ಬುಧವಾರ, ಅಕ್ಟೋಬರ್ 16, 2019
21 °C
ಜಲಶಕ್ತಿ ಅಭಿಯಾನದಲ್ಲಿ ಶಾಸಕ ಶ್ರೀನಿವಾಸಗೌಡ ಹೇಳಿಕೆ

ನೀರು: ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ

Published:
Updated:
Prajavani

ಕೋಲಾರ: ‘ಅವಿಭಜಿತ ಕೋಲಾರ ಜಿಲ್ಲೆಯ ಜನ ನೀರನ್ನು ಮಿತವಾಗಿ ಬಳಸದಿದ್ದರೆ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಎಚ್ಚರಿಕೆ ನೀಡಿದರು.

ಜಿಲ್ಲಾಡಳಿತವು ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಲಶಕ್ತಿ ಅಭಿಯಾನ ಉದ್ಘಾಟಿಸಿ ಮಾತನಾಡಿ, ‘ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಜನ ಈ ಸಮಸ್ಯೆ ಅರಿತು ಹನಿಹನಿ ನೀರನ್ನು ಸಂಗ್ರಹಿಸಬೇಕು’ ಎಂದು ಸಲಹೆ ನೀಡಿದರು.

‘ಈ ಹಿಂದೆ ಸಕಾಲಕ್ಕೆ ಮಳೆಯಾಗುತ್ತಿತ್ತು. ಸಮಾಜ ಬದಲಾದಂತೆ ಪರಿಸರದಲ್ಲೂ ಬದಲಾವಣೆ ಕಾಣಬೇಕಾಯಿತು. ಮನುಷ್ಯ ದುರಾಸೆಯಿಂದ ಅರಣ್ಯ ನಾಶ ಮಾಡಿದ. ಇದರಿಂದ ಮಳೆ ಪ್ರಮಾಣ ಕಡಿಮೆಯಾಗಿ ಬರ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಕಾರಣ ತಿಳಿದು ಸಮಸ್ಯೆ ನಿವಾರಣೆಗೆ ಮುಂದಾಗಬೇಕು’ ಎಂದರು.

‘ನೀರು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿದ್ದಾಗ ರೈತರು ಕಾಲುವೆ ಮೂಲಕ ನೀರು ಹಾಯಿಸಿ ಆಲೂಗಡ್ಡೆ ಬೆಳೆಯುತ್ತಿದ್ದರು. ಈಗ ಆ ಪರಿಸ್ಥಿತಿಯಿಲ್ಲ. ದಿನೇ ದಿನೇ ನೀರಿನ ಸಮಸ್ಯೆ ತೀವ್ರವಾಗುತ್ತಿದೆ. ಸರ್ಕಾರಗಳು ಹನಿ ನೀರಾವರಿ ಪದ್ಧತಿ ಜಾರಿಗೆ ತಂದಿದ್ದು, ರೈತರು ಇದರ ಪ್ರಯೋಜನ ಪಡೆಯಬೇಕು’ ಎಂದು ಕಿವಿಮಾತು ಹೇಳಿದರು.

‘ರೈತರು ಆತುರ ಬಿದ್ದು ವಾಣಿಜ್ಯ ಉದ್ದೇಶಕ್ಕೆ ಜಮೀನು ಮಾರಬಾರದು. ಜಿಲ್ಲೆಗೆ ಕೆ.ಸಿ ವ್ಯಾಲಿ ಯೋಜನೆ ನೀರು ಬಂದಿರುವುದರಿಂದ ಅಂತರ್ಜಲ ಮಟ್ಟ ಸುಧಾರಣೆಯಾಗಿದೆ. ಭವಿಷ್ಯದಲ್ಲಿ ಜಿಲ್ಲೆಯಾದ್ಯಂತ ಕೆರೆಗಳಿಗೆ ನೀರು ಹರಿದರೆ ಸಮಸ್ಯೆ ಬಗೆಹರಿಯುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕ್ಷೇತ್ರದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಮಹಾನುಭವ ಯರಗೋಳ್‌ ಡ್ಯಾಂ ಕಾಮಗಾರಿ ಪೂರ್ಣಗೊಳಿಸಿದ್ದರೆ ನೀರು ಲಭ್ಯವಾಗುತ್ತಿತ್ತು. ಆತನಿಗೆ ರೈತರ ಸಮಸ್ಯೆಯ ಅರಿವಿಲ್ಲದ ಕಾರಣ ಪೈಪ್‌ಲೈನ್ ಕಾಮಗಾರಿ ಮಾಡಿ ಕೈತೊಳೆದುಕೊಂಡ’ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಸಹಕರಿಸಿ: ‘ಜಿಲ್ಲೆಯಲ್ಲಿನ ನೀರಿನ ಸಮಸ್ಯೆ ನೋಡಿದರೆ ಬೇಸರವಾಗುತ್ತದೆ. ಪರಿಸ್ಥಿತಿ ಇದೇ ರೀತಿ ಮುಂದುವರಿಯಬಾರದೆಂದು ಜಲಶಕ್ತಿ ಅಭಿಯಾನ ಆರಂಭಿಸಿದ್ದು, ಅಭಿಯಾನದ ಯಶಸ್ಸಿಗೆ ಪ್ರತಿಯೊಬ್ಬರು ಸಹಕರಿಸಬೇಕು. ಕಟ್ಟಡ ಮಾಲೀಕರು ಕಡ್ಡಾಯವಾಗಿ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮನವಿ ಮಾಡಿದರು.

‘ಜಲಶಕ್ತಿ ಅಭಿಯಾನದಲ್ಲಿ ಮುಖ್ಯವಾಗಿ ಮಳೆ ಕೊಯ್ಲು ಪದ್ಧತಿಗೆ ಆದ್ಯತೆ ನೀಡಬೇಕು. ಮಳೆ ನೀರನ್ನು ಸಂಗ್ರಹಣೆ ಜತೆಗೆ ಅಂತರ್ಜಲ ವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 3 ಕೊಳವೆ ಬಾವಿ ಕೊರೆಸಿದರೆ ಒಂದು ವಿಫಲವಾಗುತ್ತಿದೆ. ಈ ಭಾಗದಲ್ಲಿ ಬರ ಇರುವುದರಿಂದ ಶೇ 55ರಷ್ಟು ಕೊಳವೆ ಬಾವಿಗಳು ವಿಫಲವಾಗುತ್ತಿವೆ’ ಎಂದು ವಿವರಿಸಿದರು.

ಅರಣ್ಯ ರಕ್ಷಿಸಿ: ‘ಚಿತ್ರದುರ್ಗ ಮತ್ತು ಕೋಲಾರ ಜಿಲ್ಲೆಯ ನೀರಿನ ಸಮಸ್ಯೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಅರಣ್ಯ ನಾಶವೇ ನೀರಿನ ಸಮಸ್ಯೆಗೆ ಮೂಲ ಕಾರಣ. ಸಾರ್ವಜನಿಕರು ಇನ್ನಾದರೂ ಜಾಗೃತರಾಗಿ ಅರಣ್ಯ ಸಂಪತ್ತು ರಕ್ಷಣೆ ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ವಿ.ದರ್ಶನ್‌ ಹೇಳಿದರು.

‘ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದರೂ ಕೆಲ ತಿಂಗಳು ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿತ್ತು. ವಾಣಿಜ್ಯ ಉದ್ದೇಶಕ್ಕೆ ಅರಣ್ಯ ಪ್ರದೇಶದಲ್ಲಿನ ಮರ ಕಡಿದಿದ್ದರಿಂದ ನೀರು ಸಂಗ್ರಹಿಸಿಕೊಳ್ಳಲು ಆಗಲಿಲ್ಲ. ಸಮಸ್ಯೆ ಎದುರಾಗುವ ಮೊದಲೇ ತೊಂದರೆ ಮಾಡಿಕೊಳ್ಳಲು ಹೋಗಬಾರದು’ ಎಂದು ಕಿವಿಮಾತು ಹೇಳಿದರು.

ತೋಟಗಾರಿಕೆ ಇಲಾಖೆ ನಿವೃತ್ತ ಹೆಚ್ಚುವರಿ ನಿರ್ದೇಶಕ ಎಸ್‌.ವಿ.ಹಿತ್ತಲಮನಿ ನೀರಿನ ಮಹತ್ವ ಹಾಗೂ ಸದ್ಭಳಕೆ ಕುರಿತು ಉಪನ್ಯಾಸ ನೀಡಿದರು. ಎಪಿಎಂಸಿ ಅಧ್ಯಕ್ಷ ಡಿ.ಎಲ್.ನಾಗರಾಜ್, ತೋಟಗಾರಿಕೆ ಮಹಾವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯ ಮಂಜುನಾಥ್‌ಗೌಡ, ಡೀನ್ ಬಿ.ಜಿ.ಪ್ರಕಾಶ್, ಸಹ ವಿಸ್ತರಣಾ ನಿರ್ದೇಶಕ ಟಿ.ಬಿ.ಬಸವರಾಜು, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಗಾಯಿತ್ರಿ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಕೆ.ಎಂ.ಪ್ರಭಾರ್, ವಿಜ್ಞಾನಿಗಳಾದ ಕೆ.ತುಳಸಿರಾಮ್, ಅನಿಲ್‌ಕುಮಾರ್ ಹಾಜರಿದ್ದರು.

Post Comments (+)