ಕೋಲಾರದಲ್ಲಿ ಸಿದ್ದರಾಮಯ್ಯರನ್ನು ಎದುರಿಸಲು ಸಿದ್ಧ: ಸಚಿವ ಮುನಿರತ್ನ

ಕೋಲಾರ: ‘ಎರಡು ಬಾರಿ ಶಾಸಕ, ಒಮ್ಮೆ ಸಚಿವರು ಆಗಿರುವ ವರ್ತೂರು ಪ್ರಕಾಶ್ ಒಳ್ಳೆಯವರು ಎಂಬುದು ನಮಗೂ ಗೊತ್ತಿದೆ. ಈ ಬಗ್ಗೆ ನಮಗೆ ಜೆಡಿಎಸ್ ರಾಜ್ಯ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರ ಪ್ರಮಾಣಪತ್ರ ಬೇಡ. ನಿಜ ಹೇಳಿರುವ ಅವರಿಗೆ ಧನ್ಯವಾದ ಹೇಳೋಣ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ
ಹೇಳಿದರು.
ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೋಲಾರದಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಲೋಕಸಭೆ ಸದಸ್ಯ ಮುನಿಸ್ವಾಮಿ ಹೆಚ್ಚು ಮತಗಳಿಂದ ಗೆಲ್ಲಲಿಲ್ಲವೇ? ಈ ಬಾರಿ ವಿಧಾನಸಭಾ ಚುನಾವಣೆಯಲ್ಲೂ ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರ ಕೋಲಾರಕ್ಕೆ ಭೇಟಿ ನೀಡಿದ್ದ ಜೆಡಿಎಸ್ ರಾಜ್ಯ ಅಧ್ಯಕ್ಷ ಸಿ.ಎಂ.ಇಬ್ರಾಹಿಂ, ಸಿದ್ದರಾಮಯ್ಯ ಅವರನ್ನು ಟೀಕಿಸುತ್ತಾ ಬಿಜೆಪಿ ಟಿಕೆಟ್ ಆಕಾಂಕ್ಷಿ ವರ್ತೂರು ಪ್ರಕಾಶ್ ಅವರನ್ನು ಹೊಗಳಿದ್ದಕ್ಕೆ ಮುನಿರತ್ನ ಈ ರೀತಿ ಪ್ರತಿಕ್ರಿಯಿಸಿದರು.
ಕೋಲಾರದಲ್ಲಿ ಸಿದ್ದರಾಮಯ್ಯ ಅವರನ್ನು ಎದುರಿಸಲು ಯೋಜನೆ ರೂಪಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಮುನಿರತ್ನ, ‘ಸಿದ್ದರಾಮಯ್ಯ ಎದುರಿಸಲು ನಮಗೆ ಯಾವುದೇ ಯೋಜನೆ ಬೇಡ. ಚಾಮುಂಡೇಶ್ವರಿಯಲ್ಲಿ ಅವರನ್ನು ಸೋಲಿಸಲು ಏನಾದರೂ ವಿಶೇಷ ಯೋಜನೆ ರೂಪಿಸಿದ್ದೆವಾ? ಅಲ್ಲಿ 36 ಸಾವಿರಕ್ಕೂ ಅಧಿಕ ಮತಗಳಿಂದ ಸೋತರು. 500 ಮತಗಳು ವ್ಯತ್ಯಾಸವಾಗಿದ್ದರೆ ಬಾದಾಮಿಯಲ್ಲೂ ಸೋಲುತ್ತಿದ್ದರು’
ಎಂದರು.
‘ಎಚ್.ಡಿ.ಕುಮಾರಸ್ವಾಮಿ ಕೆಲವೊಮ್ಮೆ ಚೆನ್ನಾಗಿ ಭವಿಷ್ಯ ನುಡಿಯುತ್ತಾರೆ. ಅವು ನಿಜವೂ ಆಗಿದೆ. ಮುಖ್ಯಮಂತ್ರಿಯಾಗಿ ಹೆಚ್ಚು ದಿನ ಇರಲ್ಲ ಎಂಬ ಮಾತನಾಡಿದ್ದರು. ಅದು ನಿಜವೂ ಆಯಿತು. ಹೀಗಾಗಿ, ಸಿದ್ದರಾಮಯ್ಯ ಕುರಿತು ಹರಕೆ ಕುರಿ ಎಂಬುದಾಗಿ ಅವರು ಹೇಳಿರುವುದು ಸರಿಯಾಗಿಯೇ ಇದೆ’ ಎಂದು
ವ್ಯಂಗ್ಯವಾಡಿದರು.
ವಲಸೆ ಶಾಸಕರನ್ನು ವೇಶ್ಯೆಯರು ಎಂಬರ್ಥದಲ್ಲಿ ಮಾತನಾಡಿರುವ ಬಿ.ಕೆ.ಹರಿಪ್ರಸಾದ್ ಅವರಿಗೆ ತಿರುಗೇಟು ನೀಡಿ, ‘ಹರಿಪ್ರಸಾದ್ ಅವರಿಗೆ ಕರ್ನಾಟಕದ ರಾಜಕಾರಣ ಸಂಪೂರ್ಣವಾಗಿ ಗೊತ್ತಿಲ್ಲ. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಜೊತೆ ಕೆಲಸ ಮಾಡುತ್ತಾ ದೆಹಲಿಯಲ್ಲೇ ಹೆಚ್ಚು ಸಮಯ ಕಳೆದವರು. ಸುಮಾರು 40 ವರ್ಷ ರಾಷ್ಟ್ರ ರಾಜಕಾರಣದಲ್ಲಿ ಇದ್ದವರು. ಈಗ ತವರೂರು ಕರ್ನಾಟಕಕ್ಕೆ ಬಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿದ್ದಾರೆ’
ಎಂದರು.
ಸಂಸದ ಎಸ್.ಮುನಿಸ್ವಾಮಿ, ಮಾಜಿ ಸಚಿವ ವರ್ತೂರು ಆರ್.ಪ್ರಕಾಶ್, ಶಾಸಕರಾದ ಮಂಜುನಾಥ್ ಗೌಡ, ವೈ.ಸಂಪಂಗಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಡಾ.ವೇಣುಗೋಪಾಲರಾವ್, ಮುಖಂಡ ಓಂಶಕ್ತಿ ಚಲಪತಿ, ವಕ್ತಾರ ವೆಂಕಟಮುನಿಯಪ್ಪ
ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.