ನೀರಿನ ಸಮಸ್ಯೆ: ಕೋತಿ ಸಾವು

ಮಂಗಳವಾರ, ಏಪ್ರಿಲ್ 23, 2019
27 °C

ನೀರಿನ ಸಮಸ್ಯೆ: ಕೋತಿ ಸಾವು

Published:
Updated:

ಕೋಲಾರ: ನಗರದ ಹೊರವಲಯದ ಅಂತರಗಂಗೆ ಬೆಟ್ಟದಲ್ಲಿ ಕಾಡು ಪ್ರಾಣಿಗಳಿಗೆ ನೀರಿನ ಸಮಸ್ಯೆ ಎದುರಾಗಿದ್ದು, ಸೋಮವಾರ ಕೋತಿಯೊಂದು ನೀರಿನ ಬವಣೆಯಿಂದ ಮೃತಪಟ್ಟಿದೆ.

ಬೇಸಿಗೆ ಹಿನ್ನೆಲೆಯಲ್ಲಿ ಬೆಟ್ಟದಲ್ಲಿ ದಿನೇದಿನೇ ನೀರಿನ ಸಮಸ್ಯೆ ಗಂಭೀರವಾಗುತ್ತಿದ್ದು, ಎರಡು ವಾರಗಳಲ್ಲಿ ಸುಮಾರು 10 ಕೋತಿಗಳು ಮೃತಪಟ್ಟಿವೆ. ಮತ್ತೊಂದೆಡೆ ನೀರು, ಆಹಾರ ಅರಸಿ ಬೆಟ್ಟದಿಂದ ನಾಡಿಗೆ ಬರುವ ಪ್ರಾಣಿಗಳು ಆಕಸ್ಮಿಕವಾಗಿ ವಾಹನಗಳಿಗೆ ಸಿಲುಕಿ ಮೃತಪಡುತ್ತಿವೆ. ನಗರ ಪ್ರವೇಶಿಸುವ ಕೋತಿ, ಜಿಂಕೆಗಳನ್ನು ನಾಯಿಗಳು ಹಿಡಿದು ತಿನ್ನುತ್ತಿವೆ.

ಬೆಟ್ಟದಲ್ಲಿನ ಕಾಶಿ ವಿಶ್ವೇಶ್ವರಸ್ವಾಮಿ ದೇವಾಲಯಕ್ಕೆ ಬರುವ ಭಕ್ತರು ಕೋತಿಗಳಿಗೆ ಬಿಸ್ಕತ್, ಪುರಿ, ಬಾಳೆಹಣ್ಣು ಸೇರಿದಂತೆ ವಿವಿಧ ರೀತಿಯ ತಿಂಡಿ ತಿನಿಸು ಕೊಡುತ್ತಿದ್ದರು. ಆದರೆ, ಬಿಸಿಲ ತಾಪ ಹೆಚ್ಚಾಗಿರುವುದರಿಂದ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಕೋತಿಗಳಿಗೆ ಆಹಾರ ಮತ್ತು ನೀರು ಸಿಗದೆ ಮೃತಪಡುತ್ತಿವೆ.

ನಗರದಿಂದ ದೇವಾಲಯದವರೆಗೆ ಪೈಪ್‌ ಮೂಲಕ ನೀರಿನ ಸೌಕರ್ಯ ಕಲ್ಪಿಸಲಾಗಿದೆ. ಆದರೆ, ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ದೇವಾಲಯದ ಕಲ್ಯಾಣಿಯಲ್ಲಿ ಅಲ್ಪ ಸ್ವಲ್ಪ ನೀರಿದ್ದರೂ ಕುಡಿಯುಲು ವ್ಯವಸ್ಥೆಯಿಲ್ಲ. ನಲ್ಲಿಗಳಲ್ಲಿ ಸೋರಿಕೆಯಾಗುತ್ತಿರುವ ನೀರು ಕುಡಿಯಲು ಕೋತಿಗಳು ಹರಸಾಹಸ ಪಡುತ್ತಿವೆ.

‘ನೀರು ಹಾಗೂ ಆಹಾರ ಕೊರತೆಯಿಂದ ಕೋತಿಗಳು ಸಂಕಷ್ಟಕ್ಕೆ ಸಿಲುಕಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಬೆಟ್ಟದಲ್ಲಿ ಕೋತಿಗಳಿಗೆ ನೀರಿನ ಸೌಕರ್ಯ ಕಲ್ಪಿಸಬೇಕು’ ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.

ಅಗ್ನಿ ಅನಾಹುತ: ಮಡೇರಹಳ್ಳಿ ನರ್ಸರಿ ಹಿಂಭಾಗದ ಅಂತರಗಂಗೆ ಬೆಟ್ಟದಲ್ಲಿ ಸೋಮವಾರ ಮಧ್ಯಾಹ್ನ ಅಗ್ನಿ ಅನಾಹುತ ಸಂಭವಿಸಿ, ಸುಮಾರು 20 ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದೆ. ಅರಣ್ಯದಲ್ಲಿ ಹುಲ್ಲಿಗೆ ಬೆಂಕಿ ಹೊತ್ತಿಕೊಂಡಿದೆ. ನಂತರ ಅಕ್ಕಪಕ್ಕದ ಮರಗಳಿಗೆ ಬೆಂಕಿ ವ್ಯಾಪಿಸಿದೆ.

ಬಳಿಕ ಅರಣ್ಯ ಕಾವಲುಗಾರರು ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !