ಶುಕ್ರವಾರ, ಏಪ್ರಿಲ್ 3, 2020
19 °C
ಸಭೆಯಲ್ಲಿ ಅಧಿಕಾರಿಗಳಿಗೆ ತಾ.ಪಂ ಅಧ್ಯಕ್ಷ ಆಂಜಿನಪ್ಪ ಸೂಚನೆ

ನೀರಿನ ಸಮಸ್ಯೆ: ಎಚ್ಚರ ವಹಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಬೇಸಿಗೆಗಾಲ ಆರಂಭವಾಗಿದ್ದು, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಿ. ನೀರಿನ ಸಮಸ್ಯೆ ಸಂಬಂಧ ದೂರು ಬಂದರೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಎಚ್ಚರಿಕೆ ನೀಡಿದರು.

ಇಲ್ಲಿ ಬುಧವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಬೇಸಿಗೆ ಆರಂಭಕ್ಕೂ ಮುನ್ನವೇ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಎಂಜಿನಿಯರ್‌ಗಳು ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು’ ಎಂದು ಸೂಚಿಸಿದರು.

‘ತಾಲ್ಲೂಕಿನ 5 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಈ ಪೈಕಿ 2 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಯಿಂದ ಹಾಗೂ 3 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್‌ ಶ್ರೀನಿವಾಸ್ ವಿವರಿಸಿದರು.

‘ಗ್ರಾಮಗಳಲ್ಲಿ ಕುಡಿಯುವ ನೀರಿನ ಲಭ್ಯತೆ ಬಗ್ಗೆ ವಾರಕ್ಕೊಮ್ಮೆ ವರದಿ ಪಡೆಯಲಾಗುತ್ತಿದೆ. ಈವರೆಗೆ 110 ಕೊಳವೆ ಬಾವಿ ಕೊರೆಸಲಾಗಿದ್ದು, ಈ ಪೈಕಿ 70 ಕೊಳವೆ ಬಾವಿಗಳಲ್ಲಿ ನೀರು ಸಿಕ್ಕಿದೆ. ಈ ಕೊಳವೆ ಬಾವಿಗಳು ಕಾರ್ಯ ನಿರ್ವಹಿಸುತ್ತಿವೆ’ ಎಂದು ಮಾಹಿತಿ ನೀಡಿದರು.

ಆಗ ಮಧ್ಯ ಪ್ರವೇಶಿಸಿದ ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ‘ಅಧಿಕಾರಿಗಳು ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಪಾಠ ಹೇಳುವಂತೆ ಸುಳ್ಳು ಮಾಹಿತಿ ಕೊಟ್ಟು ಹೋದರೆ ಸಾಲದು. ನಿಖರ ಮಾಹಿತಿ ನೀಡಬೇಕು. ದಿಕ್ಕು ತಪ್ಪಿಸುವ ಉತ್ತರ ನೀಡಿದರೆ ಇಲ್ಲಿ ಯಾರೂ ಯಾಮಾರುವುದಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

ಅನುದಾನ ಬಿಡುಗಡೆಯಾಗಿಲ್ಲ: ‘ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಮತ್ತು ಗಿರಿಜನ ಉಪ ಯೋಜನೆಯ (ಟಿಎಸ್‌ಪಿ) ₹ 2 ಲಕ್ಷ ಅನುದಾನ ಬಿಡುಗಡೆಯಾಗಿಲ್ಲ. ಮಾರ್ಚ್‌ ಅಂತ್ಯದೊಳಗೆ ಅನುದಾನ ಬಳಕೆ ಮಾಡದಿದ್ದರೆ ಸರ್ಕಾರಕ್ಕೆ ವಾಪಸ್ ಹೋಗುತ್ತದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಾ.ಪಂ ಅಧ್ಯಕ್ಷರು, ‘ಪ್ರತಿ ಇಲಾಖೆಯಲ್ಲೂ ಎಸ್‌ಸಿಪಿ, ಟಿಎಸ್‌ಪಿ ಅನುದಾನ ಬಿಡುಗಡೆಯಾಗಿಲ್ಲ. ಶೀಘ್ರವೇ ಅನುದಾನ ಬಿಡುಗಡೆ ಮಾಡಿಸಿಕೊಂಡು ಬಳಕೆ ಮಾಡಬೇಕು. ಅನುದಾನ ಬಳಕೆಯಾಗದೆ ಸರ್ಕಾರಕ್ಕೆ ವಾಪಸ್ ಹೋದರೆ ಅಧಿಕಾರಿಗಳೇ ಹೊಣೆ’ ಎಂದು ಎಚ್ಚರಿಕೆ ನೀಡಿದರು.

ಮಾಹಿತಿ ನೀಡಿ: ‘ಜಿಲ್ಲೆಯ ಇತರೆ ತಾಲ್ಲೂಕುಗಳಿಗೆ ಹೋಲಿಸಿದರೆ ಕೋಲಾರ ತಾಲ್ಲೂಕಿನಲ್ಲಿ ರೇಷ್ಮೆ ಬೆಳೆಗಾರರ ಸಂಖ್ಯೆ ಹೆಚ್ಚಿದೆ. ದ್ವಿತಳಿ ರೇಷ್ಮೆ ಉತ್ಪಾದನೆ ಹೆಚ್ಚಿಸಲು ರೈತರಿಗೆ ತರಬೇತಿ ನೀಡಲಾಗುತ್ತಿದೆ. ಇತರೆ ಇಲಾಖೆ ಅಧಿಕಾರಿಗಳು ದ್ವಿತಳಿ ಗೂಡಿನ ಉತ್ಪಾದನೆ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು’ ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಮನವಿ ಮಾಡಿದರು.

‘ಚೀನಾ ರೇಷ್ಮೆ ಆಮದು ನಿಯಂತ್ರಿಸುವ ನಿಟ್ಟಿನಲ್ಲಿ ದೇಶದಲ್ಲಿ ರೈತರು ದ್ವಿತಳಿ ರೇಷ್ಮೆ ಉತ್ಪಾದಿಸಲು ಮುಂದಾಗಿದ್ದಾರೆ. ಹೆಚ್ಚು ಬೇಡಿಕೆಯಿರುವ ದ್ವಿತಳಿ ರೇಷ್ಮೆ ಉತ್ಪಾದನೆಯಿಂದ ರೈತರು ಆರ್ಥಿಕವಾಗಿ ಹೆಚ್ಚು ಆದಾಯ ಗಳಿಸಬಹುದು. ವಿವಿಧ ಯೋಜನೆಗಳಡಿ ಅನುದಾನ ಬಾಕಿ ಉಳಿದುಕೊಂಡಿದ್ದು, ಸರ್ಕಾರದಿಂದ ಬಿಡುಗಡೆ ಮಾಡಿಸಬೇಕು’ ಎಂದು ತಿಳಿಸಿದರು.

‘ಭೂ ಅಭಿವೃದ್ಧಿ ನಿಗಮಕ್ಕೆ ಅನೇಕ ಕಾಮಗಾರಿ ವಹಿಸಲಾಗಿದೆ. ಆದರೆ, ನಿಗಮದ ಅಧಿಕಾರಿಗಳು ಈವರೆಗೂ ಕೆಲಸ ಆರಂಭಿಸಿಲ್ಲ. ಅಧಿಕಾರಿಗಳು ಸಭೆಗೂ ಬರುವುದಿಲ್ಲ. ಅವರಿಗೆ ನೋಟಿಸ್ ಜಾರಿ ಮಾಡಿ’ ಎಂದು ಅಧ್ಯಕ್ಷರು ತಾ.ಪಂ ಕಾರ್ಯ ನಿರ್ವಹಣಾಧಿಕಾರಿಗೆ ಆದೇಶಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು