ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೋಲಾಗದಂತೆ ಹಂಚಿಕೆ ಮಾಡಬೇಕು

ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಸೂಚನೆ
Last Updated 1 ಜುಲೈ 2019, 15:22 IST
ಅಕ್ಷರ ಗಾತ್ರ

ಕೋಲಾರ: ‘ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರ ವಿವಿಧ ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದ್ದು, ನೀರು ಪೋಲಾಗದಂತೆ ಹಂಚಿಕೆ ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಗಂಣದಲ್ಲಿ ಜಲಧಾರೆ ಯೋಜನೆ ಅನುಷ್ಠಾನ ಕುರಿತು ಅಧಿಕಾರಿಗಳ ಜತೆಗೆ ಸಭೆ ನಡೆಸಿದರು.
‘ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ರೂಪಿಸಿರುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಅದೇ ರೀತಿ, ನೀರಿನ ಹಂಚಿಕೆ ಮಾಡಬೇಕಾದ ಜವಾಬ್ದಾರಿ ಅಧಿಕಾರಿಗಳ ಮೇಲಿದೆ’ ಎಂದು ಹೇಳಿದರು.

‘ಜಿಲ್ಲೆಗೆ ಕುಡಿಯುವ ನೀರಿಗಾಗಿ ಯರಗೋಳ ಹಾಗೂ ಎತ್ತಿನಹೊಳೆ ಯೋಜನೆ ಅನುಷ್ಠಾನಗೊಂಡಿದ್ದು, ಎರಡೂ ಯೋಜನೆಗಳ ಕಾಮಗಾರಿ ಪ್ರಗತಿಯಲಿದೆ. ಇದರಿಂದ ಜಿಲ್ಲೆಯ ಕೆಲ ದೊಡ್ಡ ಕೆರೆಗಳಿಗೆ ನೀರು ಹರಿಸಿಕೊಳ್ಳುವ ಮೂಲಕ ಸಮಸ್ಯೆಯಿರುವ ಗ್ರಾಮ, ಪಟ್ಟಣ, ನಗರಗಳಿಗೆ ಆದ್ಯತೆ ಮೇರೆಗೆ ನೀರನ್ನು ಹರಿಸಲಾಗುವುದು' ಎಂದು ಹೇಳಿದರು.

‘ಎತ್ತಿನಹೊಳೆ ಯೋಜನೆಯಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರು ಹರಿಸಲಾಗುವುದು. ಅದೇ ರೀತಿ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳ 136 ಕೆರೆಗಳಿಗೆ ನೀರನ್ನು ಬಿಡಲಾಗುತ್ತದೆ. ಯರಗೋಳ ಯೋಜನೆಯಿಂದಲೂ ಜಿಲ್ಲೆಯ ಮೂರು ತಾಲ್ಲೂಕುಗಳಿಗೆ ನೀರು ಹರಿಸಲು ಕ್ರಮಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಕೆಜಿಎಫ್ ಶಾಸಕಿ ರೂಪಾ ಶಶಿಧರ್ ಮಾತನಾಡಿ, ‘ಕೆಜಿಎಫ್‌ ನಗರಕ್ಕೆ ಬೇತಮಂಗಲ ಕೆರೆಯಿಂದ ನೀರು ಹರಿಯುತಿತ್ತು. ಈ ನೀರನ್ನು ಗ್ರಾಮೀಣ ಭಾಗಕ್ಕೂ ವಿಸ್ತರಿಸಬೇಕು. ಎತ್ತಿನಹೊಳೆ ಯೋಜನೆಯ ನೀರನ್ನು ಹರಿಸಬೇಕು’ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣಬೈರೇಗೌಡ, ‘ಯೋಜನೆಯನ್ನು ಅಂತಿಮಗೊಳಿಸಿಲ್ಲ. ಏನಾದರೂ ಬದಲಾವಣೆಗಳು ಇದ್ದಲ್ಲಿ ಚರ್ಚಿಸಿ, ಕ್ರಮಕೈಗೊಳ್ಳಲಾಗುವುದು’ ಎಂದರು.

ಯೋಜನೆ ಅಂತಿಮಗೊಂಡಿಲ್ಲ:‘ಎತ್ತಿನಹೊಳೆ ಯೋಜನೆಯಡಿ ಕೆರೆಗಳ ಪುನಶ್ಚೇತನಕ್ಕೆ ಸರ್ಕಾರವು ₹100 ಕೋಟಿ ಬಿಡುಗಡೆ ಮಾಡಿದೆ. ಜಲಧಾರೆ ಯೋಜನೆ ಇನ್ನು ಅಂತಿಮಗೊಂಡಿಲ್ಲ. ಸದನದ ಅನುಮೋದನೆ ಸಿಕ್ಕಿದ ಕೂಡಲೇ ಡಿಸೆಂಬರ್ ಅಂತ್ಯದೊಳಗೆ ಟೆಂಡರ್ ಕರೆಯಲಾಗುವುದು’ ಎಂದು ತಿಳಿಸಿದರು.

ಮಾಲೂರು ಶಾಸಕ ಕೆ.ವೈ. ನಂಜೇಗೌಡ ಮಾತನಾಡಿ, ‘ಇತ್ತೀಚೆಗೆ ನರಸಾಪುರ ಕೆರೆಯಿಂದ ಮಾಲೂರು ತಾಲ್ಲೂಕಿನ ಶಿವಾರಪಟ್ಟಣ ಕೆರೆಗೆ ನೀರು ಪಂಪು ಮಾಡುವುದಕ್ಕೆ ಚಾಲನೆ ನೀಡಲಾಯಿತು. ಈಗ ನಿಲ್ಲಿಸಿರುವುದರಿಂದ ಜನರಿಗೆ ತಪ್ಪು ಮಾಹಿತಿ ಹೋಗಿದೆ. ಕೋಲಾರ ಕೆರೆಗಳು ಮಾತ್ರ ತುಂಬಿದರೆ ಸಾಕೇ, ಬೇರೆ ತಾಲ್ಲೂಕಿನ ಕೆರೆಗಳು ತುಂಬುದುವುದು ಬೇಡವೇ ಎಂದು ಪ್ರಶ್ನಿಸುತ್ತಿದ್ದಾರೆ’ ಎಂದರು.
ಇದಕ್ಕೆ ಉತ್ತರಿಸಿದ ಸಚಿವರು, ‘ಕೆಸಿ ವ್ಯಾಲಿ ಯೋಜನೆಯಿಂದ ಹೆಚ್ಚುವರಿಯಾಗಿ ಹತ್ತು ದಿನದಲ್ಲಿ ನೀರು ಹರಿಯಲಿದೆ. ಅಗ ಮಾಲೂರಿನ ಕೆರೆಗಳಿಗೂ ಪಂಪ್‌ ಆಗುತ್ತದೆ. ಇದರ ಬಗ್ಗೆ ಯಾವುದೇ ಅನುಮಾನ ಬೇಡ’ ಎಂದು ಮನವಿ ಮಾಡಿದರು.

‘ಕೆಸಿ ವ್ಯಾಲಿ ಯೋಜನೆ ನೀರು ಲಕ್ಷ್ಮೀಸಾಗರ ಕೆರೆಗೆ ಪಂಪ್‌ ಆಗಿ, ರಾಜಕಾಲುವೆ ಮೂಲಕ ಕೆರೆಗಳಿಗೆ ಹರಿಯುತ್ತದೆ. ಎರಡೂ ಯೋಜನೆಯ ನೀರು ಕಲುಷಿತಗೊಳ್ಳದಂತೆ ಎಚ್ಚರವಹಿಸಬೇಕು. ಯರಗೋಳ ಯೋಜನೆ ನೀರು ವರ್ಷ ಪೂರ್ತಿ ನೀರು ಲಭ್ಯವಾಗುವುದಿಲ್ಲ. ಎತ್ತಿನಹೊಳೆ ಯೋಜನೆಯಿಂದ ನೀರನ್ನು ಬೈರಗುಂಡ್ಲುಗೆ ಎತ್ತುವಳಿ ಮಾಡಿಕೊಂಡು ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೇರವಾಗಿ ಹರಿಸಲಾಗುವುದು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಜೆ. ಮಂಜುನಾಥ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಜಗದೀಶ್, ವಿಧಾನಪರಿಷತ್ ಸದ್ಯರ ಚೌಡರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT