ನೀರು ಸಮಸ್ಯೆ: ದೂರು ಬರದಂತೆ ಎಚ್ಚರ ವಹಿಸಿ: ಡಿಸಿ ಮಂಜುನಾಥ್‌ ಖಡಕ್‌ ಸೂಚನೆ

ಗುರುವಾರ , ಏಪ್ರಿಲ್ 25, 2019
21 °C

ನೀರು ಸಮಸ್ಯೆ: ದೂರು ಬರದಂತೆ ಎಚ್ಚರ ವಹಿಸಿ: ಡಿಸಿ ಮಂಜುನಾಥ್‌ ಖಡಕ್‌ ಸೂಚನೆ

Published:
Updated:
Prajavani

ಕೋಲಾರ: ‘ನಗರದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದ್ದು, ಸಮಸ್ಯೆ ಪರಿಹಾರಕ್ಕೆ ಸಾರ್ವಜನಿಕರಿಂದ ಸಾಕಷ್ಟು ಅರ್ಜಿ ಬಂದಿವೆ. ನೀರು ಬಿಡಲು ವಾಲ್‌ಮನ್‌ಗಳು ಜನರಿಂದ ಹಣ ಕೇಳಿದರೆ ಕೆಲಸದಿಂದ ಅಮಾನತು ಮಾಡಿ ಶಾಶ್ವತವಾಗಿ ಮನೆಗೆ ಕಳುಹಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಖಡಕ್‌ ಎಚ್ಚರಿಕೆ ನೀಡಿದರು.

ನೀರಿನ ಸಮಸ್ಯೆ ಸಂಬಂಧ ಇಲ್ಲಿನ ನಗರಸಭೆಯಲ್ಲಿ ಬುಧವಾರ ಸಾರ್ವಜನಿಕರು ಮತ್ತು ವಾಲ್‌ಮನ್‌ಗಳ ಜತೆ ನಡೆದ ಸಭೆಯಲ್ಲಿ ಮಾತನಾಡಿ, ‘ವಾಲ್‌ಮನ್‌ಗಳು ಸಮರ್ಪಕವಾಗಿ ನೀರು ಪೂರೈಸದ ಬಗ್ಗೆ ದೂರು ಬಂದಿವೆ. ಇನ್ನು ಮುಂದೆ ದೂರು ಬರದಂತೆ ಎಚ್ಚರ ವಹಿಸಿ’ ಎಂದು ತಾಕೀತು ಮಾಡಿದರು.

‘ನಗರಸಭೆ ವಾಪ್ತಿಯಲ್ಲಿ 35 ವಾರ್ಡ್‌ಗಳಿದ್ದು, ಸಮಸ್ಯಾತ್ಮಕ ಬಡಾವಣೆಗಳನ್ನು ಗುರುತಿಸಿ ನೀರು ಸರಬರಾಜು ಮಾಡಬೇಕು ಎಂಜಿನಿಯರ್‌ಗಳು ಪ್ರತಿ ವಾರ್ಡಿಗೂ ಭೇಟಿ ನೀಡಿ ನೀರಿನ ಸಮಸ್ಯೆ ಬಗ್ಗೆ ಪ್ರತಿನಿತ್ಯ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದರು.

ವಾರ್ಡ್‌ಗಳಲ್ಲಿ ಎಷ್ಟು ಕೊಳವೆ ಬಾವಿಗಳಿವೆ, ಎಷ್ಟರಲ್ಲಿ ನೀರಿದೆ ಮತ್ತು ಎಷ್ಟರಲ್ಲಿ ನೀರು ಬತ್ತಿದೆ ಎಂಬ ಬಗ್ಗೆ ವಾಲ್‌ಮನ್‌ಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ, ‘ಜನರಿಗೆ ಸಮಸ್ಯೆ ಆಗದಂತೆ ನೀರು ಪೂರೈಸುವ ಜವಾಬ್ದಾರಿ ವಾಲ್‌ಮನ್‌ಗಳ ಮೇಲಿದೆ. ಕೊಳವೆ ಬಾವಿಯಲ್ಲಿ ನೀರು ಬತ್ತಿದರೆ ಹೊಸ ಕೊಳವೆ ಬಾವಿ ಕೊರೆಸಲು ಅಥವಾ ಟ್ಯಾಂಕರ್ ಮೂಲಕ ನೀರು ಕೊಡಲು ತೀರ್ಮಾನಿಸುತ್ತೇವೆ. ಕೊಳವೆ ಬಾವಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು’ ಎಂದು ತಿಳಿಸಿದರು.

340 ಕೊಳವೆ ಬಾವಿ: ‘ನಗರದಲ್ಲಿ ಸದ್ಯ 340 ಕೊಳವೆ ಬಾವಿಗಳಿವೆ. ಈ ಪೈಕಿ 198 ಕಾರ್ಯ ನಿರ್ವಹಿಸುತ್ತಿವೆ. 69 ಕೊಳವೆ ಬಾವಿ ದುರಸ್ತಿಯಾಗಬೇಕು. ಉಳಿದ 79 ಕೊಳವೆ ಬಾವಿಗಳಲ್ಲಿ ನೀರು ಬತ್ತಿದೆ’ ಎಂದು ನಗರಸಭೆ ಆಯುಕ್ತ ಸತ್ಯನಾರಾಯಣ್ ಮಾಹಿತಿ ನೀಡಿದರು.

‘ಸದ್ಯ ನಗರಸಭೆಯ 9 ಟ್ಯಾಂಕರ್‌ಗಳಿಗೆ ನೀರು ಕೊಡಲಾಗುತ್ತಿದೆ. ಸಮಸ್ಯಾತ್ಮಕ ವಾರ್ಡ್‌ಗಳಿಗೆ 15 ಖಾಸಗಿ ಟ್ಯಾಂಕರ್‌ಗಳ ಮೂಲಕ ಪ್ರತಿನಿತ್ಯ ತಲಾ 5 ಟ್ಯಾಂಕರ್ ಲೋಡ್ ನೀರು ಸರಬರಾಜು ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಪ್ರತಿ ಟ್ಯಾಂಕರ್‌ಗೂ ಕಡ್ಡಾಯವಾಗಿ ಜಿಪಿಎಸ್ ಉಪಕರಣ ಅಳವಡಿಸಬೇಕು. ಮಾಲೀಕರು ನಕಲಿ ಬಿಲ್ ನೀಡಿದರೆ ಶಿಸ್ತುಕ್ರಮ ಜರುಗಿಸಿ’ ಎಂದು ಆದೇಶಿಸಿದರು.

ಗಂಭೀರ ಪರಿಣಾಮ: ‘ಪ್ರತಿ ಟ್ಯಾಂಕರ್‌ ಲೋಡ್‌ ನೀರಿಗೆ ₹ 525 ಪಾವತಿಸಲಾಗುತ್ತಿದೆ. 15 ದಿನಕ್ಕೊಮ್ಮೆ ಬಿಲ್ ಸಲ್ಲಿಸಿದರೆ ಮಾತ್ರ ಹಣ ಬಿಡುಗಡೆ ಮಾಡುತ್ತೇವೆ. ನೀರು ತುಂಬಿಸುವ ಮತ್ತು ಯಾವ ವಾರ್ಡ್‌ಗೆ ನೀರು ಪೂರೈಕೆಯಾಗುತ್ತಿದೆ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲನೆ ಮಾಡಬೇಕು. ನೀರು ಸೋರಿಕೆಯಾದರೆ ಎಲ್ಲರೂ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘15 ಖಾಸಗಿ ಟ್ಯಾಂಕರ್‌ ಮಾಲೀಕರಿಗೆ ನಗರಸಭೆಯಿಂದ ಬಿಲ್ ಕೊಡುತ್ತಿಲ್ಲ. ಸಿಎಸ್‍ಆರ್ ಅಡಿ ಬಿಲ್ ನೀಡಲಾಗುವುದು. ಮಾಲೀಕರ ಮನವಿ ಮೇರೆಗೆ ಮುಂಗಡ ₹ 20 ಸಾವಿರ ಕೊಟ್ಟಿದ್ದೇವೆ. ಈ ಹಣವನ್ನು ಬಿಲ್‌ನಲ್ಲಿ ಕಡಿತಗೊಳಿಸಲಾಗುವುದು. 2016–17ನೇ ಸಾಲಿನ ನೀರು ಪೂರೈಕೆಯ ಬಿಲ್ ಬಾಕಿಯಿದ್ದು, ಅದನ್ನು ಬಿಡುಗಡೆ ಮಾಡುವಂತೆ ಟ್ಯಾಂಕರ್‌ ಮಾಲೀಕರು ಕೋರಿದ್ದಾರೆ. ಆದರೆ, ಬಿಲ್‌ ನಿರ್ವಹಣೆ ಮತ್ತು ನೀರು ಪೂರೈಕೆ ಪ್ರಕ್ರಿಯೆಯಲ್ಲಿ ಲೋಪವಾಗಿದೆ. ಹೀಗಾಗಿ ಬಿಲ್‌ ತಡೆ ಹಿಡಿಯಲಾಗಿದೆ’ ಎಂದು ವಿವರಿಸಿದರು.

ವೇತನ ಪಾವತಿಸಿಲ್ಲ: ‘ಗುತ್ತಿಗೆದಾರರು ಹಲವು ವರ್ಷದಿಂದ ವೇತನ ಪಾವತಿಸಿಲ್ಲ. ಈ ಸಂಗತಿಯನ್ನು ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ವಾಲ್‌ಮನ್‌ಗಳು ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ವೇತನ ಬಾಕಿ ಸಂಬಂಧ ಗುತ್ತಿಗೆದಾರರಿಂದ ಮಾಹಿತಿ ಪಡೆದರು.

‘ನನ್ನ ವ್ಯಾಪ್ತಿಯಲ್ಲಿ 11 ಮಂದಿ ವಾಲ್‌ಮನ್‌ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ನನ್ನ ಗುತ್ತಿಗೆ ಅವಧಿ 2018ರ ಸೆಪ್ಟೆಂಬರ್‌ ತಿಂಗಳಿಗೆ ಮುಗಿದಿದೆ. ಆವರೆಗೆ ವೇತನ ಪಾವತಿಸಿದ್ದೇನೆ. ನಂತರದ ತಿಂಗಳುಗಳ ವೇತನದ ಬಗ್ಗೆ ನನಗೆ ಗೊತ್ತಿಲ್ಲ’ ಎಂದು ಗುತ್ತಿಗೆದಾರ ರಾಮಯ್ಯ ತಿಳಿಸಿದರು.

‘ನಗರಸಭೆ ವ್ಯಾಪ್ತಿಯಲ್ಲಿ 31 ವಾಲ್‌ಮನ್‌ಗಳಿದ್ದಾರೆ. ಈ ಪೈಕಿ 4 ಮಂದಿ ಕಾಯಂ, 8 ಮಂದಿ ದಿನಗೂಲಿ, 11 ಮಂದಿ ಹೊರ ಗುತ್ತಿಗೆ, 8 ಮಂದಿ ಸಮಾನ ವೇತನ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹೊಸದಾಗಿ ಟೆಂಡರ್‌ ನಡೆಸದೆ ವಾಲ್‌ಮನ್‌ಗಳ ಗುತ್ತಿಗೆದಾರರ ಟೆಂಡರ್‌ ಅವಧಿ ಮುಂದುವರಿಸಲಾಗಿದೆ’ ಎಂದು ನಗರಸಭೆ ಎಂಜಿನಿಯರ್ ಪೂಜರಾಪ್ಪ ಹೇಳಿದರು.

ಆಗ ಜಿಲ್ಲಾಧಿಕಾರಿ ಗುತ್ತಿಗೆದಾರರ ಟೆಂಡರ್‌ ಮುಂದುವರಿಕೆಗೆ ಸಂಬಂಧಿಸಿದ ದಾಖಲೆಪತ್ರ ಪರಿಶೀಲಿಸಿ, ‘ವಾಲ್‌ಮನ್‌ಗಳಿಗೆ ಪಿಂಚಣಿ ಪಾವತಿಸಿಲ್ಲ. ವರ್ಷಗಟ್ಟಲೇ ವೇತನ ಬಾಕಿ ಉಳಿಸಿಕೊಂಡರೆ ಅವರು ಜೀವನ ಮಾಡುವುದು ಹೇಗೆ?’ ಎಂದು ಗುತ್ತಿಗೆದಾರ ರಾಮಯ್ಯರನ್ನು ತರಾಟೆಗೆ ತೆಗೆದುಕೊಂಡು. ಅಲ್ಲದೇ, ಶೀಘ್ರವೇ ಬಾಕಿ ವೇತನ ಪಾವತಿಸುವಂತೆ ಸೂಚಿಸಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !