ ಪ್ರಕ್ರಿಯೆ ಸ್ಥಗಿತಗೊಂಡಿರುವುದರಿಂದ ಬಡಾವಣೆ ಕೊಳೆಗೇರಿ ಯಂತಾಗಿದೆ. ಸೊಳ್ಳೆ ಕಾಟದಿಂದ ಹಲವರು ಕಾಯಿಲೆಗೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ. ದುಡಿದ ಹಣವನ್ನೆಲ್ಲಾ ಆಸ್ಪತ್ರೆಗೆ ತೆರುವಂತಾಗಿದೆ.

-ಲಕ್ಷ್ಮಮ್ಮ, ಎಂ.ವಿ ನಗರ ನಿವಾಸಿ

ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸರ್ಕಾರಿ ಜಮೀನು ಕೇಳುತ್ತಿದ್ದೇವೆ. ಆದರೆ, ತಹಶೀಲ್ದಾರ್‌ ಜಮೀನು ಮಂಜೂರು ಮಾಡಲು ಮೀನಮೇಷ ಎಣಿಸುತ್ತಿದ್ದಾರೆ. 19ನೇ ತಾರೀಕಿನೊಳಗೆ ನೀಡದಿದ್ದರೆ ಧರಣಿ ನಡೆಸುತ್ತೇವೆ.

-ಸುರೇಶ್, ದೊಡ್ಡೂರು ಕರಪನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ

ಡಿ.ಕೆ ಹಳ್ಳಿ ಪ್ಲಾಂಟೇಶನ್‌ನಲ್ಲಿ 160 ಎಕರೆ ಸರ್ಕಾರಿ ಜಮೀನಿದೆ. ಆ ಜಾಗ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಪ್ರಶಸ್ತವಾಗಿದೆ. ಆ ಜಾಗ ಮಂಜೂರು ಮಾಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ.

-ವಸಂತಕುಮಾರ್, ದೊಡ್ಡೂರು ಕರಪನಹಳ್ಳಿ
ಗ್ರಾಮ ಪಂಚಾಯಿತಿ ಪಿಡಿಒ

ದೊಡ್ಡೂರು ಕರಪನಹಳ್ಳಿ ಗ್ರಾ.ಪಂನ ಬಹುಭಾಗ ಅರಣ್ಯ ಪ್ರದೇಶದಲ್ಲಿದ್ದು, ಸಾವಿರಾರು ಕೃಷ್ಣಮೃಗಗಳು ವಾಸಿಸುತ್ತಿವೆ. ಬೆಮಲ್ ನಗರದ ಕಸವು ನೀರಿನ ಜೊತೆ ಕೆರೆಗೆ ಹರಿದು ಹೋಗುತ್ತಿದ್ದು, ಕೃಷ್ಣಮೃಗಗಳು ಆ ವಿಷಕಾರಿ ನೀರು ಕುಡಿದು ಸಾಯುತ್ತಿವೆ.

-ರಾಜ, ಪ್ರಾಣಿ ದಯಾ ಸಂಘದ ಸದಸ್ಯ

ಪ್ರತಿಕ್ರಿಯಿಸಿ (+)