ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರದಲ್ಲಿ ಬತ್ತಿದ ಜೀವಸೆಲೆ: ನೀರಿಗೆ ಹಾಹಾಕಾರ

ವರುಣ ದೇವನ ಅವಕೃಪೆ: ಬೇಸಿಗೆ ಬೆನ್ನಲ್ಲೇ ಜನರಿಗೆ ಜಲಕ್ಷಾಮದ ಬಿಸಿ
Last Updated 29 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಕೋಲಾರ: ಬೇಸಿಗೆ ಆರಂಭದ ಬೆನ್ನಲ್ಲೇ ನಗರದಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ. ಕೊಳವೆ ಬಾವಿಗಳಲ್ಲಿ ಜೀವಸೆಲೆ ಬತ್ತಿದ್ದು, ಜನರಿಗೆ ಜಲಕ್ಷಾಮದ ಬಿಸಿ ತಟ್ಟಲಾರಂಭಿಸಿದೆ.

30 ಚದರ ಕಿ.ಮೀ ವಿಸ್ತಾರವಾಗಿರುವ ನಗರದಲ್ಲಿ 35 ವಾರ್ಡ್‌ಗಳಿದ್ದು, ಜನಸಂಖ್ಯೆ 2 ಲಕ್ಷದ ಗಡಿ ದಾಟಿದೆ. ನಗರ ವಿಸ್ತಾರವಾದಂತೆ ಜನಸಂಖ್ಯೆ ವೃದ್ಧಿಸುತ್ತಿದೆ. ಇದಕ್ಕೆ ಅನುಗುಣವಾಗಿ ನೀರಿಗೆ ಬೇಡಿಕೆ ಹೆಚ್ಚುತ್ತಿದೆ. ವರುಣ ದೇವನ ಅವಕೃಪೆಗೆ ತುತ್ತಾಗಿರುವ ನಗರದಲ್ಲಿ ಜೀವಜಲಕ್ಕಾಗಿ ದಿನ ಬೆಳಗಾದರೆ ದೊಡ್ಡ ಕಾದಾಟವೇ ನಡೆಯುತ್ತಿದೆ.

ನಗರದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನದಿ, ಹೊಳೆಯಂತಹ ಮೇಲ್ಮೈ ನೀರಿನ ಮೂಲಗಳಿಲ್ಲ. ಹೀಗಾಗಿ ನಗರಕ್ಕೆ ಕೊಳವೆ ಬಾವಿಗಳ ನೀರನ್ನೇ ನೆಚ್ಚಿಕೊಳ್ಳಲಾಗಿದೆ. ಸತತ ಬರದಿಂದ ನಗರದೊಳಗಿನ ಹಾಗೂ ಹೊರವಲಯದ ಕೊಳವೆ ಬಾವಿಗಳಲ್ಲಿ ಜೀವಸೆಲೆ ಬತ್ತಿದೆ. ನಗರಸಭೆಯ 255 ಕೊಳವೆ ಬಾವಿಗಳ ಪೈಕಿ 165 ಸುಸ್ಥಿತಿಯಲ್ಲಿವೆ. ಸುಮಾರು 130 ಕೊಳವೆ ಬಾವಿಗಳಲ್ಲಿ ನೀರು ಬತ್ತಿದೆ.

ಸೂಕ್ತ ನಿರ್ವಹಣೆ ಇಲ್ಲದೆ ಕೆಲ ಕೊಳವೆ ಬಾವಿಗಳ ಪಂಪ್ ಹಾಗೂ ಮೋಟರ್‌ಗಳು ಕೆಟ್ಟಿದ್ದು, ನೀರು ಸರಬರಾಜು ಪ್ರಕ್ರಿಯೆ ಹಳ್ಳ ಹಿಡಿದಿದೆ. ಪಂಪ್‌ ಮತ್ತು ಮೋಟರ್‌ಗಳನ್ನು ರಿಪೇರಿ ಮಾಡದ ಕಾರಣ ನೀರಿನ ಕೃತಕ ಅಭಾವ ಸೃಷ್ಟಿಯಾಗಿದೆ.

ಕುಡಿಯಲು ಯೋಗ್ಯವಲ್ಲ: ನಗರದಲ್ಲಿ ಸದ್ಯ 35 ಸಾವಿರ ನಲ್ಲಿ ಸಂಪರ್ಕಗಳಿವೆ. ಕೊಳವೆ ಬಾವಿಗಳಿಂದ ನಲ್ಲಿಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಅಂತರ್ಜಲ ಮಟ್ಟ 1,500 ಅಡಿಗಿಂತಲೂ ಆಳಕ್ಕೆ ಕುಸಿದಿದ್ದು, ಇಷ್ಟು ಆಳದಿಂದ ತೆಗೆದ ನೀರು ವಿಷಕಾರಿ ಫ್ಲೋರೈಡ್‌ ಅಂಶದಿಂದ ಕೊಡಿರುತ್ತದೆ. ಹೀಗಾಗಿ ಈ ನೀರು ಕುಡಿಯುವುದಕ್ಕೆ ಯೋಗ್ಯವಲ್ಲ.

ಕೊಳವೆ ಬಾವಿ ನೀರಿನಲ್ಲಿ ಫ್ಲೋರೈಡ್‌, ನೈಟ್ರೇಟ್‌, ಆರ್ಸೆನಿಕ್‌, ಕಬ್ಬಿಣ, ಕ್ಲೋರೈಡ್‌ನಂತಹ ವಿಷಕಾರಿ ಅಂಶ ಹೆಚ್ಚಿನ ಪ್ರಮಾಣದಲ್ಲಿರುವ ವೈಜ್ಞಾನಿಕ ಪರಿಶೀಲನೆಯಿಂದ ದೃಢಪಟ್ಟಿದೆ. ಹೀಗಾಗಿ ಈ ನೀರು ಕುಡಿಯಲು ಯೋಗ್ಯವಲ್ಲ. ನಗರವಾಸಿಗಳು ಅನಿವಾರ್ಯವಾಗಿ ಈ ನೀರನ್ನೇ ಬಳಸುತ್ತಿದ್ದು, ವಿಷಕಾರಿ ಫ್ಲೋರೈಡ್‌ ಅಂಶ ಸದ್ದಿಲ್ಲದೆ ದೇಹ ಸೇರುತ್ತಿದೆ.

ಟ್ಯಾಂಕರ್‌ ನೀರು: ಬಹುಪಾಲು ಬಡಾವಣೆಗಳಲ್ಲಿ ನೀರು ಸರಬರಾಜಿಗೆ ಕೊಳವೆ ಮಾರ್ಗ (ಪೈಪ್‌ಲೈನ್‌), ನೆಲಮಟ್ಟದ ಸಂಪ್‌ ಮತ್ತು ಓವರ್‌ಹೆಡ್‌ ಟ್ಯಾಂಕ್‌ಗಳಿಲ್ಲ. ಅಂತರ್ಜಲ ಮಟ್ಟ ಕುಸಿದಿದ್ದು, 1,800 ಅಡಿ ಆಳ ಕೊಳವೆ ಬಾವಿ ಕೊರೆದರೂ ನೀರು ಸಿಗುವುದು ಕಷ್ಟ. ಹೀಗಾಗಿ ಜನರು ನಗರಸಭೆಯ ಟ್ಯಾಂಕರ್‌ ನೀರಿನ ಮೇಲೆ ಅವಲಂಬಿತರಾಗಿದ್ದಾರೆ.

ನೀರಿನ ಸಮಸ್ಯೆ ಗಂಭೀರವಾಗಿರುವ ವಾರ್ಡ್‌ಗಳಿಗೆ ನಗರಸಭೆಯ 9 ಟ್ಯಾಂಕರ್‌ಗಳ ಮೂಲಕ ಪ್ರತಿನಿತ್ಯ ಸುಮಾರು 36 ಲೋಡ್‌ ನೀರು ಪೂರೈಸಲಾಗುತ್ತಿದೆ. ನಗರಸಭೆಯ ಕೊಳವೆ ಬಾವಿಗಳಲ್ಲಿ ನೀರು ಬತ್ತಿರುವುದರಿಂದ ಈ ಟ್ಯಾಂಕರ್‌ಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಪಡೆಯಲಾಗುತ್ತಿದೆ. ಖಾಸಗಿ ಕೊಳವೆ ಬಾವಿ ಮಾಲೀಕರಿಗೆ ಪ್ರತಿ ಲೋಡ್‌ಗೆ ₹ 150 ಹಣ ಪಾವತಿಸಲಾಗುತ್ತಿದೆ. ನೀರು ಸರಬರಾಜು ಪ್ರಕ್ರಿಯೆಯಲ್ಲಿನ ಅಕ್ರಮ ತಡೆಗಾಗಿ ನಗರಸಭೆಯ ಪ್ರತಿ ಟ್ಯಾಂಕರ್‌ಗೆ ಜಿಪಿಎಸ್‌ ಉಪಕರಣ ಅಳವಡಿಸಲಾಗಿದೆ.

ನಗರಸಭೆಯು ಇ–ಟೆಂಡರ್‌ನಡಿ ಖಾಸಗಿ ಟ್ಯಾಂಕರ್‌ ಮಾಲೀಕರ ಮೂಲಕ ದಿನಕ್ಕೆ ಸದ್ಯ 60 ಲೋಡ್‌ ನೀರು ಸರಬರಾಜು ಮಾಡಿಸುತ್ತಿದೆ. ಖಾಸಗಿ ಟ್ಯಾಂಕರ್‌ ಮಾಲೀಕರಿಗೆ ಪ್ರತಿ ಲೋಡ್ ನೀರಿಗೆ ₹ 575 ದರ ನಿಗದಿಪಡಿಸಲಾಗಿದೆ. ನೀರಿನ ಸಮಸ್ಯೆ ದಿನೇದಿನೇ ಗಂಭೀರವಾಗುತ್ತಿರುವ ಕಾರಣ ಹೆಚ್ಚುವರಿಯಾಗಿ 11 ಖಾಸಗಿ ಟ್ಯಾಂಕರ್‌ಗಳನ್ನು ಗುತ್ತಿಗೆಗೆ ಪಡೆದು ದಿನಕ್ಕೆ 25 ಲೋಡ್‌ ನೀರು ಕೊಡಲು ಜಿಲ್ಲಾಡಳಿತ ಅನುಮೋದನೆ ನೀಡಿದ್ದು, ಈ ಸೇವೆ ಸದ್ಯದಲ್ಲೇ ಆರಂಭವಾಗಲಿದೆ.

ನೀರು ಕೊಡಲು ಹಿಂದೇಟು: ಕೃಷಿ ಹಾಗೂ ಗೃಹ ಬಳಕೆ ಉದ್ದೇಶಕ್ಕೆಂದು ಕೊಳವೆ ಬಾವಿಗಳಿಗೆ ವಿದ್ಯುತ್‌ ಸಂಪರ್ಕ ಪಡೆದಿದ್ದ ರೈತರು ಮತ್ತು ಖಾಸಗಿ ಕೊಳವೆ ಬಾವಿ ಮಾಲೀಕರು ಹಣ ಸಂಪಾದನೆಗಾಗಿ ಕಳ್ಳ ದಾರಿ ಹಿಡಿದಿದ್ದರು. ನಗರಸಭೆ ಹಾಗೂ ಖಾಸಗಿ ಟ್ಯಾಂಕರ್‌ ಮಾಲೀಕರಿಂದ ಹಣ ಪಡೆದು ನೀರು ಮಾರಾಟ ಮಾಡುತ್ತಿದ್ದರು.

ಈ ಸಂಗತಿ ತಿಳಿದ ಬೆಸ್ಕಾಂ ಜಾಗೃತ ದಳವು ವಿದ್ಯುತ್‌ ಕಳವಿಗೆ ಕಡಿವಾಣ ಹಾಕುವ ಉದ್ದೇಶಕ್ಕಾಗಿ ನಾಲ್ಕೈದು ದಿನಗಳ ಹಿಂದೆ ಅನಧಿಕೃತ ವಿದ್ಯುತ್‌ ಸಂಪರ್ಕದ ಕೊಳವೆ ಬಾವಿಗಳ ಮೇಲೆ ದಾಳಿ ನಡೆಸಿ ಮಾಲೀಕರಿಗೆ ದಂಡ ವಿಧಿಸಿದ್ದರು. ಬೆಸ್ಕಾಂ ಅಧಿಕಾರಿಗಳ ಶಿಸ್ತುಕ್ರಮಕ್ಕೆ ಬೆದರಿರುವ ರೈತರು ಹಾಗೂ ಖಾಸಗಿ ಕೊಳವೆ ಬಾವಿ ಮಾಲೀಕರು ನಗರಸಭೆಯ ಹಾಗೂ ಖಾಸಗಿಯವರ ಟ್ಯಾಂಕರ್‌ಗಳಿಗೆ ನೀರು ಕೊಡಲು ಹಿಂದೇಟು ಹಾಕುತ್ತಿದ್ದು, ಹಣ ಕೊಟ್ಟರು ನೀರು ಸಿಗದ ಪರಿಸ್ಥಿತಿ ಸೃಷ್ಟಿಯಾಗಿದೆ.

ವಾಣಿಜ್ಯ ಉದ್ದೇಶದ ಕೊಳವೆ ಬಾವಿ ಮಾಲೀಕರು ಪರಿಸ್ಥಿತಿಯ ಲಾಭ ಪಡೆದು ಏಕಾಏಕಿ ನೀರಿನ ದರ ಹೆಚ್ಚಿಸಿದ್ದಾರೆ. ಟ್ಯಾಂಕರ್ ಮಾಲೀಕರು ಅನಿವಾರ್ಯವಾಗಿ ದುಪ್ಪಟ್ಟು ಹಣ ಕೊಟ್ಟು ನೀರು ಖರೀದಿಸುವಂತಾಗಿದೆ. ನೀರಿನ ಖರೀದಿ ದರ ಹೆಚ್ಚಳಕ್ಕೆ ಅನುಗುಣವಾಗಿ ಟ್ಯಾಂಕರ್ ಮಾಲೀಕರು ಮಾರಾಟದ ದರ ಹೆಚ್ಚಿಸಿದ್ದಾರೆ. ತಿಂಗಳ ಹಿಂದೆ ₹ 400 ಇದ್ದ ಟ್ಯಾಂಕರ್‌ ಲೋಡ್‌ ನೀರಿನ ಬೆಲೆ ಇದೀಗ ₹ 600ಕ್ಕೆ ಜಿಗಿದಿದೆ. ಇದರಿಂದ ನಗರವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದು, ದುಡಿಮೆಯ ಬಹುಪಾಲು ಹಣವನ್ನು ನೀರಿಗೆ ಖರ್ಚು ಮಾಡುವಂತಾಗಿದೆ.

ಅಂಕಿ ಅಂಶ
* 30 ಚದರ ಕಿ.ಮೀ ನಗರದ ವಿಸ್ತಾರ

* 35 ವಾರ್ಡ್‌ಗಳು

* 2 ಲಕ್ಷದ ಗಡಿ ದಾಟಿದ ಜನಸಂಖ್ಯೆ

* 35 ಸಾವಿರ ನಲ್ಲಿ ಸಂಪರ್ಕಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT