ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ನೀರಿನ ಘಟಕಗಳು ಸ್ಥಗಿತ, ಜೀವಜಲಕ್ಕೆ ಹಾಹಾಕಾರ

ಏಜೆನ್ಸಿ–ಕೆಯುಡಬ್ಲ್ಯೂಎಸ್‌ಡಿಬಿ ನಡುವೆ ಹಗ್ಗ ಜಗ್ಗಾಟ: ನೀರಿಗೆ ನಗರವಾಸಿಗಳ ಅಲೆದಾಟ
Last Updated 23 ಜನವರಿ 2022, 19:30 IST
ಅಕ್ಷರ ಗಾತ್ರ

ಕೋಲಾರ: ನಗರವಾಸಿಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶಕ್ಕೆ ಆರಂಭಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ ಬಹುತೇಕ ಘಟಕಗಳು ಸ್ಥಗಿತಗೊಂಡಿದ್ದು, ಬೇಸಿಗೆ ಆರಂಭಕ್ಕೂ ಮುನ್ನವೇ ನಗರದಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ.

ಸುಮಾರು 30 ಚದರ ಕಿ.ಮೀ ವಿಸ್ತಾರವಾಗಿರುವ ನಗರದಲ್ಲಿ ಸದ್ಯ 35 ವಾರ್ಡ್‌ಗಳಿದ್ದು, ಜನಸಂಖ್ಯೆ 2 ಲಕ್ಷ ಮೀರಿ ಬೆಳೆದಿದೆ. ನಗರ ವಿಸ್ತಾರವಾದಂತೆ ಜನಸಂಖ್ಯೆ ವೃದ್ಧಿಸುತ್ತಿದ್ದು, ಇದಕ್ಕೆ ಅನುಗುಣವಾಗಿ ನೀರಿಗೆ ಬೇಡಿಕೆ ಹೆಚ್ಚುತ್ತಿದೆ.

ನಗರದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನದಿ, ಹೊಳೆಯಂತಹ ಮೇಲ್ಮೈ ನೀರಿನ ಮೂಲಗಳಿಲ್ಲ. ಹೀಗಾಗಿ ನಗರಕ್ಕೆ ಕೊಳವೆ ಬಾವಿಗಳ ನೀರನ್ನೇ ನೆಚ್ಚಿಕೊಳ್ಳಲಾಗಿದೆ. ಸರ್ಕಾರದ ನಿಯಮದ ಪ್ರಕಾರ ಪ್ರತಿ ವ್ಯಕ್ತಿಗೆ ದಿನಕ್ಕೆ 135 ಲೀಟರ್‌ ಶುದ್ಧ ಕುಡಿಯುವ ನೀರು ಕೊಡಬೇಕು. ಆದರೆ, ನಗರದಲ್ಲಿ ಅರ್ಧಕ್ಕೂ ಕಡಿಮೆ ಅಂದರೆ 35 ಲೀಟರ್‌ ಮಾತ್ರ ನೀರು ಕೊಡಲಾಗುತ್ತಿದೆ.

ನಗರವಾಸಿಗಳಿಗೆ ಆದಷ್ಟು ಕಡಿಮೆ ದರದಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವುದಕ್ಕಾಗಿ ಅಟಲ್‌ ನಗರ ಪುನರುತ್ಥಾನ ಹಾಗೂ ನಗರ ಪರಿವರ್ತನಾ ಯೋಜನೆಯಡಿ (ಅಮೃತ್‌) 35 ವಾರ್ಡ್‌ನಲ್ಲೂ ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣಕ್ಕೆ ನಗರಸಭೆ ಅನುಮೋದನೆ ನೀಡಿತ್ತು. ಆದರೆ, ಘಟಕ ನಿರ್ಮಾಣಕ್ಕೆ 2 ವಾರ್ಡ್‌ನಲ್ಲಿ ಸರ್ಕಾರಿ ಜಾಗ ಲಭ್ಯವಾಗದ ಕಾರಣ 33 ವಾರ್ಡ್‌ಗಳಲ್ಲಿ ಘಟಕ ನಿರ್ಮಿಸಲಾಗಿದೆ.

ಏಜೆನ್ಸಿಗೆ ಜವಾಬ್ದಾರಿ: ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (ಕೆಯುಡಬ್ಲ್ಯೂಎಸ್‌ಡಿಬಿ) ಪ್ರತಿ ಘಟಕವನ್ನು ಸುಮಾರು ₹ 11 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಿಸಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿದೆ. ಪ್ರತಿ ಘಟಕವು ಗಂಟೆಗೆ 2 ಸಾವಿರ ಲೀಟರ್‌ ನೀರು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿವೆ. ಘಟಕಗಳ ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿ ಏಜೆನ್ಸಿಗೆ ವಹಿಸಲಾಗಿದೆ. ಏಜೆನ್ಸಿಯವರು ವಾರ್ಡ್‌ಗಳಲ್ಲಿನ ನಗರಸಭೆ ಕೊಳವೆ ಬಾವಿಗಳಿಂದ ಘಟಕಗಳಿಗೆ ನೀರಿನ ಸಂಪರ್ಕ ಪಡೆದಿದ್ದಾರೆ. ಘಟಕಗಳಲ್ಲಿ ಎಟಿಎಂ ರೀತಿಯ ಸ್ವೈಪಿಂಗ್‌ ಉಪಕರಣ ಅಳವಡಿಸಲಾಗಿದೆ.

ಏಜೆನ್ಸಿಯವರು ಜನರಿಂದ ಮುಂಗಡ ಹಣ ಪಡೆದು ಎಟಿಎಂ ಕಾರ್ಡ್‌ ಮಾದರಿಯ ಸ್ವೈಪಿಂಗ್ ಕಾರ್ಡ್‌ ವಿತರಿಸಿದ್ದಾರೆ. ಸಾರ್ವಜನಿಕರು ಈ ಕಾರ್ಡ್‌ ಬಳಸಿ ಘಟಕಗಳಲ್ಲಿ ನೀರು ಪಡೆಯಬಹುದು. ಪ್ರತಿ ಬಾರಿ ಕಾರ್ಡ್‌ ಬಳಸಿದಾಗ ಹಣವು ಏಜೆನ್ಸಿಯ ಖಾತೆಗೆ ವರ್ಗಾವಣೆಯಾಗುತ್ತದೆ. ಒಂದು ಬಾರಿಗೆ ₹ 5 ಕಡಿತಗೊಂಡು 20 ಲೀಟರ್‌ ನೀರು ಬರುತ್ತದೆ.

ನಿರ್ವಹಣೆ ನಿರ್ಲಕ್ಷ್ಯ: ನೀರಿನ ಘಟಕಗಳು ದಿನದ 24 ತಾಸೂ ಕಾರ್ಯ ನಿರ್ವಹಿಸಬೇಕು. ಕೆಯುಡಬ್ಲ್ಯೂಎಸ್‌ಡಿಬಿಯು ಏಜೆನ್ಸಿಯವರಿಗೆ ಸೇವಾ ಶುಲ್ಕ ಪಾವತಿಸಿಲ್ಲ. ಕೆಲ ವಾರ್ಡ್‌ಗಳ ಕೊಳವೆ ಬಾವಿಗಳಲ್ಲಿ ನೀರು ಲಭ್ಯವಿದ್ದರೂ ಸ್ಥಳೀಯ ವಾಲ್‌ಮನ್‌ಗಳು ಘಟಕಗಳಿಗೆ ನೀರು ಪೂರೈಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಏಜೆನ್ಸಿ ಪ್ರತಿನಿಧಿಗಳು ಘಟಕಗಳ ನಿರ್ವಹಣೆ ನಿರ್ಲಕ್ಷಿಸಿದ್ದು, ಸಾಕಷ್ಟು ಘಟಕಗಳು ಸ್ಥಗಿತಗೊಂಡಿವೆ.

ಕೆಲ ಘಟಕಗಳಲ್ಲಿ ಸಾರ್ವಜನಿಕರು ಸ್ವೈಪಿಂಗ್ ಕಾರ್ಡ್‌ ಬಳಸಿದಾಗ ಹಣ ಕಡಿತಗೊಳ್ಳುತ್ತಿದ್ದು, ನೀರು ಮಾತ್ರ ಬರುತ್ತಿಲ್ಲ. ಈ ಬಗ್ಗೆ ಸ್ಥಳೀಯರು ಕೆಯುಡಬ್ಲ್ಯೂಎಸ್‌ಡಿಬಿ ಮತ್ತು ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದರೂ ಸಮಸ್ಯೆ ಬಗೆಹರಿದಿಲ್ಲ. ಏಜೆನ್ಸಿಯವರನ್ನು ನಂಬಿ ಹಣ ಪಾವತಿಸಿದ ನಗರವಾಸಿಗಳಿಗೆ ನೀರೂ ಇಲ್ಲ, ಹಣವೂ ಇಲ್ಲ ಎಂಬಂತಾಗಿದೆ.

ಆರ್ಥಿಕ ಹೊರೆ: ನಗರವಾಸಿಗಳ ಬಳಿ ನೀರಿನ ಘಟಕದ ಕಾರ್ಡ್‌ ಇದ್ದರೂ ಖಾಸಗಿ ಟ್ಯಾಂಕರ್‌ ಮಾಲೀಕರಿಗೆ ದುಪ್ಪಟ್ಟು ಹಣ ಕೊಟ್ಟು ನೀರು ಖರೀದಿಸುವ ತೊಂದರೆ ತಪ್ಪಿಲ್ಲ. ಖಾಸಗಿ ಟ್ಯಾಂಕರ್‌ ಮಾಲೀಕರಿಂದ ನೀರು ಖರೀದಿಸುವುದು ಜನಸಾಮಾನ್ಯರಿಗೆ ಆರ್ಥಿಕ ಹೊರೆಯಾಗಿದೆ.

ಬಡ ಜನರು ನೀರು ಖರೀದಿಸಲಾಗದೆ ಸ್ಥಳೀಯ ಕೊಳವೆ ಬಾವಿಗಳಲ್ಲಿ ಸಿಗುವ ಹಾಗೂ ನಗರಸಭೆಯ ನಲ್ಲಿಗಳಲ್ಲಿ ಬರುವ ನೀರನ್ನೇ ಕುಡಿಯುವ ಉದ್ದೇಶಕ್ಕೆ ಬಳಸುತ್ತಿದ್ದಾರೆ. ಕೆಲ ಬಡಾವಣೆ ನಿವಾಸಿಗಳು ಅಕ್ಕಪಕ್ಕದ ಬಡಾವಣೆಗಳ ಘಟಕಗಳಿಂದ ನೀರು ತೆಗೆದುಕೊಂಡು ಹೋಗುವುದು ಸಾಮಾನ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT